ಅಯ್ಯರ್, ಪ್ರಭಸಿಮ್ರನ್ ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ – ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿದ ಲಕ್ನೋ

ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತಿದೆ. ಪ್ರಭಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಂಜಾಬ್ ಸತತ 2ನೇ ಗೆಲುವು ದಾಖಲಿಸಿದೆ.
ಇದನ್ನೂ ಓದಿ: MI ಬತ್ತಳಿಕೆಯಲ್ಲಿ ಯಂಗ್ ಗನ್- ಎಂಟ್ರಿಯಲ್ಲೇ 4 ವಿಕೆಟ್ ಉಡೀಸ್
ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ್ರು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 171 ರನ್ ಹೊಡೆಯಿತು. ಗುರಿ ಬೆನ್ನಟ್ಟಿದ ಪಂಜಾಬ್ 16.2 ಓವರ್‌ಗಳಲ್ಲಿ 177 ರನ್ ಹೊಡೆಯಿತು.
ಪಂಜಾಬ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಲಕ್ನೋ ವಿಫಲವಾಯ್ತು. ಪ್ರಿಯಾಂಶ್ ಆರ್ಯ 8 ರನ್ ಗಳಿಸಿ ಔಟಾದರೂ ಎರಡನೇ ವಿಕೆಟಿಗೆ ಪ್ರಭಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 84 ರನ್ ಜೊತೆಯಾಟವಾಡುವಾಗಲೇ ಪಂಜಾಬ್ ಜಯ ಖಚಿತವಾಗಿತ್ತು. ಮುರಿಯದ ಮೂರನೇ ವಿಕೆಟಿಗೆ ಶ್ರೇಯಸ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ನೆಹಾಲ್ ವಧೇರಾ 37 ಎಸೆತಗಳಲ್ಲಿ 67 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರಭಸಿಮ್ರನ್ ಸಿಂಗ್ 69 ರನ್ (34 ಎಸೆತ, 9 ಬೌಂಡರಿ, 3 ಸಿಕ್ಸ್), ಶ್ರೇಯಸ್ ಅಯ್ಯರ್ ಔಟಾಗದೇ 52 ರನ್(30 ಎಸೆತ, 3 ಬೌಂಡರಿ, 4 ಸಿಕ್ಸ್), ನೆಹಾಲ್ ವಧೇರಾ ಔಟಾಗದೇ 43 ರನ್ ( 25 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿದರು. ಈ ಜಯದಿಂದ ಐದನೇ ಸ್ಥಾನದಲ್ಲಿದ್ದ ಪಂಜಾಬ್ ಎರಡನೇ ಸ್ಥಾನಕ್ಕೆ ಜಿಗಿದರೆ ಮೂರನೇ ಸ್ಥಾನದಲ್ಲಿದ್ದ ಲಕ್ನೋ ಆರನೇ ಸ್ಥಾನಕ್ಕೆ ಜಾರಿದೆ.