ಭಾರತಕ್ಕೆ ದೊಡ್ಡ ಗೆಲುವು – ಬೇಹುಗಾರಿಕೆ ಆರೋಪದ ಮೇಲೆ ಮರಣ ದಂಡನೆಗೊಳಗಾಗಿದ್ದ 8 ನೌಕಾಪಡೆ ಯೋಧರ ಬಿಡುಗಡೆ

ಭಾರತಕ್ಕೆ ದೊಡ್ಡ ಗೆಲುವು – ಬೇಹುಗಾರಿಕೆ ಆರೋಪದ ಮೇಲೆ ಮರಣ ದಂಡನೆಗೊಳಗಾಗಿದ್ದ 8 ನೌಕಾಪಡೆ ಯೋಧರ ಬಿಡುಗಡೆ

ಭಾರತ ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಗೂಢಚರ್ಯೆ ಪ್ರಕರಣದಲ್ಲಿ ಕತಾರ್‌ ಜೈಲಿನಲ್ಲಿದ್ದ ಎಂಟು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ.

ಕತಾರ್ ವಿರುದ್ಧ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಮಧ್ಯಪ್ರಾಚ್ಯದ ಈ ಸಣ್ಣ ದೇಶದ ಜೈಲಿನಲ್ಲಿ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಮಾತ್ರವಲ್ಲ ಅಲ್ಲಿನ ಕೋರ್ಟ್​ ಅವರಿಗೆ ಮರಣದಂಡನೆ ಶಿಕ್ಷೆಯನ್ನೂ ಪ್ರಕಟಿಸಿತ್ತು. ನಂತರ ಅವರ ಬಿಡುಗಡೆ ಕಷ್ಟವಾಗಿತ್ತು. ಕತಾರ್ ಕೋರ್ಟ್​​ ನಿರ್ಧಾರವನ್ನು ಭಾರತ ಖಂಡಿಸಿತ್ತು. ಗಲ್ಫ್ ದೇಶದ ಕೋರ್ಟ್ ಮರಣದಂಡನೆ ಘೋಷಿಸಿದಾಗ ಭಾರತವು ತನ್ನ ರಾಜತಾಂತ್ರಿಕ ಚಾಣಾಕ್ಷತೆಯನ್ನು ಪ್ರದರ್ಶಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಡಿಸೆಂಬರ್ 28, 2023 ರಂದು ಭಾರತದ ಮನವಿಯನ್ನು ಗಮನದಲ್ಲಿಟ್ಟುಕೊಂಡು ಎಂಟು ನಾಗರಿಕರಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಗೆ ತಡೆ ಸಿಕ್ಕಿತ್ತು. ಇದೀಗ ಬಿಡುಗಡೆಯಾಗಿ ಮನೆಗೆ ವಾಪಸ್ ಆಗಿದ್ದಾರೆ. ಈ ಪೈಕಿ ಏಳು ನಾವಿಕರು ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: 15 ಕ್ಕಿಂತ ಹೆಚ್ಚು ದಿನ ಫುಟ್‌ಪಾತ್‌, ರಸ್ತೆಗಳಲ್ಲಿ ಪಾರ್ಕ್‌ ಮಾಡಿದ್ರೆ ವಾಹನ ಹರಾಜು ಆಗುತ್ತೆ ಹುಷಾರ್! 

ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ. ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆ ಆಗಿದೆ. ಕತಾರ್ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಎಂಟು ಮಂದಿ ಭಾರತೀಯರಲ್ಲಿ ಏಳು ಜನರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಅವರ ಬಿಡುಗಡೆ ಮತ್ತು ಮನೆಗೆ ಮರಳುವಿಕೆ ಬಗ್ಗೆ ಕತಾರ್ ಆಡಳಿತವು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ. ಇದನ್ನು ಭಾರತ ಪ್ರಶಂಸಿಸುತ್ತದೆ ಎಂದು ತಿಳಿಸಿದೆ.

ಭಾರತೀಯರ ಕುಟುಂಬಗಳು ಅವರ ಬಿಡುಗಡೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದವು. ನಂತರ ಎಂಟು ಭಾರತೀಯರ ಬಿಡುಗಡೆಗಾಗಿ ಕತಾರ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಮಾತುಕತೆಗಳು ಶುರುವಾದವು. ಪರಿಣಾಮ ಮಾಜಿ ನಾವಿಕರ ಮರಣದಂಡನೆಯು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಕೊನೆಗೆ ಜೈಲಿನಲ್ಲಿ ಶಿಕ್ಷೆಯ ಅವಧಿಯನ್ನು ಇನ್ನಷ್ಟು ಕಡಿಮೆಗೊಳಿಸಲಾಯಿತು. ಇದೀಗ ಬಿಡುಗಡೆಗೊಂಡು ವಾಪಸ್ ಆಗಿದ್ದಾರೆ.

Shwetha M