‘ಝಾಕಿರ್ ನಾಯಕ್ ನನ್ನ ವಿಶ್ವಕಪ್ ಗೆ ಆಹ್ವಾನಿಸಿಲ್ಲ’-ಕತಾರ್ ಸರ್ಕಾರ
ಭಾರತ ಗರಂ.. ಕತಾರ್ ಕೊಟ್ಟ ಸ್ಪಷ್ಟನೆಯಲ್ಲೇನಿದೆ..?
ಕತಾರ್: ವಿವಾದಾತ್ಮಕ ಧರ್ಮ ಪ್ರಚಾರಕ,ಭಾರತದ ಮೋಸ್ಟ್ ವಾಂಟೆಡ್ಗಳಲ್ಲಿ ಒಬ್ಬನಾಗಿರುವ ಝಾಕಿರ್ ನಾಯಕ್ ಕತಾರ್ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಭೇಟಿ ನೀಡಿರೋದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕತಾರ್ ವಿಶ್ವಕಪ್ ಸಂದರ್ಭದಲ್ಲಿ ಫುಟ್ಬಾಲ್ ಅಭಿಮಾನಿಗಳನ್ನ ಉದ್ದೇಶಿಸಿ ಝಾಕಿರ್ ನಾಯಕ್ ಧಾರ್ಮಿಕ ಭಾಷಣಗಳನ್ನ ಮಾಡುತ್ತಾನೆ ಅಂತಾ ಹೇಳಲಾಗಿತ್ತು. ಝಾಕಿರ್ ನಾಯಕ್ಗೆ ಕತಾರ್ ಆಹ್ವಾನ ನೀಡಿರೋದು ಇತ್ತ ಭಾರತದ ಕಣ್ಣು ಕೆಂಪಗಾಗಿಸಿತ್ತು. ಕತಾರ್ ವಿಶ್ವಕಪ್ ಟೂರ್ನಿಯನ್ನು ಬಾಯ್ಕಾಟ್ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೂಡ ಶುರುವಾಗಿತ್ತು. ಆದರೆ ಇದೀಗ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಝಾಕಿರ್ ನಾಯಕ್ನನ್ನು ಕತಾರ್ ಸರ್ಕಾರ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿಯೇ ಇರಲಿಲ್ಲ ಅನ್ನೋ ಮಾಹಿತಿ ಹೊರ ಬಿದ್ದಿದೆ. ಭಾರತ-ಕತಾರ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಉದ್ದೇಶದಿಂದ ಇಂಥದ್ದೊಂದು ಸುಳ್ಳು ಸುದ್ದಿ ಹರಡಲಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಜೊತೆಗೆ ಝಾಕಿರ್ ನಾಯಕ್ ಖಾಸಗಿಯಾಗಿ ಕತಾರ್ಗೆ ಭೇಟಿ ನೀಡಿದ್ದಾನೆ. ಅಂತಾ ಕತಾರ್ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಝಾಕಿರ್ ನಾಯಕ್ಗೆ ಆಹ್ವಾನ ನೀಡಿದಲ್ಲಿ ಭಾರತದ ಉಪರಾಷ್ಟ್ರಪತಿಗಳ ಕತಾರ್ ಭೇಟಿಯನ್ನ ರದ್ದುಪಡಿಸಬೇಕಾಗುತ್ತದೆ ಅಂತಾ ಭಾರತ ಸರ್ಕಾರ ಖಡಕ್ ಸಂದೇಶ ರವಾನಿಸಿತ್ತು. ಉಪರಾಷ್ಟ್ರಪತಿ ಧನ್ಕರ್ ಕತಾರ್ ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಿ ಬಳಿಕ ಮರುದಿನವೇ ಕತಾರ್ನಿಂದ ಭಾರತದತ್ತ ನಿರ್ಗಮಿಸಿದ್ದರು.
2016ರಲ್ಲಿ ಭಾರತ ಸರ್ಕಾರ ದೇಶದಲ್ಲಿ ಝಾಕಿರ್ ನಾಯಕ್ನ ಚಟುವಟಿಕೆಗಳಿಗೆ ಸಂಪೂರ್ಣ ತಡೆಯೊಡ್ಡಿತ್ತು. ಆತನ ಇಸ್ಲಾಮಿಕ್ ಸಂಶೋಧನಾ ಸಂಸ್ಥೆಯನ್ನ ಭಾರತದಲ್ಲಿ ನಿಷೇಧಿಸಲಾಗಿತ್ತು. ಆತನ ‘ಪೀಸ್’ ಟಿವಿ ಚಾನಲ್ನ್ನು ಕೂಡ ಬಂದ್ ಮಾಡಲಾಗಿತ್ತು. ಪ್ರಚೋದನಾಕಾರಿ ಭಾಷಣ, ಹಿಂಸಾಚಾರಕ್ಕೆ ಕುಮ್ಮಕ್ಕು, ದೇಶವಿರೋಧಿ ಕೃತ್ಯ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಕೇಸ್ಗಳ ಅಡಿ ಝಾಕಿರ್ ನಾಯಕ್ನ ಎಲ್ಲಾ ಚಟುವಟಿಕೆಗಳಿಗೂ ಭಾರತದಲ್ಲಿ ನಿಷೇಧ ಹೇರಲಾಗಿತ್ತು. ಬಳಿಕ ಭಾರತ ಬಿಟ್ಟು ಮಲೇಷ್ಯಾಗೆ ಓಡಿ ಹೋಗಿದ್ದ ಝಾಕಿರ್ ನಾಯಕ್ ಅಲ್ಲೇ ನೆಲೆ ಕಂಡುಕೊಂಡಿದ್ದ.
ಭಾರತದಿಂದ ಎಸ್ಕೇಪ್ ಆದ ಝಾಕಿರ್ ನಾಯಕ್ಗೆ ಸೇರಿದ್ದ ಆಸ್ತಿಗಳನ್ನ ಈಗಾಗಲೇ ಮುಟ್ಟುಗೋಲು ಹಾಕಲಾಗಿದೆ. ದೇಶದಲ್ಲಿದ್ದ ಆತನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಕೂಡ ನಡೆಸಿ, ಅವ್ಯವಹಾರಗಳನ್ನು ಬಯಲಿಗೆಳೆದಿದೆ. ಮತ್ತೊಂದೆಡೆ ಝಾಕಿರ್ ನಾಯಕ್ನನ್ನ ಹಸ್ತಾಂತರಿಸುವಂತೆ ಭಾರತ ಸರ್ಕಾರ ಈಗಾಗ್ಲೇ ಮಲೇಷ್ಯಾಗೆ ಮನವಿ ಮಾಡಿದೆ. ಝಾಕಿರ್ ನಾಯಕ್ನನ್ನು ಕರೆತಂದು ಕೋರ್ಟ್ಗೆ ಒಪ್ಪಿಸಲು ಬೇಕಾದ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳು ಕೂಡ ಮುಂದುವರೆದಿದೆ. ಈ ನಡುವೆ, ಝಾಕಿರ್ ನಾಯಕ್ ಮಾತ್ರ ವಿದೇಶಗಳನ್ನು ಸುತ್ತಾಡುತ್ತಾ, ಧರ್ಮ ಪ್ರಚಾರ ಮಾಡುವುದರಲ್ಲೇ ಬ್ಯುಸಿಯಾಗಿದ್ದಾನೆ.