ನೇರಳೆ ಮಾರ್ಗದ ಬೈಯಪ್ಪನಹಳ್ಳಿ – ಕೆ.ಆರ್.ಪುರ, ಚಲ್ಲಘಟ್ಟ – ವೈಟ್‌ಫೀಲ್ಡ್ ನೇರ ಮೆಟ್ರೋ ಸಂಚಾರ ಆರಂಭ! – ಎಷ್ಟು ನಿಮಿಷಕ್ಕೊಂದು ರೈಲು?

ಬೆಂಗಳೂರು: ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಕೆಂಗೇರಿ-ಚಲ್ಲಘಟ್ಟ (2.10 ಕಿ.ಮೀ.) ಹಾಗೂ ಬೈಯಪ್ಪನಹಳ್ಳಿ – ಕೆ.ಆರ್.ಪುರ (2.10 ಕಿ.ಮೀ.) ಮಾರ್ಗದಲ್ಲಿ ಸೋಮವಾರ (ಅ.9) ಬೆಳಿಗ್ಗೆ 5 ಗಂಟೆಯಿಂದಲೇ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಿದ್ದು, ಮೆಟ್ರೋ ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ.
ಬಾಕಿ ಉಳಿದಿದ್ದ ಕೆಂಗೇರಿ-ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ – ಕೆ.ಆರ್.ಪುರ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ಆರಂಭಿಸುವುದಾಗಿ ಹೇಳಿ ಪದೇ ಪದೇ ದಿನಾಂಕ ಮುಂದೂಡುತ್ತಿತ್ತು. ಇದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದು. ಇದೀಗ ಬಹುಬೇಡಿಕೆಯ ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ – ಕೆ.ಆರ್.ಪುರ ನಡುವೆ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಯಾವುದೇ ರೀತಿಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಮಾಡದೇ ಮೆಟ್ರೋ ಸಂಚಾರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವುದೇ ಔಪಚಾರಿಕ ಉದ್ಘಾಟನೆ ಇಲ್ಲದೆ 2.10 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು 2.5 ಕಿ.ಮೀ. ಉದ್ದದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಿದೆ. ಇದರಿಂದ ಸಂಪೂರ್ಣ ನೇರಳೆ ಮಾರ್ಗ ವೈಟ್‌ಫೀಲ್ಡ್ (ಪೂರ್ವ) -ಚಲ್ಲಘಟ್ಟ (ಪಶ್ಚಿಮ) ಭಾಗ 43.49 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ಇದು ವೈಟ್ ಫಿಲ್ಡ್ ಭಾಗದ ಐಟಿ ಉದ್ಯೋಗಿಗಳು ಹಾಗೂ ಜನತೆ ಹೆಚ್ಚಿನ ಅನುಕೂಲವಾಗಿದೆ.
ಇದನ್ನೂ ಓದಿ: ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ದೇಶದಲ್ಲೇ ಅತ್ಯಂತ ಕಲುಷಿತ ನಗರ ದೆಹಲಿ
ಎಷ್ಟು ನಿಮಿಷಕ್ಕೊಂದು ರೈಲು?
ವೈಟ್‌ಫೀಲ್ಡ್‌ನಿಂದ ನೇರವಾಗಿ ಚಲ್ಲಘಟ್ಟದವರೆಗೆ ಯಾವುದೇ ತಡೆಯಿಲ್ಲದೆ ಪ್ರಯಾಣಿಕರು ಸಂಚರಿಸಬಹುದಾಗಿದೆ. ಸಂಚಾರ ದಟ್ಟಣೆ ಇಲ್ಲದ ವೇಳೆಯೂ ವೈಟ್‌ಫೀಲ್ಡ್‌ನಿಂದ ಪಟ್ಟಂದೂರು ಅಗ್ರಹಾರ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ. ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಂ.ಜಿ.ರಸ್ತೆ ಮಾರ್ಗದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ರೈಲು ಸಂಚಾರ ಆಗಲಿದೆ. ಮೈಸೂರು ರಸ್ತೆಯಿಂದ ಚಲ್ಲಘಟ್ಟ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ಸಂಚಾರ ಸಮಯ
ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆ ಎಂದಿನಂತೆ ಬೆಳಗ್ಗೆ 5ಕ್ಕೆ ಆರಂಭವಾಗುತ್ತದೆ.
ಒಟ್ಟು 66 ಮೆಟ್ರೋ ನಿಲ್ದಾಣಗಳು
ದೇಶದಲ್ಲಿ ಎರಡನೇ ಅತೀ ಉದ್ದದ ಮೆಟ್ರೋ ಮಾರ್ಗ ಎನ್ನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಇದೀಗ ವಿಸ್ತರಣೆ ಮಾರ್ಗ ಸೇರ್ಪಡೆಯಿಂದ ಒಟ್ಟಾರೆ 73.81 ಕಿಲೋ ಮೀಟರ್‌ಗೆ ವಿಸ್ತರಣೆಯಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗ 43.49 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಒಟ್ಟು 37 ಮೆಟ್ರೋ ನಿಲ್ದಾಣಗಳಿವೆ. ಇನ್ನು ಹಸಿರು ಮತ್ತು ನೇರಳೆ ಮಾರ್ಗ ಸೇರಿ ಒಟ್ಟು66 ಮೆಟ್ರೋ ನಿಲ್ದಾಣಗಳಿವೆ.

ನೋಡಿರಿ

