‘ಕರ್ನಾಟಕ ರತ್ನ’ ಅಪ್ಪುಗೆ ಗಣ್ಯರಿಂದಲೂ ಗೌರವ – ಟ್ವೀಟ್ ನಲ್ಲೇ ಶುಭಕೋರಿದ ನಾಯಕರು

‘ಕರ್ನಾಟಕ ರತ್ನ’ ಅಪ್ಪುಗೆ ಗಣ್ಯರಿಂದಲೂ ಗೌರವ – ಟ್ವೀಟ್ ನಲ್ಲೇ ಶುಭಕೋರಿದ ನಾಯಕರು

ಕನ್ನಡ ಚಿತ್ರರಂಗದ ಪಾಲಿಗೆ ರಾಜಕುಮಾರನಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿ ವರ್ಷವೇ ಕಳೆದಿದೆ. ಆದ್ರೆ ಅವರ ನೆನಪುಗಳು ಹಸಿರಾಗಿಯೇ ಉಳಿದಿವೆ. ಅವ್ರು ಮಾಡಿದ ಕೆಲಸಗಳಿಂದ ಅಪ್ಪು ಅಂದ್ರೆ ದೇವರೆಂಬಂತೆ ಜನ ಪೂಜೆ ಮಾಡ್ತಿದ್ದಾರೆ. ಇವತ್ತು ಅವರ 48ನೇ ಬರ್ತಡೇಯನ್ನ ಹಬ್ಬದಂತೆ ಆಚರಿಸುತ್ತಿದ್ದಾರೆ.

ಗಡಿಗಳ ರೇಖೆ ಮರೆತು ಎಲ್ಲರೂ ಅಪ್ಪು ಬರ್ತಡೇ ಮಾಡ್ತಿದ್ದಾರೆ. ಸಮಾಜಮುಖಿ ಕೆಲಸಗಳನ್ನ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ದೊಡ್ಮನೆ ಅರಸನ ಹುಟ್ಟುಹಬ್ಬಕ್ಕೆ ರಾಜಕೀಯ ನಾಯಕರು ಕೂಡ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಶುಭಾಶಯ ಕೋರಿದ್ದಾರೆ. ವಿಪಕ್ಷನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. ‘ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. ಅಪ್ಪು ಸದಾ ಅಜರಾಮರ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಹಾಗೇ ‘ಪ್ರತಿಭಾವಂತ ನಟನಾಗಿ, ಹೃದಯವಂತ ಸಮಾಜ ಸೇವಕನಾಗಿ ಕೋಟ್ಯಂತರ ಜನರ ಮನಸ್ಸಿಗೆ ಮುದ ನೀಡಿದ, ಸರಳತೆ‌,‌ ಸಜ್ಜನಿಕೆ ಮತ್ತು ಮಾನವೀಯತೆಗೆ ಮತ್ತೊಂದು ಹೆಸರಾಗಿದ್ದ ‌ಕನ್ನಡಿಗರೆಲ್ಲರ ಮನೆ ಮಗ ಪ್ರೀತಿಯ ಅಪ್ಪು ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯುತ್ತೇನೆ’ ಎಂದು ಸಿದ್ದರಾಮಯ್ಯ ವಿಶ್ ಮಾಡಿದ್ದಾರೆ.


‘ಪವರ್ ಸ್ಟಾರ್ ಉದಯಿಸಿದ ದಿನವಿಂದು. ಬಾಲನಟನಾಗಿ, ಗಾಯಕನಾಗಿ, ನಾಯಕನಾಗಿ ಕನ್ನಡಿಗರ ಮನೆ-ಮನಗಳನ್ನು ಆಳಿದ ಶ್ರೀ ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಪಾರ. ಮರೆಯಾದ ಮಾಣಿಕ್ಯ ನಮ್ಮೆಲ್ಲರ ನೆನಪಲ್ಲಿ ಎಂದೆಂದಿಗೂ ಅಜರಾಮರ.‌ ಪ್ರೀತಿಯ ಅಪ್ಪು ಅವರ ಹುಟ್ಟುಹಬ್ಬದಂದು ಹೃದಯಾಂತರಾಳದ ನಮನಗಳು’ ಎಂದು ಡಿ.ಕೆ ಶಿವಕುಮಾರ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಶುಭ ಕೋರಿದ್ದಾರೆ.

ಮತ್ತೊಂದೆಡೆ ಆರೋಗ್ಯ ಸಚಿವ ಡಾಕ್ಟರ್ ಕೆ.ಸುಧಾಕರ್ ಕೂಡ ವಿಶ್ ಮಾಡಿದ್ದಾರೆ. ‘ಕನ್ನಡ ಚಿತ್ರರಂಗದ ಪ್ರಖ್ಯಾತ ನಟರು, ಕರ್ನಾಟಕ ರತ್ನ, ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮಜಯಂತಿಯಂದು ಅವರಿಗೆ ಗೌರವ ನಮನಗಳು. ಕನ್ನಡಿಗರ ಮನೆ-ಮನಸ್ಸುಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಪುನೀತ್ ಅವರ ಕಲಾ ಕ್ಷೇತ್ರದಲ್ಲಿನ ಸಾಧನೆ, ಸಾಮಾಜಿಕ ಕಾರ್ಯ,‌ ನಗು ಹಾಗೂ ಜೀವನ ಪ್ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ’ ಎಂದು ಬರೆದುಕೊಂಡಿದ್ದಾರೆ.

‘ಕರುನಾಡಿನ ಮನೆ ಮಗ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮ ಸ್ಮರಣೆಯಿಂದು. ನಿಷ್ಕಲ್ಮಶ ನಗು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಜನಮಾನಸದಲ್ಲಿ ಜೀವಂತವಾಗಿರುವ ನಮ್ಮೆಲ್ಲರ ಹೆಮ್ಮೆಯ ಅಪ್ಪು ಯುವಜನತೆಗೆ ಸದಾ ಸ್ಪೂರ್ತಿ’ ಎಂದು ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.

ರಕ್ತದಾನ, ಅನ್ನದಾನದ ಮೂಲಕ ಅಭಿಮಾನಿಗಳು ಅಪ್ಪು ಬರ್ತಡೇಯನ್ನ ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ.

suddiyaana