ಸಹನಾ ಶಿಕ್ಷೆಗೆ ರೊಚ್ಚಿಗೆದ್ದ ವೀಕ್ಷಕರು – ಪುಟ್ಟಕ್ಕನ ಮಕ್ಕಳು ಫುಲ್ ಟ್ರೋಲ್
ಸೀರಿಯಲ್‌ನಲ್ಲಿ ಸತ್ಯ ಇಲ್ಲದಿದ್ದರೂ ಒಪ್ಪಬಹುದು. ಆದ್ರೆ, ಬರೀ ಸುಳ್ಳಿನ ಮೇಲೆ ಸುಳ್ಳು ಕಥೆ ಹೆಣೆದು ಅದನ್ನ ಪ್ರೇಕ್ಷಕರ ತಲೆಗೆ ತುಂಬಿಸೋದು ಎಷ್ಟು ಸರಿ ಎಂಬ ಚರ್ಚೆ ಈಗ ಶುರುವಾಗಿದೆ. ಲಕ್ಷ್ಮೀನಿವಾಸದಲ್ಲಿ ಜಿರಳೆ ತಿಂದ ಪ್ರಸಂಗ ನೋಡಿ ವೀಕ್ಷಕರು ಇಂಥದ್ದೆನ್ನಲ್ಲಾ ತೋರಿಸಬೇಡಿ ಅಂತಾ ಹೇಳಿದ ಬೆನ್ನಲ್ಲೇ ಮತ್ತೊಂದು ಧಾರಾವಾಹಿ ಮೇಲೂ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ಸತ್ಯ ನುಡಿದ ಸಹನಾಗೆ 7 ವರ್ಷ ಕಠಿಣ ಶಿಕ್ಷೆಯಾಗಿದೆ. ಈ ಪ್ರೋಮೋ ರಿಲೀಸ್ ಆಗ್ತಿದ್ದಂತೆ ವೀಕ್ಷಕರು ಕೂಡಾ ರೊಚ್ಚಿಗೆದ್ದಿದ್ದಾರೆ.
ಪುಟ್ಟಕ್ಕನ ಮಕ್ಕಳು ರೇಟಿಂಗ್ ರೇಸ್‌ನಲ್ಲಿ ಮುಂದಿದೆ. ಹಾಗಂತಾ ತೋರಿಸಿದ್ದನ್ನೆಲ್ಲಾ ವೀಕ್ಷಕರು ಒಪ್ಪಿಕೊಳ್ಳಲೂ ಸಿದ್ಧರಿಲ್ಲ. ಈಗ ಒಂದು ಅಪರಾಧ ಮಾಡಿದ್ರೆ ನ್ಯಾಯಾಲಯದಲ್ಲಿ ಒಂದೇ ದಿನ ತೀರ್ಮಾನ ಸಿಗಲ್ಲ. ಅದ್ರಲ್ಲೂ ಡೈವೋರ್ಸ್ ಕೇಸ್‌ಗಂತಾ ಕೋರ್ಟ್‌ಗೆ ಹೋದ್ರೆ ಹೀಗೆಲ್ಲಾ ಶಿಕ್ಷೆ ನೀಡ್ತಾರಾ ಅನ್ನೋ ಡೌಟ್ ವೀಕ್ಷಕರದ್ದು. ಧಾರಾವಾಹಿ, ಸಿನಿಮಾಗಳು ಎಂದರೆ ಜನರಿಗೆ ಮಾದರಿಯಾಗಿರಬೇಕು. ಇಲ್ಲ ದೌರ್ಜನ್ಯದ ವಿರುದ್ಧ ಹೋರಾಡುವವರಿಗೆ ಪ್ರೇರಣೆಯಾಗಬೇಕು, ಆದರೆ, ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಿಲ್ಲ. ಸತ್ಯದ ಮಾರ್ಗದಲ್ಲಿ ನಡೆದವರೆಗೆ ಮಾತ್ರ ಶಿಕ್ಷೆ. ಒಳ್ಳೆಯವರು, ಮುಗ್ಧರು ಅನುಭವಿಸುವ ನೋವು ನೋಡಿ ಪ್ರೇಕ್ಷಕರು ರೊಚ್ಚಿಗೇಳುವಂತೆ ಮಾಡ್ತಿದ್ದಾರೆ.
