ಶುರುವಾಗುತ್ತಾ 3ನೇ ಮಹಾಯುದ್ಧ? – ರೊಚ್ಚಿಗೆದ್ದಿದ್ಯಾಕೆ ಪುಟಿನ್?

ಶುರುವಾಗುತ್ತಾ 3ನೇ ಮಹಾಯುದ್ಧ? – ರೊಚ್ಚಿಗೆದ್ದಿದ್ಯಾಕೆ ಪುಟಿನ್?

ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಅಂತಾ ನಡೆದ್ರೆ ಅದು ಒಬ್ಬ ವ್ಯಕ್ತಿಯಿಂದ. ವ್ಲಾದಿಮಿರ್ ಪುಟಿನ್..ಆರನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ತಮ್ಮ ಮೊದಲ ಭಾಷಣದಲ್ಲೇ ಪುಟಿನ್ ಮೂರನೇ ಮಹಾಯುದ್ಧದ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಅಧ್ಯಕ್ಷ ಪಟ್ಟಕ್ಕೇರಿದವರು, ಪ್ರಧಾನಿಯಾದವರು ತಮ್ಮ ಮೊದಲ ಭಾಷಣದಲ್ಲಿ ದೇಶದ ಅಭಿವೃದ್ಧಿ, ಜಾಗತಿಕ ಶಾಂತಿ ಬಗ್ಗೆ ಮಾತನಾಡ್ತಾರೆ. ಆದ್ರೆ ಪುಟಿನ್ ಮಾತ್ರ ಎಲ್ಲರಿಂಗಿಂತಲೂ ಡಿಫರೆಂಟ್. ಒಂಥರಾ ಯುದ್ಧದಾಹಿ. ಹೀಗಾಗಿಯೇ ಆರನೇ ಬಾರಿಗೆ ಅಧ್ಯಕ್ಷರಾಗುತ್ತಲೇ ಮಹಾಯುದ್ಧದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಇಲ್ಲಿ ಪುಟಿನ್ ಮಹಾಯುದ್ಧದ ಮಾತಿನ ಮರ್ಮವೇನು? ಇಂಥದ್ದೊಂದು ವಾರ್ನಿಂಗ್​ನ್ನ ಪುಟಿನ್ ಕೊಟ್ಟಿರೋದ್ಯಾಕೆ? ಶೀಘ್ರವೇ ಜಗತ್ತು ಭಯಾನಕ ಯುದ್ಧಕ್ಕೆ ಸಾಕ್ಷಿಯಾಗುತ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದಳಪತಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅತಿರೇಕದ ವರ್ತನೆ  – ಕೇರಳದಲ್ಲಿ ವಿಜಯ್ ಕಾರಿನ ಮೇಲೆ ದಾಳಿ!

1991ರಲ್ಲಿ ಯುಎಸ್​ಎಸ್ಆರ್​ ಒಡೆದು ರಷ್ಯಾದ ಸ್ಥಾಪನೆಯಾಗುತ್ತೆ. ಅಲ್ಲಿಂದ ಇಲ್ಲಿವರೆಗೂ ಪುಟಿನ್​​ರಷ್ಟು ಬಲಿಷ್ಠ ನಾಯಕನನ್ನ ರಷ್ಯಾ ಕಂಡಿಲ್ಲ. ಪ್ರತಿ ಬಾರಿಯೂ ಚುನಾವಣೆಯಾದಾಗಲೂ ರಷ್ಯಾದಲ್ಲಿ ಗೆಲ್ಲೋದು ಪುಟಿನ್ ಮಾತ್ರ. ಈ ಬಾರಿಯೂ ಅದೇ ಆಗಿರೋದು. ಆದ್ರೆ ಇಲ್ಲೊಂದು ಬದಲಾವಣೆಯಾಗಿದೆ. ಇದುವರೆಗೆ ರಷ್ಯಾ ಒಂದು ದಿನವಷ್ಟೇ ಎಲೆಕ್ಷನ್ ನಡೀತಾ ಇದೆ. ರಷ್ಯಾದಾದ್ಯಂತ ಒಂದೇ ದಿನದಲ್ಲಿ ವೋಟಿಂಗ್ ಮುಗೀತಾ ಇತ್ತು. ಆದ್ರೆ ಇದೇ ಮೊದಲ ಬಾರಿಗೆ ರಷ್ಯಾದಲ್ಲಿ ಮೂರು ದಿನ ಮತದಾನ ನಡೆದಿದೆ. ಅಲ್ಲಿನ ವಿಪಕ್ಷಗಳಂತೂ ರಷ್ಯಾ ಚುನಾವಣೆಯನ್ನೇ ದೊಡ್ಡ ಸ್ಕ್ಯಾಮ್ ಅಂತಾ ಆರೋಪಿಸಿವೆ. ಅಮೆರಿಕ ಕೂಡ ಇದನ್ನೇ ಹೇಳಿದೆ. ಆದ್ರೆ ಆರನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತಲೇ ಕಳೆದ 200 ವರ್ಷಗಳಲ್ಲೇ ರಷ್ಯಾವನ್ನ ಅತೀ ಹೆಚ್ಚು ವರ್ಷ ಆಳಿದ ನಾಯಕ ಅನ್ನೋ ಹೆಸರು ಪುಟಿನ್ ಪಾಲಾಗಲಿದೆ. ಇನ್ನು ಪುಟಿನ್ ಈ ಬಾರಿ 87.8% ಮತಗಳೊಂದಿಗೆ ಚುನಾವಣೆಯನ್ನ ಗೆದ್ದಿದ್ದಾರೆ. ಅಂದ್ರೆ 1991ರಿಂದ ಅಂದ್ರೆ ರಷ್ಯಾ ಸ್ಥಾಪನೆಯಾದಾಗಿನಿಂದ ಅಷ್ಟೊಂದು ಬಹುಮತದಿಂದ ಚುನಾವಣೆಯನ್ನ ಯಾರು ಕೂಡ ಗೆದ್ದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಪುಟಿನ್ ಜೊತೆಗೆ ಅಧ್ಯಕ್ಷಗಿರಿ ರೇಸ್​ನಲ್ಲಿದ್ದ ಇನ್ನೂ ಮೂವರು ಉಕ್ರೇನ್​​ ವಿರುದ್ಧದ ಯುದ್ಧವನ್ನ ಬೆಂಬಲಿಸಿದವರೇ. ಆದ್ರೆ ಯುದ್ಧವನ್ನ ವಿರೋಧಿಸಿದ್ದ ಬೋರಿಸ್ ಎಂಬ ಅಭ್ಯರ್ಥಿಯಗೆ ಚುನಾವಣೆಗೆ ನಿಲ್ಲೋದಕ್ಕೆ ನಿರಾಕರಿಸಲಾಗಿತ್ತು. ಬೋರಿಸ್ ಸಲ್ಲಿಸಿದ್ದ ನಾಮಪತ್ರದಲ್ಲಿ ಹಾಕಿರೋ ಸಹಿಯಲ್ಲಿ ಎಡವಟ್ಟಾಗಿದೆ ಅನ್ನೋ ಕಾರಣವೊಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಹಿಡಿಯಲಾಗಿತ್ತು.

ರಷ್ಯಾದಲ್ಲಿ ಪ್ರತಿ ಆರು ವರ್ಷಕ್ಕೊಮ್ಮೆ ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತೆ. ಒಂದು ವೇಳೆ ಮೊದಲ ಹಂತದಲ್ಲಿ ಯಾರಿಗೂ 50%ಗಿಂತ ಹೆಚ್ಚು ವೋಟ್ ಸಿಕ್ಕಿಲ್ಲ ಅಂದ್ರೆ ಆಗ ಫಸ್ಟ್ ಮತ್ತು ಸೆಕೆಂಡ್ ಪ್ಲೇಸ್​ನಲ್ಲಿರೋ ಅಂದ್ರೆ ಟಾಪ್-2 ಅಭ್ಯರ್ಥಿಗಳ ಮಧ್ಯೆ ಸೆಕೆಂಡ್​ ರೌಂಡ್​ನಲ್ಲಿ ಚುನಾವಣೆ ನಡೆಯುತ್ತೆ. ಆದ್ರೆ ಈ ಬಾರಿ ಮೊದಲ ಹಂತದಲ್ಲೇ ವ್ಲಾದಿಮಿರ್ ಪುಟಿನ್ 87.8% ಮತಗಳನ್ನ ಪಡೆದಿದ್ರಿಂದ ಎರಡನೇ ಹಂತದ ವೋಟಿಂಗ್​ನ ಪ್ರಶ್ನೆಯೇ ಬಂದಿಲ್ಲ. ನಿಮಗೆ ಗೊತ್ತಿರ್ಲಿ, 2008ರವರೆಗೂ ರಷ್ಯಾದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೀತಾ ಇತ್ತು. ಆದ್ರೆ 2008ರಲ್ಲಿ ಅದನ್ನ ಬದಲಾಯಿಸಲಾಗುತ್ತೆ.

