ಮಂಡ್ಯದಲ್ಲಿ ಇನ್ನೂ ನಿಲ್ಲದ ಭ್ರೂಣ ಲಿಂಗ ಪತ್ತೆ, ಹತ್ಯೆ – ಹೆಲ್ತ್‌ ಕ್ವಾಟರ್ಸ್‌ನಲ್ಲೇ ದುಷ್ಕೃತ್ಯ ಬೆಳಕಿಗೆ!

ಮಂಡ್ಯದಲ್ಲಿ ಇನ್ನೂ ನಿಲ್ಲದ ಭ್ರೂಣ ಲಿಂಗ ಪತ್ತೆ, ಹತ್ಯೆ – ಹೆಲ್ತ್‌ ಕ್ವಾಟರ್ಸ್‌ನಲ್ಲೇ ದುಷ್ಕೃತ್ಯ ಬೆಳಕಿಗೆ!

ಕಳೆದ ಕೆಲವು ತಿಂಗಳ ಹಿಂದಷ್ಟೇ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಭ್ರೂಣಲಿಂಗ ಪತ್ತೆ ಭಾರಿ ಸದ್ದು ಮಾಡಿತ್ತು. ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ನಡೆಸುತ್ತಿದ್ದ ದೊಡ್ಡ ಜಾಲವನ್ನು ಪತ್ತೆ ಹಚ್ಚಿ ಹಲವರನ್ನು ಅರೆಸ್ಟ್‌ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಂಡ್ಯದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಗರ್ಭಪಾತಕ್ಕೆ ಬಂದಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮಗ ವಿದೇಶದಲ್ಲಿ.. ತಂದೆ ಜೈಲಿನಲ್ಲಿ! – ವಿಚಾರಣೆ ವೇಳೆಯೂ ಕೈಯ್ಯಲ್ಲಿ 3 ನಿಂಬೆಹಣ್ಣು ಹಿಡಿದಿದ್ದ ರೇವಣ್ಣ!

ಪಾಂಡವಪುರ ಆರೋಗ್ಯ ಇಲಾಖೆ ಕ್ವಾರ್ಟರ್ಸ್​ನಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಡೆಸಲಾಗುತ್ತಿದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಅರವಿಂದ್ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗರ್ಭಪಾತಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ದಾಳಿ ವೇಳೆ ಗರ್ಭಪಾತ ಮಾಡುವ ಯಂತ್ರೋಪಕರಣಗಳು ‌ಜಪ್ತಿ ಮಾಡಲಾಗಿದ್ದು, ಈ  ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಂಡವಪುರ ತಾಲೂಕು ಆಸ್ಪತ್ರೆ ಆ್ಯಂಬುಲೆನ್ಸ್​ ಚಾಲಕ ಆನಂದ್, ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್ ಸಿಬ್ಬಂದಿ ಅಶ್ವಿನಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಆನಂದ್​ಗೆ ನೀಡಲಾಗಿದ್ದ ಸರ್ಕಾರಿ ನಿವಾಸದಲ್ಲೇ ಕೃತ್ಯ ಎಸಗಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತಡರಾತ್ರಿ ದಾಳಿ ಮಾಡಿದ್ದಾರೆ. ಈ ದಂಧೆಯಲ್ಲಿ ಕೆಲವು ವೈದ್ಯಾಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ದಾಖಲಾಗಿದೆ.

Shwetha M