ಪುರಿ ಜಗನ್ನಾಥ ರಥಯಾತ್ರೆ ಆರಂಭ – 9 ದಿನಗಳ ಉತ್ಸವದ ಮಹತ್ವವೇನು ಗೊತ್ತಾ?

ಜಗತ್ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲದ ಜಾತ್ರೆ ಆರಂಭವಾಗಿದೆ. ಜೂನ್ 27ರಿಂದ ವಿಜೃಂಭಣೆಯಿಂದ ಯಾತ್ರೆಗೆ ಚಾಲನೆ ಸಿಕ್ಕಿದೆ. ಜಗನ್ನಾಥ ರಥಯಾತ್ರೆ 9 ದಿನಗಳ ಕಾಲ ನಡೆಯಲಿದೆ. ಜಗನ್ನಾಥ, ಬಲಭದ್ರ, ಮತ್ತು ಸುಭದ್ರೆಯ ವಿಗ್ರಹಗಳನ್ನು ರಥಗಳಲ್ಲಿ ಗುಂಡಿಚಾ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ.
ಇದನ್ನೂ ಓದಿ: ಮೈಸೂರಿನಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ – ಸರ್ಕಾರಿ ಬಸ್ಸುಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ!
ಪುರಿಯಲ್ಲಿ ಮೊದಲನೇ ದಿನದ ಯಾತ್ರೆಯಂದು ಮಹಾಪ್ರಭುಗಳ ರಥಯಾತ್ರೆ ನಡೆಯಲಿದೆ. ಈ ಯಾತ್ರೆಯನ್ನು ಕಣ್ತುಂಬಿಕೊಳ್ಳಲು ಪುರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಪೊಲೀಸರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸುರಕ್ಷತೆ, ಜನಸಂದಣಿ ನಿರ್ವಹಣೆ ಮತ್ತು ಸಾರ್ವಜನಿಕ ಅನುಕೂಲಕ್ಕಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪುರಿಯ ರಥಯಾತ್ರೆಯನ್ನು ಧರ್ಮ, ಸಂಸ್ಕೃತಿ ಮತ್ತು ಸಾಮರಸ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಥಯಾತ್ರೆ ದಿನದಂದು, ಶ್ರೀಕೃಷ್ಣ (ಜಗನ್ನಾಥ), ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರಾ ತಮ್ಮ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಗವಂತನ ರಥದ ಹಗ್ಗವನ್ನು ಎಳೆಯುವ ಅಥವಾ ಅದನ್ನು ಮುಟ್ಟುವ ಯಾವುದೇ ಭಕ್ತನು ಪುಣ್ಯ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಮೂರು ಬೃಹತ್ ರಥಗಳು:
ನಂದಿಘೋಷ (ಭಗವಾನ್ ಜಗನ್ನಾಥನ ರಥ) 18 ಚಕ್ರಗಳನ್ನು ಹೊಂದಿದ್ದು, 45 ಅಡಿ ಎತ್ತರವಿದೆ. ತಾಲಧ್ವಜ (ಬಲಭದ್ರ ರಥ) 16 ಚಕ್ರಗಳನ್ನು ಹೊಂದಿದೆ. ಮತ್ತು 44 ಅಡಿ ಎತ್ತರವಿದೆ. ದರ್ಪದಾಳನ (ಸುಭದ್ರಾ ರಥ) 14 ಚಕ್ರಗಳನ್ನು ಹೊಂದಿದ್ದು, 43 ಅಡಿ ಎತ್ತರವಿದೆ.
ಭದ್ರತಾ ವ್ಯವಸ್ಥೆಗಾಗಿ ಪುರಿಯಲ್ಲಿ ಸುಮಾರು 10,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 250 ಕ್ಕೂ ಹೆಚ್ಚು ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಉತ್ಸವಕ್ಕಾಗಿ ನಿಯೋಜಿಸಲಾದ 10,000 ಭದ್ರತಾ ಸಿಬ್ಬಂದಿಯಲ್ಲಿ ಒಡಿಶಾ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ನ ಎಂಟು ಕಂಪನಿಗಳು ಸೇರಿವೆ. ‘ಪುರಿಯಲ್ಲಿ ಮೊದಲ ಬಾರಿಗೆ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಲಾಗಿದೆ. ಉತ್ತರ ಛಕ್ ಮತ್ತು ಪುರಿ ಪಟ್ಟಣದ ನಡುವಿನ ಮಾರ್ಗದಲ್ಲಿ ಮತ್ತು ಪುರಿ ಮತ್ತು ಕೊನಾರ್ಕ್ ನಡುವಿನ ಮಾರ್ಗದಲ್ಲಿ ಸುಮಾರು 275 AI-ಸಕ್ರಿಯಗೊಳಿಸಿದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಈ ಕ್ಯಾಮೆರಾಗಳಿಂದ ಬರುವ ನೇರ ದೃಶ್ಯಗಳನ್ನು 24/7 ಮೇಲ್ವಿಚಾರಣೆ ಮಾಡಲಾಗುತ್ತದೆ’ ಎಂದು ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ತಿಳಿಸಿದ್ದಾರೆ.
ದೇಶ ಮತ್ತು ವಿದೇಶಗಳ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಪುರಿ ಉತ್ಸವಕ್ಕೆ ಬರುತ್ತಾರೆ. ಜುಲೈ 8 ರಂದು ಈ ರಥಯಾತ್ರೆ ಕೊನೆಗೊಳ್ಳುತ್ತದೆ. ಈ ಐತಿಹಾಸಿಕ ಉತ್ಸವವು ಧರ್ಮ, ಸಂಸ್ಕೃತಿ, ಮತ್ತು ಸಾಮರಸ್ಯದ ಸಂಕೇತವಾಗಿದೆ.

ನೋಡಿರಿ