ಅದ್ರಲ್ಲೂ ನ್ಯಾಯ ಕೇಳಲು ಹೋದ ಪುಟ್ಟಕ್ಕನ ಮಗಳು ಸಹನಾಗೆ ಕೋರ್ಟ್ ಏಳು ವರ್ಷಗಳ ಶಿಕ್ಷೆ ನೀಡಿದೆ. ಅದೂ ಕೂಡಾ ಡಿವೋರ್ಸ್ ಕೇಸ್ನಲ್ಲಿ. ತನ್ನ ಅತ್ತೆ ಕೊಲೆ ಮಾಡಲು ಸಂಚು ಮಾಡಿದ್ದಳು ಎಂದು ಸಹನಾ ಹೇಳಿದರೆ ಅದಕ್ಕೆ ಸಾಕ್ಷಿ ಒದಗಿಸುವಲ್ಲಿ ಸಹನ ವಿಫಲವಾಗಿದ್ದಳು. ಇದೇ ಕಾರಣ ನೀಡಿ, ಕೋರ್ಟ್‌ಗೆ ಸುಳ್ಳು ಹೇಳಿದ್ದಕ್ಕೆ ಸಹನಾಗೆ ಶಿಕ್ಷೆಯಾಗಿದೆ. ಕೋರ್ಟ್ ಗೆ ಬೇಕಿರುವುದು ಸಾಕ್ಷ್ಯಾಧಾರಗಳೇ ಎನ್ನುವುದು ಸತ್ಯವೇ. ಆದರೆ ನಿಜ ಜೀವನದಲ್ಲಿ ಹಾಗೆ ಆಗುತ್ತಿದೆಯೆ? ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಸದ್ಯದ ಪ್ರೊಮೋ ನೋಡಿದ ಸೀರಿಯಲ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಸೀರಿಯಲ್ಗಳು ಏನು ಹೇಳಲು ಹೊರಟಿವೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಡಿವೋರ್ಸ್ ಕೇಳಲು ಹೋದಾಕೆಗೆ ಬೇರೊಂದು ಕೇಸ್ ಅದೂ ಸುಳ್ಳು ಕೇಸ್ನಲ್ಲಿ ಶಿಕ್ಷೆ ಕೊಟ್ಟಿರುವುದು ಎಷ್ಟು ಸರಿ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಸೀರಿಯಲ್ಗಳಿಗೆ ಟ್ವಿಸ್ಟ್ ತರುವುದಕ್ಕಾಗಿ ಏನೇನೋ ಕಥೆಗಳನ್ನು ಹೆಣೆದು, ಧಾರಾವಾಹಿಗಳನ್ನೇ ನಿಜ ಎಂದು ನಂಬಿರುವ ಪ್ರೇಕ್ಷಕರ ಮನಸ್ಸಿಗೆ ನೋವು ಮಾಡಬೇಡಿ, ಕೊನೆಗೆ ಯಾವ ಹೆಣ್ಣೂ ನ್ಯಾಯ ಕೇಳುವ ದನಿ ಎತ್ತದಂಥ ಸ್ಥಿತಿಗೆ ತರಬೇಡಿ ಎಂದು ಕಟುವಾಗಿಯೇ ಪ್ರಶ್ನೆ ಮಾಡ್ತಿದ್ದಾರೆ ವೀಕ್ಷಕರು. ಈ ಸೀರಿಯಲ್‌ನಲ್ಲಿ ಹೇಗೋ ಸಹನಾ ನಿರಪರಾಧಿ, ಆಕೆಯ ಅತ್ತೆಯೇ ತಪ್ಪಿತಸ್ಥೆ ಎಂದು ಕೊನೆಗೆ ತೋರಿಸುವುದು ನಿರ್ದೇಶಕರಿಗೆ ಸುಲಭ. ಆದರೆ, ಅದಕ್ಕೂ ಮೊದಲು ನ್ಯಾಯಾಲಯದ ವಿಚಾರದಲ್ಲೂ ಈ ರೀತಿ ಕಟ್ಟುಕಥೆ ಕಟ್ಟಿ ವೀಕ್ಷಕರನ್ನು ದಾರಿ ತಪ್ಪಿಸುವ ಪ್ರಯತ್ನ ಬೇಕಾ ಅನ್ನೋದೇ ಸದ್ಯದ ಪ್ರಶ್ನೆ.