ಪುಷ್ಪ-2 ₹1000 ಕೋಟಿ ಬ್ಯುಸಿನೆಸ್! – ರಿಲೀಸ್ ಗೂ ಮುನ್ನ ಎಲ್ಲಾ ದಾಖಲೆ ಉಡೀಸ್
2024ರ ಬಹು ನಿರೀಕ್ಷಿತ ಪುಷ್ಪಾ 2 ದಿ ರೂಲ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ. ಈ ಚಿತ್ರದಲ್ಲಿ ಮತ್ತೊಮ್ಮೆ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಅಬ್ಬರಿಸಲು ರೆಡಿ ಆಗಿದ್ದಾರೆ.. ಆದ್ರೆ ಸಿನಿಮಾ ರಿಲೀಸ್ ಗೂ ಮುನ್ನ ಚಿತ್ರ ಪ್ರೀ-ರಿಲೀಸ್ ಬ್ಯುಸಿನೆಸ್ ನಲ್ಲಿಯೇ ದಾಖಲೆ ಬರೆದಿದೆ. ದಕ್ಷಿಣ ಭಾರತದ ಯಾವ ಸಿನಿಮಾವೂ ಮಾಡಿರದಂತಹ ವ್ಯವಹಾರವನ್ನು ಪುಷ್ಪ ಮಾಡಿದೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ಸೂಚನೆ ಸಿಕ್ಕಿದೆ. ಸುಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದೆ. ಆದ್ರೆ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡುತ್ತಿದೆ. ಈಗಾಗಲೇ ಸಿನಿಮಾದ ಹಕ್ಕುಗಳು ಮಾರಾಟ ಆಗಿವೆ ಎಂದು ವರದಿ ಆಗಿದೆ. ಇದರ ಮೂಲಕ ಸಿನಿಮಾ ರಿಲೀಸ್ಗೂ ಮೊದಲೇ 1,000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
ಇದನ್ನೂ ಓದಿ: ಸೌಜನ್ಯಗೆ ಸಿಗುತ್ತಾ ನ್ಯಾಯ.. – NOTAಗೆ ಬಿದ್ದ ಮತಗಳೆಷ್ಟು?
ಮೊದಲೆಲ್ಲಾ ಸಿನಿಮಾ 100 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು ಎಂದರೆ ಅದನ್ನು ದೊಡ್ಡ ಗೆಲುವು ಎಂದು ಕರೆಯಲಾಗುತ್ತಿತ್ತು. ಆದರೆ, ಈಗೀಗ ನೂರು ಕೋಟಿ ಅನ್ನೋದು ಲೆಕ್ಕಕ್ಕೇ ಇಲ್ಲದಂತಾಗಿದೆ.. ಇದರ ಜೊತೆಗೆ ಇತ್ತೀಚೆಗೆ ಸಿನಿಮಾ ನಿರ್ಮಾಣದ ವೆಚ್ಚ ಹೆಚ್ಚಾಗಿದೆ. ಟಿಕೆಟ್ ಬೆಲೆ ಕೂಡ ಏರಿಕೆ ಆಗಿದೆ. ಹೀಗಾಗಿ, ಸಿನಿಮಾದ ಗೆಲುವನ್ನು ಈಗ 500 ಕೋಟಿ ರೂಪಾಯಿ, 1000 ಕೋಟಿ ರೂಪಾಯಿ ಬೆಂಚ್ ಮಾರ್ಕ್ನಲ್ಲಿ ಅಳೆಯಲಾಗುತ್ತಿದೆ. ಶಾರುಖ್ ಖಾನ್ ನಟನೆಯ ಎರಡು ಸಿನಿಮಾಗಳು 2023ರಲ್ಲಿ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಈಗ ‘ಪುಷ್ಪ 2’ ಸಿನಿಮಾ ರಿಲೀಸ್ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.
ಮೂಲಗಳ ಪ್ರಕಾರ ನೆಟ್ಫಿಕ್ಸ್ ಬರೋಬ್ಬರಿ 275 ಕೋಟಿ ರೂ. ನೀಡಿ ಈ ಚಿತ್ರದ ಒಟಿಟಿ ಹಕ್ಕುಗಳನ್ನು ಖರೀದಿ ಮಾಡಿದೆಯಂತೆ. ಹಾಗೆಯೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿತರಣಾ ಹಕ್ಕುಗಳು 300 ಕೋಟಿ ರೂ.ಗಳಿಗೆ, ಉತ್ತರ ಭಾರತದಲ್ಲಿ ಹಿಂದಿ ವಿತರಣೆ ಹಕ್ಕುಗಳು 200 ಕೋಟಿ ರೂ.ಗೆ, ವಿದೇಶಗಳಲ್ಲಿ ರಿಲೀಸ್ ಮಾಡಲು 100 ಕೋಟಿ ರೂಪಾಯಿ ನೀಡಿ ವಿತರಣಾ ಹಕ್ಕು ಖರೀದಿಸಲಾಗಿದೆಯಂತೆ.
ಮತ್ತೊಂದೆಡೆ ಆಡಿಯೋ ಮತ್ತು ಟಿವಿ ರೈಟ್ಸ್ ಕೂಡ 200 ಕೋಟಿ ರೂ.ಗೆ ಸೇಲ್ ಆಗಿದೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೀಗೆ ಎಲ್ಲಾ ಸೇರಿಸಿದ್ರೆ ವಹಿವಾಟು ಸಾವಿರ ಕೋಟಿ ದಾಟಿದೆ. ಈ ಮೂಲಕ ಪುಷ್ಪ 2 ಸಿನಿಮಾ ರಿಲೀಸ್ ಗೂ ಮುನ್ನವೇ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.. ಇದರಿಂದ ನಿರ್ಮಾಪಕರು ಭರ್ಜರಿ ಲಾಭ ಕಂಡಿದ್ದಾರೆ. ಪುಷ್ಪ 2 ಬಳಿಕ ಪುಷ್ಪ 3 ಕೂಡ ಬರಲಿದೆ ಅನ್ನೋ ಅಪ್ಡೇಟ್ ಚಿತ್ರತಂಡ ಕೊಟ್ಟಿದೆ.