ರಾಜಸ್ಥಾನ್ ರಾಯಲ್ಸ್​ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್​! – ಆರ್‌ ಆರ್‌ ಪ್ಲೇ ಆಫ್‌ ಕನಸು ಭಗ್ನ?

ರಾಜಸ್ಥಾನ್ ರಾಯಲ್ಸ್​ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್​! – ಆರ್‌ ಆರ್‌ ಪ್ಲೇ ಆಫ್‌ ಕನಸು ಭಗ್ನ?

ಪಂಜಾಬ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ನಡುವೆ ನಡೆದ ಪಂದ್ಯದಲ್ಲಿ ಪಂಜಾಬ್‌ ಗೆದ್ದು ಬೀಗಿದೆ. ರಾಜಸ್ಥಾನ್‌ ವಿರುದ್ದ ಪಂಜಾಬ್‌ 5 ವಿಕೆಟ್‌ಗಳ ಜಯ ಸಾಧಿಸಿದೆ.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಪಂಜಾಬ್‌ ಕಿಂಗ್ಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ರೋಷಾವೇಶ ಮೆರೆದಿದೆ. ಬಲಿಷ್ಠ ತಂಡ ರಾಜಸ್ಥಾನ್ ರಾಯಲ್ಸ್​ ಅನ್ನು ಪಂಜಾಬ್ ವಿರುದ್ಧ ಸೋತಿದ್ದು, ಮುಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ. ಇಲ್ಲದಿದ್ದರೆ ಪ್ಲೇಆಪ್‌ ರೇಸ್‌ ನಿಂದ ಹೊರ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:RCB ಪ್ಲೇಆಫ್‌ ಫಿಕ್ಸ್‌!!? – DC ಸೋಲಿಸಲು ಎಡವಿದ್ದೆಲ್ಲಿ?

ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 144 ರನ್‌ ಗಳನ್ನ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ 18.5 ಓವರ್‌ಗಳಲ್ಲೇ 5 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗೆಲುವು ಸಾಧಿಸಿತು.

ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ ಸಹ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಯಿತು. ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಜಾನಿ ಬೈರ್‌ಸ್ಟೋವ್‌, ಪ್ರಭ್‌ಸಿಮ್ರನ್‌ ಸಿಂಗ್‌, ರೀಲಿ ರುಸ್ಸೋ, ಶಶಾಂಕ್‌ ಸಿಂಗ್‌ ಬ್ಯಾಟಿಂಗ್‌ನಲ್ಲಿ ಕೈಕೊಟ್ಟರು.

ಮಾರಕ ಬೌಲಿಂಗ್‌ ದಾಳಿಯಲ್ಲಿ 2 ವಿಕೆಟ್‌ ಕಿತ್ತಿದ್ದ ನಾಯಕ ಸ್ಯಾಮ್‌ ಕರ್ರನ್‌ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದರು. 41 ಎಸೆತಗಳಲ್ಲಿ 63 ರನ್‌ (3 ಸಿಕ್ಸರ್‌, 5 ಬೌಂಡರಿ) ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಜಿತೇಶ್‌ ಶರ್ಮಾ 22 ರನ್‌, ಅಶುತೋಷ್‌ ಶರ್ಮಾ 17 ರನ್‌, ಪ್ರಭ್‌ಸಿಮ್ರನ್‌ ಸಿಂಗ್‌ 6, ಜಾನಿ ಬೈರ್‌ಸ್ಟೋವ್‌ 14 ರನ್‌, ರೀಲಿ ರೊಸ್ಸೊ 22 ರನ್‌ ಗಳಿಸಿದರೆ, ಶಶಾಂಕ್‌ ಸಿಂಗ್‌ ಶೂನ್ಯ ಸುತ್ತಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ್‌ ಕಳಪೆ ಪ್ರದರ್ಶನವನ್ನೇ ನೀಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಧಿಕ ರನ್‌ ಗಳಿಸದೇ ಕೈಕೊಟ್ಟರು. ರಾಜಸ್ಥಾನ್‌ ರಾಯಲ್ಸ್ ಪರ ರಿಯಾನ್‌ ಪರಾಗ್‌ 48 ರನ್‌ (34 ಎಸೆತ, 6 ಬೌಂಡರಿ), ಆರ್‌. ಅಶ್ವಿನ್‌ 28 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲೇ ಇಲ್ಲ.

ಯಶಸ್ವಿ ಜೈಸ್ವಾಲ್‌ ಮೊದಲ ಓವರ್‌ನಲ್ಲೇ 4 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಟಾಮ್ ಕೊಹ್ಲರ್-ಕ್ಯಾಡ್ಮೋರ್ ಮತ್ತು ಸಂಜು ಸ್ಯಾಮ್ಸನ್‌ ತಲಾ 18 ರನ್‌, ಟ್ರೆಂಟ್‌ ಬೋಲ್ಟ್‌ 12 ರನ್‌ ಗಳಿಸಿದರು. ಪಂಜಾಬ್‌ ಪರ ಸ್ಯಾಮ್‌ ಕರ್ರನ್‌, ಹರ್ಷಲ್‌ ಪಟೇಲ್‌, ರಾಹುಲ್‌ ಚಹಾರ್‌ ತಲಾ ಎರಡು ವಿಕೆಟ್‌ ಕಿತ್ತರೆ, ಅರ್ಷ್‌ದೀಪ್‌ ಸಿಂಗ್‌, ನಥಾನ್‌ ಎಲ್ಲಿಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Shwetha M