1999ರಲ್ಲಿ ಪುಟಿನ್ ಮೊದಲ ಬಾರಿಗೆ ತಾತ್ಕಾಲಿಕ ಅಧ್ಯಕ್ಷರಾಗ್ತಾರೆ. 2000ನೇ ವರ್ಷದಲ್ಲಿ ಫುಲ್ ಟೈಮ್ ಆಡಗಿ ಅಧ್ಯಕ್ಷರಾದ ಪುಟಿನ್ ನಾಲ್ಕು ವರ್ಷಗಳ ಕಾಲ ಆಡಳಿತ ಮಾಡ್ತಾರೆ. 2004-2008ರವರೆಗೆ ಎರಡನೇ ಬಾರಿಗೆ ಪುಟಿನ್ ಅಧ್ಯಕ್ಷರಾಗ್ತಾರೆ. ಮೂರನೇ ಬಾರಿಗೆ ಅಧ್ಯಕ್ಷರಾಗಬೇಕು ಎಂದುಕೊಂಡಿದ್ದ ಪುಟಿನ್​​ಗೆ ಅಲ್ಲಿದ್ದಂತಾ ಸಾಂವಿಧಾನಿಕ ಕಾನೂನು ಅಡ್ಡಿಯಾಗಿ ಬಿಡುತ್ತೆ. ಒಬ್ಬ ವ್ಯಕ್ತಿ ಸತತ ಎರಡು ಬಾರಿಯಷ್ಟೇ ಅಧ್ಯಕ್ಷರಾಗಬಹುದು ಅನ್ನೋ ನಿಯಮ ರಷ್ಯಾದಲ್ಲಿರುತ್ತೆ. ಹೀಗಾಗಿ 2008ರಲ್ಲಿ ತಮ್ಮ ಬಲಗೈ ಬಂಟನಾಗಿದ್ದ ಡಿಮಿಟ್ರಿ ಮಡ್ವೆಡೋವ್​ರನ್ನ ಪುಟಿನ್ ಅಧ್ಯಕ್ಷರನ್ನಾಗಿಸ್ತಾರೆ. ಹೆಸರಿಗಷ್ಟೇ ಡಿಮಿಟ್ರಿ ಪ್ರೆಸಿಡೆಂಟ್ ಆಗಿದ್ರು. ರಿಮೋಟ್ ಪುಟಿನ್ ಕೈಯಲ್ಲೇ ಇತ್ತು. ಹಾಗಂತಾ ಪುಟಿನ್ ಯಾವುದೇ ಹುದ್ದೆಯಲ್ಲಿ ಇರಲಿಲ್ಲ ಅಂತೇನಲ್ಲ. ಪುಟಿನ್ ಆಗ ಪ್ರಧಾನಿಯಾಗ್ತಾರೆ. ಪ್ರಧಾನಿಯಾಗಿದ್ದುಕೊಂಡು ಅಧ್ಯಕ್ಷನ ಕೆಲಸ ಮಾಡ್ತಿರ್ತಾರೆ. ಪುಟಿನ್ ಅಧ್ಯಕ್ಷರಾಗಿದ್ದಾಗ ಮಡ್ವೆಡೋವ್ ಪ್ರಧಾನಿಯಾಗಿದ್ರು. ಅಲ್ಲಿ ರೂಲ್ಸ್ ಇದ್ದಿದ್ದು, ಸತತವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗುವಂತಿಲ್ಲ ಅಂತಾ. ಪ್ರಧಾನಿಯಾಗಬಾರದು ಅಂತಾ ಏನೂ ಇರಲಿಲ್ಲ. ಹೀಗಾಗಿ ಪುಟಿನ್ 2008-2012ರವರೆಗೆ ರಷ್ಯಾದ ಪ್ರಧಾನಿ ಪಟ್ಟದಲ್ಲಿ ಕುಳಿತಿರ್ತಾರೆ. 2012ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ, 2018ರವರೆಗೆ ಮೂರನೇ ಬಾರಿಗೆ ಪುಟಿನ್ ರಷ್ಯಾವನ್ನ ಆಳ್ತಾರೆ. 2018-2024ರವರೆಗೆ ಮತ್ತೊಮ್ಮೆ ಅಧ್ಯಕ್ಷರಾಗಿ, ಈಗ 2024ರ ಚುನಾವಣೆಯನ್ನೂ ಗೆದ್ದು 2030ರವರೆಗೆ ರಷ್ಯಾವನ್ನ ಪುಟಿನ್ ಆಳೋಕೆ ಹೊರಟಿದ್ದಾರೆ.

