ನಾಯಿ ಕಚ್ಚಿದ ಸಂತ್ರಸ್ತರಿಗೆ ಪ್ರತಿ ಹಲ್ಲಿನ ಗಾಯಕ್ಕೆ 10,000 ರೂ. ಪರಿಹಾರ! – ಹೈಕೋರ್ಟ್
ಬೀದಿ ನಾಯಿ ಹಾವಳಿ, ಸಾಕು ನಾಯಿಗಳ ದಾಳಿ, ನಾಯಿ ಕಡಿತ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಲೆ ಇದೆ. ನಾಯಿಗಳ ದಾಳಿಯಿಂದಾಗಿ ಈಗಾಗಲೇ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕೆಲವರು ಜೀವ ಕಳೆದುಕೊಂಡಿರುವ ಪ್ರಕರಣಗಳು ಇದೆ. ನಾಯಿ ದಾಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ. ಒಂದು ಬಾರಿ ಬೀದಿ ನಾಯಿ ಕಚ್ಚಿದರೆ ರಾಜ್ಯ ಸರ್ಕಾರ ಸಂತ್ರಸ್ತ ವ್ಯಕ್ತಿಗೆ ಕನಿಷ್ಟ 10,000 ರೂ. ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ.
ಇತ್ತೀಚೆಗೆ ನಾಯಿ ದಾಳಿಗೆ ಒಳಗಾಗುತ್ತಿರುವ ಪ್ರಕರಗಳು ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಬೀದಿಯಲ್ಲಿ ಪ್ರಾಣಿಗಳ ದಾಳಿಯಿಂದ ಗಾಯಕ್ಕೊಳಗಾಗುವ ವ್ಯಕ್ತಿಗೆ ಪರಿಹಾರ ನೀಡಬೇಕು. ಅದರಲ್ಲೂ ನಾಯಿ ಕಚ್ಚಿದರೆ ಸಂತ್ರಸ್ತರಿಗೆ ಪ್ರತಿ ಹಲ್ಲಿನ ಗಾಯಕ್ಕೆ 10 ಸಾವಿರ, ಇನ್ನು 0.2 ಸೆಂಟಿಮೀಟರ್ ಆಳದ ಗಾಯಕ್ಕೆ 20,000 ರೂಪಾಯಿ ಪರಿಹಾರ ನೀಡಬೇಕು. ಸಾಕು ನಾಯಿ ಯಾರಿಗಾದರು ಕಚ್ಚಿದರೆ ಮಾಲೀಕ ಇದೀಗ ಹೊಸ ಆದೇಶದ ಪ್ರಕಾರ ಹಣ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ: ಕರೆಂಟ್ ಕಳ್ಳ ಕುಮಾರಸ್ವಾಮಿ ಎಂಬ ಆರೋಪ – ಶುರುವಾಯ್ತು ಮತ್ತೊಂದು ಸುತ್ತಿನ ಕಾಂಗ್ರೆಸ್ – ಜೆಡಿಎಸ್ ಕಾಳಗ!
ಬೀದಿ ಪ್ರಾಣಿಗಳು, ನಾಯಿಗಳ ದಾಳಿಯಿಂದ ಗಾಯಗೊಳಗಾಗುವ ವ್ಯಕ್ತಿಗೆ ಸರ್ಕಾರ ಪರಿಹಾರ ನೀಡಬೇಕು. ಯಾವುದೇ ವ್ಯಕ್ತಿ ನಾಯಿ ಅಥವಾ ಇತರ ಸಾಕು ಪ್ರಾಣಿಗಳ ದಾಳಿಗೆ ತುತ್ತಾದರೆ, ಆತನಿಗೆ ಪರಿಹಾರವನ್ನು ಸಂಬಂಧ ಪಟ್ಟ ಮಾಲೀಕರಿಂದ ಅಥವಾ ಎಜೆನ್ಸಿಗಳಿಂದ ನೀಡುವ ಜವಾಬ್ದಾರಿ ಸರ್ಕಾರದ್ದು. ಖಾಸಗಿ ವ್ಯಕ್ತಿಗಳ ಸಾಕು ನಾಯಿ ದಾಳಿ, ಕಚೇರಿ ಸಾಕು ಪ್ರಾಣಿಗಳ ದಾಳಿಗಳ ಪ್ರಕರಣಗಳ ಇತ್ಯರ್ಥಕ್ಕೆ ಸರ್ಕಾರ ಸಮಿತಿ ರಚಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ವಾಘ್ ಬಕ್ರಿ ಚಹಾ ಗ್ರೂಪ್ ಮಾಲೀಕ 49 ವರ್ಷ ಪರಾಗ್ ದೇಸಾಯಿ ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದರು. ಈ ಪ್ರಕರಣ ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಬೀದಿ ನಾಯಿ ದಾಳಿಗೆ ಬಲಿಯಾದ ಪ್ರಕರಣ ಜನಸಾಮಾನ್ಯರ ಆತಂಕ ಹೆಚ್ಚಿಸಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಪಂಜಾಬ್-ಹರ್ಯಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.