ಸತ್ತಿಲ್ಲ ಸಹನಾ.. ವೀಕ್ಷಕರಿಗೂ ಸವಾಲ್ – ಅಯ್ಯೋ ಪುಟ್ಟಕ್ಕ.. ನೀನೂ ಹೀಗೆನಾ..?
ಟ್ವಿಸ್ಟ್ ಕೊಡಲು ಹೋಗಿ ಕಥೆ ಮರೆತ್ರಾ?

ಸತ್ತಿಲ್ಲ ಸಹನಾ.. ವೀಕ್ಷಕರಿಗೂ ಸವಾಲ್ – ಅಯ್ಯೋ ಪುಟ್ಟಕ್ಕ.. ನೀನೂ ಹೀಗೆನಾ..?ಟ್ವಿಸ್ಟ್ ಕೊಡಲು ಹೋಗಿ ಕಥೆ ಮರೆತ್ರಾ?

ಪುಟ್ಟಕ್ಕನ ಮಕ್ಕಳು. ರೇಟಿಂಗ್‌ನಲ್ಲೂ ಟಾಪ್.. ನಟನೆಗೂ ಫುಲ್ ಮಾರ್ಕ್ಸ್. ಮಹಿಳೆಯರಿಗೆ ಸ್ಪೂರ್ತಿ ನೀಡುವ ಕಥೆ ಹೊತ್ತು ಬಂದ ಪುಟ್ಟಕ್ಕನನ್ನು ವೀಕ್ಷಕರು ಖುಷಿಯಿಂದಲೇ ಬರಮಾಡಿಕೊಂಡಿದ್ದರು. ಮೂವರು ಹೆಣ್ಣು ಮಕ್ಕಳು ಕೂಡಾ ಅನೇಕ ಹೆಣ್ಣುಮಕ್ಕಳಿಗೆ ಧೈರ್ಯ ನೀಡುತ್ತಿದ್ದರು. ಓದದೆ ಇದ್ರೂ ಸಹನಾ ಥರ ಇರಬೇಕು. ಓದಿದವರೆಲ್ಲರೂ ಸ್ನೇಹ ಥರ ಇರಬೇಕು. ಓದಬೇಕು ಅನ್ನೋರು ಸುಮಾ ಥರ ಇರಬೇಕು, ಕಷ್ಟದಲ್ಲಿದ್ದ ಮಹಿಳೆಯರು ಪುಟ್ಟಕ್ಕನ ನೋಡಿ ಕಲಿಯಬೇಕು ಅನ್ನೋವಷ್ಟರ ಮಟ್ಟಿಗೆ ಪುಟ್ಟಕ್ಕ ಮತ್ತು ಮಕ್ಕಳು ವೀಕ್ಷಕರ ಮನೆ, ಮನಗಳನ್ನು ತುಂಬಿದ್ದರು. ಆದರೆ, ಇತ್ತೀಚಿಗೆ ಕಥೆ ಎಲ್ಲೆಲ್ಲೋ ಸಾಗುತ್ತಿದೆ. ಸತ್ಯ ಅಲ್ಲದಿದ್ದರೂ ಸತ್ಯಕ್ಕೆ ಹತ್ತಿರವೂ ಬರುತ್ತಿಲ್ಲ. ಕೆಲವೊಮ್ಮೆ ಸಿನಿಮಾ ಕಥೆಗಳಲ್ಲಿ ಬರುವ ಸೀನ್‌ಗಳು, ಮತ್ತೊಮ್ಮೆ ರೇಟಿಂಗ್‌ಗಾಗಿ ತಿರುಚಿ, ಪರಚಿ ಬರೆಯೋ ಸ್ಕ್ರಿಪ್ಟ್.. ವೀಕ್ಷಕರು ಅದೆಷ್ಟೇ ತಾಳ್ಮೆಯಿಂದ ನೋಡಿದರೂ ಕಿರಿಕಿರಿಯಾಗ್ತಿರೋದಂತೂ ಸುಳ್ಳಲ್ಲ. ಅದ್ರಲ್ಲೂ ಈಗ ಸಹನಾ ಸಾವಿನ ಕಥೆಯಲ್ಲಿ ವಾರಪೂರ್ತಿ ಕಣ್ಣೀರೇ ತುಂಬಿದೆ. ಹಾಗಾದ್ರೆ, ಸಹನಾ ಕಥೆಯಲ್ಲಿ ಬರುವ ಟ್ವಿಸ್ಟ್ ಏನು? ಮಗಳಿಲ್ಲ ಅಂತಾ ಕಣ್ಣೀರಲ್ಲಿ ಮುಳುಗಿರುವ ಪುಟ್ಟಕ್ಕನ ಸ್ಥಿತಿಯೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೈಕೋ ಜಯಂತ್ ಕಾಟ ಎಷ್ಟುದಿನ? – ಜಾಹ್ನವಿಗೂ ಬೇಡ್ವಾ ಜಯಂತ್?

ನೊಂದ ಹೆಣ್ಣಿಗೆ ಮಾದರಿಯಾಗಿ ನಿಂತವಳು ಪುಟ್ಟಕ್ಕ. ಪುಟ್ಟಕ್ಕನ ಕಥೆಯಲ್ಲಿ ನೋವಿದ್ದರೂ ಮಕ್ಕಳಿಂದ ನೆಮ್ಮದಿಯ ಜೀವನ ಇತ್ತು. ಪುಟ್ಟಕ್ಕ ತನಗೆದುರಾದ ಕಷ್ಟವನ್ನು ಸಹಿಸಿಕೊಂಡು ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಳು. ಆಗಾಗ್ಗೆ ಸಂಸಾರದ ಸೂತ್ರಗಳನ್ನು ಮಕ್ಕಳಿಗೆ ಹೇಳೋ ನೆಪದಲ್ಲಿ ಅದೆಷ್ಟೋ ವೀಕ್ಷಕರಿಗೆ ಬದುಕಿನ ಧೈರ್ಯ ಹೇಳುತ್ತಿದ್ದಳು. ದೊಡ್ಡ ಮಗಳು ಸಹನಾ ಪ್ರೀತಿಸಿದ ಹುಡುಗನನ್ನೇ ಮದುವೆಯಾದಾಗ ಖುಷಿಯಲ್ಲೇ ಆಶೀರ್ವಾದ ಮಾಡಿದ್ದಳು. ಯಾವಾಗ ತನ್ನ ಮಗಳಿಗೆ ಗಂಡನ ಮನೆಯವರು ವಿಷ ಹಾಕಿದ್ರೋ ಆಗ ಮಗಳ ಅತ್ತೆಗೂ ಕಪಾಳಮೋಕ್ಷ ಕೂಡಾ ಮಾಡಿದ್ದಳು. ಅಂದು ಪುಟ್ಟಕ್ಕನ ಎದೆಗಾರಿಕೆಗೆ ವೀಕ್ಷಕರೆಲ್ಲರೂ ಶಹಬ್ಬಾಸ್ ಅಂದಿದ್ದರು. ನಂತರ ಅದ್ಯಾಕೋ ಕಥೆ ಹಳಿ ತಪ್ಪುತ್ತಾ ಸಾಗಿತ್ತು. ಸಹನಾಳ ಡೈವೋರ್ಸ್ ಕೇಸ್, ಮಗಳು ಗಂಡನ ಬಿಟ್ಟು ಬರ್ತೀನಿ ಅಂತಾ ಒಪ್ಪದ ಪುಟ್ಟಕ್ಕ, ನಂತರ ಗಂಡನ ಬಿಟ್ಟು ಬಂದ ಮಗಳಿಗೂ ಬೇಸರ ಮಾಡುವ ರೀತಿ ವೀಕ್ಷಕರಿಗೆ ಶಾಕ್ ನೀಡಿದ್ದಂತೂ ಸತ್ಯ.