ಇವೆಲ್ಲದ್ರ ಮಧ್ಯೆ ಇನ್ನೊಂದು ಇಂಟ್ರೆಸ್ಟಿಂಗ್ ಬೆಳವಣಿಗೆ ಕೂಡ ಆಗಿದೆ. 2012ರವರೆಗೆ ರಷ್ಯಾದಲ್ಲಿ ಅಧ್ಯಕ್ಷಾವಧಿ ನಾಲ್ಕು ವರ್ಷಗಳವರೆಗಿತ್ತು. ಆದ್ರೆ ಪುಟಿನ್ ಕೃಪಕಟಾಕ್ಷದಿಂದ 2008ರಲ್ಲಿ ಅಧ್ಯಕ್ಷರಾದ ಡಿಮಿಟ್ರಿ ಮಡ್ವಡೇವ್ 2010ರಲ್ಲಿ ಸಂವಿಧಾನದಲ್ಲೇ ಒಂದು ಮಹತ್ವದ ತಿದ್ದುಪಡಿ ಮಾಡ್ತಾರೆ. ಅಧ್ಯಕ್ಷನ ಅಧಿಕಾರವಧಿಯನ್ನ ನಾಲ್ಕು ವರ್ಷಗಳಿಂದ ಆರು ವರ್ಷಗಳವರೆಗೆ ವಿಸ್ತರಿಸ್ತಾರೆ. 2012ಕ್ಕೆ ಈ ನಿಯಮ ಜಾರಿಗೆ ಬರುತ್ತೆ. 2012ರಲ್ಲಿ ಮತ್ತೆ ವಾದಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾಗಿಬಿಡ್ತಾರೆ. 2012ರಿಂದ 2018ರವರೆಗೆ..ಆರು ವರ್ಷ. ಅಲ್ಲಿಂದ ಅದು ಹಾಗೆ ಮುಂದುವರಿದುಕೊಂಡು ಬಂದಿದೆ. ಈ ನಡುವೆ 2020ರಲ್ಲಿ ರಷ್ಯಾ ಸಂವಿಧಾನದಲ್ಲಿ ಪುಟಿನ್ ಮತ್ತೊಂದು ತಿದ್ದುಪಡಿ ಮಾಡ್ತಾರೆ. 2024ರ ವೇಳೆಗೆ ವ್ಲಾದಿಮಿರ ಪುಟಿನ್ ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಟರ್ಮ್ ಕಂಪ್ಲೀಟ್ ಮಾಡ್ತಿದ್ರು. ಅಂದ್ರೆ 2012 -2018, 2018-2024..ಬ್ಯಾಕ್ ಟು ಬ್ಯಾಕ್ ಎರಡು ಟರ್ಮ್ ಪ್ರೆಸಿಡೆನ್ಸಿ. ಅಂದು 2008ರಲ್ಲೇನೊ ಪುಟಿನ್ ನಾಲ್ಕು ವರ್ಷ ಪ್ರಧಾನಿಯಾಗ್ತಾರೆ. ಆದ್ರೆ ಈಗ ಮತ್ತೆ ಪ್ರಧಾನಿಯಾಗೋದು ಪುಟಿನ್​ಗೆ ಬೇಕಾಗಿಲ್ಲ. ಅದು ಕೂಡ ಆರು ವರ್ಷ. ಹೀಗಾಗಿಯೇ ಚಾಣಾಕ್ಯ ಪುಟಿನ್ ತಾವು ಅಧ್ಯಕ್ಷರಾಗಿದ್ದಾಗ 2020ರಲ್ಲೇ ಸಂವಿಧಾನಕ್ಕೆ ಮತ್ತೊಂದು ತಿದ್ದುಪಡಿ ತರ್ತಾರೆ. 2036ರವರೆಗೂ ತಾವೇ ಅಧ್ಯಕ್ಷರಾಗಿ ಮುಂದುವರಿಯೋದು. ಅಂದ್ರೆ ಇನ್ನೂ ಟರ್ಮ್.. 12 ವರ್ಷಗಳ ಕಾಲ. ಪುಟಿನ್ ನಿರ್ಧಾರಕ್ಕೆ ರಷ್ಯಾದಲ್ಲಿ ವ್ಯಾಪಕ ಬೆಂಬಲ ಸಿಗುತ್ತೆ. ನಿಯಮ ಜಾರಿಗೊಳಿಸ್ತಾರೆ. 2030ರಲ್ಲೂ ನಾಮಕಾವಸ್ತೆಗೆ ಚುನಾವಣೆಯನ್ನ ಸ್ಪರ್ಧಿಸಿ 2036ರವರೆಗೂ ಪುಟಿನ್ ರಷ್ಯಾದಲ್ಲಿ ರಾಜ್ಯಾಭಾರ ಮಾಡಬಹುದು. ಈಗ ಪುಟಿನ್​ಗೆ 71 ವರ್ಷವಾಗಿದೆ. 2036ರ ವೇಳೆಗೆ 83 ವರ್ಷವಾಗಿರುತ್ತೆ.

