ತವರಿನಲ್ಲೂ ಚೆನ್ನೈಗೆ ಸಿಗಲಿಲ್ಲ ಗೆಲುವು – ಸಿಎಸ್‌ಕೆ ವಿರುದ್ಧ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್

ಒಂದು ಪಂದ್ಯ ದೇವರಿಗೆ ಬಿಟ್ಟ ಚೆನ್ನೈ ತಂಡ ಎರಡನೇ ಪಂದ್ಯದಲ್ಲೂ ಸೋತು ಸುಣ್ಣವಾಗಿದೆ. ತವರಿನಲ್ಲಾದರೂ ಗೆಲುವಿನ ಖಾತೆ ತೆರೆಯಬಹುದು ಎಂಬ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಸಿಕ್ಕಿದ್ದು ಬರೀ ನಿರಾಶೆ. ಚೆಪಾಕ್ ಮೈದಾನದಲ್ಲಿ ನಡೆದ ಕಿಂಗ್ಸ್ ಕಾಳಗದಲ್ಲಿ ಚೆನ್ನೈ ಸೋಲಿಸಿ ಪಂಜಾಬ್ ಕಿಂಗ್ ಆಗಿ ಮೆರೆದಿದೆ.
ಇದನ್ನೂ ಓದಿ:CSK ಬೇಟೆಗೆ ಹೀಗಿದೆ RCB ಪಡೆ – ಹೇಜಲ್GOD ಬಂದ್ರೆ ಡಫಿ ಡ್ರಾಪ್?
ಚೆನ್ನೈನ ಚೆಪಾಕ್ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 209 ರನ್ ಗಳಿಸಿದರೂ ಕೂಡಾ ಪಂಜಾಬ್ ಬ್ಯಾಟಿಂಗ್ ಬಲ ಮುಂದೆ ಗೆಲ್ಲಲು ಸಾಧ್ಯವಾಗಲೇ ಇಲ್ಲ.
ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಬಹುನಿರೀಕ್ಷಿತ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಮತ್ತೆ ವಿಫಲರಾದರು. ಒಂದಂಕಿಗೆ ಸುಸ್ತಾಗಿ ಹೋದರು.ಆದರೆ, ಆಯುಷ್ ಮ್ಹಾತ್ರೆ 73 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ಕಾರಣರಾದರು. ಸರ್ಫರಾಜ್ ಖಾನ್ ಕೂಡ ಕೇವಲ 12 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು. ಶಿವಂ ದುಬೆ 28 ಎಸೆತಗಳಲ್ಲಿ 45 ರನ್ ಗಳಿಸಿ ಅಜೇಯರಾಗಿ ಉಳಿದರು. ಚೆನ್ನೈ ತಂಡ 210 ರನ್‌ಗಳ ಉತ್ತಮ ಗುರಿಯನ್ನು ಪಂಜಾಬ್‌ಗೆ ನೀಡಿತ್ತು. ಆದರೆ, ಚೆನ್ನೈ ಬೌಲರನ್ನು ಮೊದಲ ಓವರ್‌ನಲ್ಲೇ ಪಂಜಾಬ್ ಓಪನರ್ಸ್ ಬೆಂಡತ್ತಲು ಶುರು ಮಾಡಿದರು. ಕಿಂಗ್ಸ್ ತಂಡದ ಪರ ಪ್ರಿಯಾಂಶ್ ಆರ್ಯ ಮತ್ತು ಪ್ರಬ್ಸಿಮ್ರಾನ್ ಸಿಂಗ್ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಅಬ್ಬರಿಸಿದ ಆರ್ಯ ಕೇವಲ 11 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿ ಔಟಾದರು. ಇದರ ನಂತರ, ಪ್ರಬ್ಸಿಮ್ರಾನ್ 34 ಎಸೆತಗಳಲ್ಲಿ 43 ರನ್ ಗಳಿಸಿದರೆ, ಕೂಪರ್ 22 ಎಸೆತಗಳಲ್ಲಿ 36 ರನ್ ಗಳಿಸಿದರು. ನಂತರ, ಶ್ರೇಯಸ್ ಅಯ್ಯರ್ ಜೊತೆಗೂಡಿದ ನೆಹಾಲ್ ವದೇರಾ ಕೂಡಾ ಬೊಂಬಾಟ್ ಬ್ಯಾಟಿಂಗ್ ಮಾಡಿದರು. 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಅನ್ಶುಲ್ ಕಾಂಬೋಜ್ ಔಟ್ ಮಾಡಿದರೆ, 9 ಎಸೆತಗಳಲ್ಲಿ 10 ರನ್ ಗಳಿಸಿ ವದೇರಾ ಕೂಡ ಔಟಾದರು. ಕೊನೆಯಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಲು 12 ಎಸೆತಗಳಲ್ಲಿ 12 ರನ್ ಅಗತ್ಯವಿದ್ದಾಗ, ಶಶಾಂಕ್ ಸಿಂಗ್ ಮತ್ತು ಸ್ಟೊಯಿನಿಸ್ ಜೊತೆಯಾಟದಿಂದ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಪಂಜಾಬ್ ತಂಡ ಗೆಲುವು ಸಾಧಿಸಿತು.

ನೋಡಿರಿ