ಬಹುಶಃ ತನ್ನ ನೋವು ತನ್ನ ಮಗಳು ಅನುಭವಿಸಬಾರದು ಅನ್ನೋ ಆತಂಕವಿದ್ದರೂ, ಮಗಳನ್ನು ಸಾವಿನ ಮನೆಗೆ ಕಳಿಸುವವರ ಮಧ್ಯೆ ಬದುಕಲು ಹೇಳುವುದು ನಿಜಕ್ಕೂ ವೀಕ್ಷಕರಿಗೆ ಬೇಜಾರಾಗಿತ್ತು. ಹೀಗಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರಿಪ್ಟ್ ಬರೆದವರಿಗೂ,ನಿರ್ದೇಶಕರಿಗೂ ಸಿಕ್ಕಾಪಟ್ಟೆ ಕ್ಲಾಸ್ ತಗೊಳ್ತಾನೇ ಇದ್ರು. ಇದಾದ ಮೇಲೆ ಶುರುವಾಗಿದ್ದೇ ಸಹನಾ ಕಣ್ಣೀರ ಕಥೆ. ಅತ್ತ ಗಂಡನಿಗೂ ಬೇಡವಾಗಿ, ಇತ್ತ ಹೆತ್ತವರಿಗೂ ಭಾರವಾಗಿ ಇರೋದಕ್ಕಿಂತ ದೂರವಾಗಿ ಬದುಕುವುದೇ ಮೇಲು ಅಂತಾ ಸಹನಾ ಮನೆಬಿಟ್ಟು ಹೋಗುತ್ತಾಳೆ. ಮಗಳು ಮನೆಯಲ್ಲಿ ಇಲ್ಲ ಅನ್ನೋ ಸತ್ಯ ಗೊತ್ತಾಗಿ ಪುಟ್ಟಕ್ಕನ ರೋಧನೆ ನೋಡಿ ಉಮಾಶ್ರೀ ಅಭಿನಯಕ್ಕೆ ಅಭಿಮಾನಿಗಳು ಕೂಡಾ ಮನಸೋತಿದ್ರು. ಇಷ್ಟಕ್ಕೇ ಮುಗಿದಿಲ್ಲ. ಕಾಣೆಯಾದ ಸಹನಾಳನ್ನು ಒಬ್ಬೊಬ್ಬರು ಒಂದೊಂದು ಕಡೆ ಹುಡುಕುತ್ತಾ ಹೋದಾಗ ಪೊಲೀಸರ ಮೂಲಕ ಅವಳ ಶವ ಸಿಗುತ್ತೆ. ಮಗಳ ಮೃತದೇಹ ನೋಡಿ ಕುಸಿದುಹೋದ ಪುಟ್ಟಕ್ಕ ಕೊನೆಗೂ ಅಳಿಯ ಮುರುಳಿ, ಕುಟುಂಬದವರ ಜೊತೆ ಅಂತ್ಯಸಂಸ್ಕಾರ ಮುಗಿಸುತ್ತಾಳೆ. ಎರಡು ದಿನ ಪೂರ್ತಿ ಪುಟ್ಟಕ್ಕನ ಕಣ್ಣೀರು ನೋಡಿ ವೀಕ್ಷಕರ ತಲೆಯೂ ಕೆಟ್ಟಿದೆ. ಹೀಗಿರುವಾಗಲೇ ಕಥೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ಸಹನಾ ಸತ್ತಿಲ್ಲ. ಸಹನಾ ದೇವಸ್ಥಾನವೊಂದರಲ್ಲಿ ಇದ್ದಾಳೆ.

ಎಲ್ಲಾ ಧಾರಾವಾಹಿ ಕಥೆಗಳಲ್ಲಿ ಬರುವಂತೆ, ಸಹನಾ ಊರು ಬಿಟ್ಟು ಬರುವಾಗ ಮೊಬೈಲ್, ಹಣ ಬಟ್ಟೆ ಸಮೇತ ಬ್ಯಾಗ್‌ನ್ನು ಕಳೆದುಕೊಂಡಿರುತ್ತಾಳೆ.  ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ದುಡ್ಡಿಲ್ಲ. ಸಹನಾ ಬೇರೆ ದಾರಿ ಕಾಣದೆ ದೇವಸ್ಥಾನದಲ್ಲಿ ಆಸರೆ ಪಡೆದಿರುತ್ತಾಳೆ. ಅತ್ತ ಸಹನಾ ಇನ್ನಿಲ್ಲ ಅಂತಾ ಮನೆಯವರು ಅಂತಿಮವಿಧಿ ವಿಧಾನ ನಡೆಸಿ ಕಣ್ಣೀರು ಹಾಕುತ್ತಿದ್ದರೆ, ಇತ್ತ ಸಹನಾ ಬದುಕಿನ ದಾರಿ ಕಾಣದೇ ದೇವರ ಮೊರೆಹೋಗಿದ್ದಾಳೆ. ಇನ್ನು ಸಹನಾ ಬದುಕಿದ್ದಾಳೆ ಅಂತಾದ್ರೆ ಸತ್ತವಳು ಯಾರು. ಆಕೆಯೇ ಸಹನಾ ಎಂದುಕೊಂಡಿದ್ದು ಯಾಕೆ. ಮಗಳ ಗುರುತು ಪುಟ್ಟಕ್ಕನಿಗೆ ಸಿಗಲಿಲ್ಲವೇ. ಕರುಳಬಳ್ಳಿ ಬದುಕಿದ್ದಾಳೆ ಅಂತಾ ಹೆತ್ತಕರುಳು ಕೂಗಿ ಹೇಳಲಿಲ್ಲವೇ.. ಇದೆಲ್ಲಾ ಕೂಡಾ ಮುಂದಿನ ಎಪಿಸೋಡ್‌ಗಳಲ್ಲಿ ಗೊತ್ತಾಗಲಿದೆ. ಆದರೆ, ರೇಟಿಂಗ್‌ ಬರಲಿ ಅಂತಾ ಕಣ್ಣೀರೇ ಕಂಪಲ್ಸರಿ ಮಾಡಿದರೆ ಹೇಗೆ ಎಂಬ ವೀಕ್ಷಕರ ಪ್ರಶ್ನೆಗೆ ಸೀರಿಯಲ್ ಟೀಮ್ ಉತ್ತರ ಹೇಳಬೇಕಿದೆ.

Shwetha M