ಗುಜರಾತ್‌ ಟೈಟಾನ್ಸ್‌ಗೆ ಪಂಚ್ ಕೊಟ್ಟ ಪಂಜಾಬ್ ಕಿಂಗ್ಸ್ – ರೋಚಕ ಪಂದ್ಯ ಗೆದ್ದ ಶ್ರೇಯಸ್ ಪಡೆ

ಗುಜರಾತ್‌ ಟೈಟಾನ್ಸ್‌ಗೆ ಪಂಚ್ ಕೊಟ್ಟ ಪಂಜಾಬ್ ಕಿಂಗ್ಸ್ –  ರೋಚಕ ಪಂದ್ಯ ಗೆದ್ದ ಶ್ರೇಯಸ್ ಪಡೆ

 ರೋಚಕ ಐಪಿಎಲ್‌  ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌  ತಂಡ ಗುಜರಾತ್‌ ಟೈಟಾನ್‌ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿ ಹಾಲಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನೆಡೆಸಿದ ಗುಜರಾತ್ ಟೈಟಾನ್ಸ್ , ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್‌ ಬಾರಿಸಿತು,  ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ165 ರನ್‌ ಗಳಿಸಿ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿ: ಬೆಂಗಳೂರಿಗರೇ.. ಬಿ ಅಲರ್ಟ್!‌ – ಇನ್ಮುಂದೆ ಈ ಕೆಲಸ ಮಾಡಿಲ್ಲ ಅಂದ್ರೆ ಫೈನ್‌ ಫಿಕ್ಸ್!‌

ಚೇಸಿಂಗ್‌ ವೇಳೆ ಪಂಜಾಬ್‌, ಆರಂಭಿಕ ಬ್ಯಾಟರ್‌ ಪ್ರಿಯಾಂಶ್ ಆರ್ಯ(7) ವಿಕೆಟ್‌ ಬೇಗನೇ ಕಳೆದುಕೊಂಡಿತು. ಆದರೆ ಪ್ರಭ್‌ಸಿಮ್ರನ್‌ ಸಿಂಗ್‌ ಮತ್ತು ಪದಾರ್ಪಣ ಪಂದ್ಯವಾಡಿದ ಕೂಪರ್ ಕಾನೋಲಿ ಉತ್ತಮ ಜತೆಯಾಟ ನೆಡೆಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 24 ಎಸೆತ ಎದುರಿಸಿದ ಪ್ರಭ್‌ಸಿಮ್ರನ್‌ 4 ಸಿಕ್ಸರ್‌ ಮತ್ತು ಒಂದು ಬೌಂಡರಿ ನೆರವಿನಿಂದ 37 ರನ್‌ ಗಳಿಸಿದರು. ನಾಯಕ ಶ್ರೇಯಸ್‌ ಅಯ್ಯರ್‌, ಕೈಗೆ ಚೆಂಡು ತಗುಲಿದ ಬಳಿಕ ನೋವಿನ ಮಧ್ಯೆ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ಕ್ಯಾಚ್‌ ನೀಡಿ 18 ರನ್‌ಗೆ ಔಟಾದರು.

ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದ ಪಂಜಾಬ್‌ಗೆ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ತಾವೆಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತು, ಮುಂದಿನ ಓವರ್‌ನಲ್ಲಿ ಮತ್ತೆರಡು ವಿಕೆಟ್‌ ಕೆಡವಿ ಒತ್ತಡ ಹೇರಿದರು. ಆದರೆ ಮತ್ತೊಂದು ತುದಿಯಲ್ಲಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದ ಕೂಪರ್ ಕಾನೋಲಿ ಸೊಗಸಾದ ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ಚೊಚ್ಚಲ ಐಪಿಎಲ್‌ ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯ ತನಕ ಅಜೇಯವಾಗಿ ಬ್ಯಾಟಿಂಗ್‌ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 44 ಎಸೆತ ಎದುರಿಸಿದ ಅವರು ತಲಾ 5 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 72* ರನ್‌ ಬಾರಿಸಿದರು. ಗುಜರಾತ್‌ ತಂಡದ ಬೌಲರ್‌ಗಳು ಒಟ್ಟಾರೆ 14 ಸಿಕ್ಸರ್‌ಗಳನ್ನು ಹೊಡೆಸಿಕೊಂಡರು.

Kishor KV