ಇನ್ನು ರಷ್ಯಾದಲ್ಲಿ ನಡೆಯೋ ಚುನಾವಣೆಯ ಅಸಲಿಯತ್ತು ಬೇರೆಯೇ ಇದೆ. ರಷ್ಯಾದಲ್ಲಿ ಪ್ರಜಾಪ್ರಭುತ್ವ ಅನ್ನೋದು ಆಲ್​ಮೋಸ್ಟ್ ಖತಂ ಆಗಿದೆ. ಮಾಧ್ಯಮಗಳಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ಪುಟಿನ್ ವಿರೋಧಿಗಳೆಲ್ಲರೂ ಜೈಲುಪಾಲಾಗಿದ್ದಾರೆ. ರಷ್ಯಾದ ವಿಪಕ್ಷ ನಾಯಕನಾಗಿದ್ದ, ಪುಟಿನ್ ಎದುರಾಳಿ ಎಲೆಕ್ಸಿ ನವೇನ್ಲಿ ಇತ್ತೀಚೆಗಷ್ಟೇ ಇದ್ದಕ್ಕಿದ್ದಂತೆ ಜೈಲಿನಲ್ಲೇ ಸತ್ತು ಹೋದ್ರು. ಹೀಗಾಗಿ ಈ ಬಾರಿ ಪುಟಿನ್​ ಗಳಿಸಿರೋ  88%ನಷ್ಟು ಮತಗಳನ್ನ ನಂಬೋದು ಸ್ವಲ್ಪ ಕಷ್ಟವೇ. ಈಗ ಆರನೇ ಬಾರಿಗೆ ಅಧ್ಯಕ್ಷರಾದ ಬಳಿಕ ವ್ಲಾದಿಮಿರ್ ಪುಟಿನ್ ಮಾಡಿದ ಮೊದಲ ಭಾಷಣದ ವಿಚಾರ ಏನಂದ್ರೆ  ಮೂರನೇ ಮಹಾಯುದ್ಧದ ಕುರಿತು. ಫಸ್ಟ್ ಸ್ಪೀಚ್​​ನಲ್ಲೇ ಯುದ್ಧ. 88%ನಷ್ಟು ವೋಟ್​ಗಳನ್ನ ಪಡೆದಿರೋದ್ರಿಂದಲೇ ಮೂರನೇ ಮಹಾಯುದ್ಧದ ಬಗ್ಗೆ ಮಾತನಾಡೋಕೆ ಪುಟಿನ್​ಗೆ ಮತ್ತಷ್ಟು ಧೈರ್ಯ ಬಂದಿರೋದು. ಯಾಕಂದ್ರೆ ರಷ್ಯಾದಲ್ಲಂತೂ ಪುಟಿನ್​ಗೆ ಯಾವುದೇ ಕಾಂಪಿಟೀಶನ್ ಇಲ್ಲ. ಪುಟಿನ್ ತೆಗೆದುಕೊಳ್ಳೋ ನಿರ್ಧಾರಗಳನ್ನ ವಿರೋಧಿಸುವವರೇ ಇಲ್ಲ. ವಿರೋಧಿಸಿದವರಿಗೆ ಉಳಿಗಾಲವಿಲ್ಲ ಬಿಡಿ. ಅದು ಬೇರೆ ಪ್ರಶ್ನೆ. ಈಗ ಅಮೆರಿಕ ನೇತೃತ್ವದ ನ್ಯಾಟೋವನ್ನ ಟಾರ್ಗೆಟ್ ಮಾಡಿಯೇ ಪುಟಿನ್ ಮೂರನೇ ಮಹಾಯುದ್ಧದ ಮಾತನಾಡಿದ್ದಾರೆ. ಈಗಾಗ್ಲೇ ಕಳೆದ ಎರಡು ವರ್ಷಗಳಿಂದ ಉಕ್ರೇನ್​​-ರಷ್ಯಾ ಮಧ್ಯೆ ಯುದ್ಧ ನಡೀತಾ ಇದೆ. ಅಮೆರಿಕ ಸೇರಿ ನ್ಯಾಟೋ ರಾಷ್ಟ್ರಗಳು ಸಂಪೂರ್ಣವಾಗಿ ಉಕ್ರೇನ್​ ಬೆನ್ನಿಗೆ ನಿಂತಿವೆ. ಶಸ್ತ್ರಾಸ್ತ್ರಗಳನ್ನ ಕೂಡ ಕಳುಹಿಸ್ತಾ ಇವೆ. ಈ ನಡುವೆ ನ್ಯಾಟೋ ರಾಷ್ಟ್ರಗಳ ಸೇನೆ ಉಕ್ರೇನ್​ನಲ್ಲಿ ರಷ್ಯಾ ಸೈನಿಕರ ವಿರುದ್ಧ ಹೋರಾಟಕ್ಕಿಳಿಯಬಹುದು ಅನ್ನೋ ಸುದ್ದಿಗಳು ಕೂಡ ಹರಿದಾಡ್ತಾ ಇದೆ. ಒಂದು ವೇಳೆ ಅಮೆರಿಕ ನೇತೃತ್ವದ ನ್ಯಾಟೋ ಸೇನೆ ಉಕ್ರೇನ್​ನಲ್ಲಿ ಯುದ್ಧಕ್ಕಿಳಿದಿದ್ದೇ ಆದಲ್ಲಿ ಮೂರನೇ ಮಹಾಯುದ್ಧ ಶುರುವಾಯ್ತು ಅಂತಾನೆ ಅರ್ಥ ಅಂತಾ ಪುಟಿನ್ ವಾರ್ನಿಂಗ್ ಮಾಡಿದ್ದಾರೆ. ಸದ್ಯ ಉಕ್ರೇನ್ ಸೇನೆಯಷ್ಟೇ ರಷ್ಯಾ ವಿರುದ್ಧ ಹೋರಾಡ್ತಿದೆ. ವೆಪನ್​ ಮಾತ್ರ ಅಮೆರಿಕ ಸೇರಿ ಬೇರೆ ಬೇರೆ ದೇಶಗಳಿಂದ ಸಪ್ಲೈ ಆಗ್ತಿದೆ. ಒಂದು ವೇಳೆ ನ್ಯಾಟೋದಲ್ಲಿರೋ ಯುರೋಪ್​ ರಾಷ್ಟ್ರಗಳ ಮತ್ತು ಅಮೆರಿಕ ಸೇನೆ ಉಕ್ರೇನ್​ನಲ್ಲಿ ಅಖಾಡಕ್ಕಿಳೀತು ಅಂದ್ರೆ ಆಗ ಪರಿಸ್ಥಿತಿ ಗ್ಯಾರಂಟಿ ಬಿಗಡಾಯಿಸುತ್ತೆ. ಲೇಟೆಸ್ಟ್ ಬೆಳವಣಿಗೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ತಮ್ಮ ಸೇನೆಯನ್ನ ಉಕ್ರೇನ್​ಗೆ ಕಳುಹಿಸೋಕೆ ಚಿಂತನೆ ನಡೆಸ್ತಾ ಇದ್ದಾರಂತೆ. ಹೀಗಾಗಿಯೇ ಆರನೇ ಬಾರಿಗೆ ಅಧ್ಯಕ್ಷರಾಗಿರೋ ಪುಟಿನ್ ಕೆರಳಿರೋದು.

ಈ ಹಿಂದೆ ಕೂಡ ಅಂದ್ರೆ ಉಕ್ರೇನ್ ವಿರುದ್ಧದ ಯುದ್ಧ ಆರಂಭವಾದ ಟೈಮ್​ನಲ್ಲೂ ಪುಟಿನ್ ಅಣ್ವಸ್ತ್ರ ಬಳಕೆಯ ಬಗ್ಗೆ ಎಚ್ಚರಿಕೆ ಕೊಟ್ಟಿದ್ರು. ಮಾಸ್ಕೋದ ರಸ್ತೆಗಳನ್ನ ನ್ಯೂಕ್ಲಿಯರ್​​ ಬಾಂಬ್​​ ಹೊತ್ತೊಯ್ಯುವ ಮಿಸೈಲ್​ಗಳು ಕೂಡ ಓಡಾಡಿದ್ವು. ಇನ್ನೇನು ಮೂರನೇ ಮಹಾಯುದ್ಧ ಶುರುವಾಗಿಯೇ ಬಿಡುತ್ತೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಭಾರತ ಕೂಡ ಮಧ್ಯಪ್ರವೇಶ ಮಾಡಿತ್ತು. ಪುಟಿನ್ ಭೇಟಿ ವೇಳೆ ಪ್ರಧಾನಿ ಮೋದಿ ಇದು ಯುದ್ಧ ಮಾಡೋ ಸಮಯ ಅಲ್ಲ ಅಂತಾ ನೇರವಾಗಿಯೇ ಹೇಳಿದ್ರು. ಮೋದಿ ಮಾತಿನಿಂದಾಗಿ ಪುಟಿನ್ ಅಣ್ವಸ್ತ್ರ ಬಳಕೆಯಿಂದ ಹಿಂದೆ ಸರಿದಿದ್ರು. ಪುಟಿನ್ ಮನವೊಲಿಸುವಲ್ಲಿ ಮೋದಿ ಯಶಸ್ವಿಯಾಗಿದ್ರು ಅಂತಾ ಇತ್ತೀಚೆಗಷ್ಟೇ ಅಮೆರಿಕದ ಸಿಎನ್​ಎನ್​ ಮಾಧ್ಯಮ ಕೂಡ ವರದಿ ಮಾಡಿದೆ. ಹಾಗಂತಾ ಭವಿಷ್ಯದಲ್ಲಿ ಪುಟಿನ್ ಕಣ್ಮುಚ್ಚಿ ನ್ಯೂಕ್ಲಿಯರ್​ ಬಾಂಬ್​ನ್ನ ಯೂಸ್ ಮಾಡಬಹುದು ಅಂತಾನೂ ಹೇಳೋಕಾಗೋದಿಲ್ಲ. ಅಣ್ವಸ್ತ್ರ ದಾಳಿಯ ಪರಿಣಾಮ ಏನಾಗಬಹುದು ಅನ್ನೋದು ಪುಟಿನ್​ಗೂ ಗೊತ್ತಿಲ್ದೇನು ಅಲ್ವಲ್ಲಾ. ನ್ಯೂಕ್ಲಿಯರ್ ಅಟ್ಯಾಕ್ ಮಾಡಿದ್ರೆ ಅದ್ರಿಂದ ರಷ್ಯಾ ಕೂಡ ಅನುಭವಿಸಬೇಕಾಗುತ್ತೆ. ಅಣ್ವಸ್ತ್ರ ಅನ್ನೋದು ಪುಟಿನ್ ಪಾಲಿಗೆ ಭೀತಿ ಹುಟ್ಟಿಸೋ ಒಂದು ಅಸ್ತ್ರ. ಆದ್ರೂ ಒಂದು ವಿಚಾರವನ್ನ ಹೇಳಲೇಬೇಕು. ಅಮೆರಿಕ ಏನಾದ್ರೂ ಹೆಚ್ಚುಕಮ್ಮಿ ಮಾಡಿತು ಅಂದ್ರೆ, ಉಕ್ರೇನ್​ನಲ್ಲಿ ಸೇನೆಯನ್ನ ಇಳಿಸಿದ್ರೆ ಇತ್ತ ಪುಟಿನ್ ಯಾವ ಹಂತಕ್ಕೆ ಬೇಕಾದ್ರೂ ಹೋಗಬಹುದು. ಇದನ್ನ ಕೂಡ ತಳ್ಳಿ ಹಾಕೋ ಹಾಗಿಲ್ಲ.

Shwetha M