ಇಂದು ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ – ಅಪ್ಪು ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು

ಇಂದು ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ – ಅಪ್ಪು ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು

ಕನ್ನಡಿಗರ ಕಣ್ಮಣಿ, ನಗುವಿನ ಒಡೆಯ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಸವಿನೆನಪುಗಳು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಾನವೀಯತೆ, ನಗು ಮತ್ತು ಅವರು ಮಾಡಿದ ಸಮಾಜಮುಖಿ ಕಾರ್ಯಗಳ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಜೀವಂತ. ಇಂದು ಅಪ್ಪು ಅವರ ಜನ್ಮದಿನ. ಕನ್ನಡಿಗರ ಹೃದಯದಲ್ಲಿ ಅಜರಾಮರ ಆಗಿರುವ ರಾಜಕುಮಾರನನ್ನು ಕರುನಾಡೇ ನೆನಪಿಸಿಕೊಳ್ಳುತ್ತಿದೆ.

ಇದನ್ನೂ ಓದಿ:ಪಾಕ್ ಸೇನೆಯಿಂದ ಅಮಾನುಷ ಕೃತ್ಯ –   ಕಾಬೂಲ್‌ ಆಸ್ಪತ್ರೆ ಮೇಲೆ ದಾಳಿ ಮಾಡಿ 400 ಜನರನ್ನು ಬಲಿ ಪಡೆದ ಪಾಕಿಸ್ತಾನ!

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಕಿರಿಯ ಪುತ್ರ. 1975ರಲ್ಲಿ ಜನಿಸಿದ ಲೋಹಿತ್ (ಪುನೀತ್), ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಅಪ್ಪು, ಬಾಲನಟನಾಗಿ ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಅಂತಹ ಚಿತ್ರಗಳ ಮೂಲಕ ಮನೆಮಾತಾಗಿದ್ದರು. 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ಅವರು, ಮೊದಲ ಚಿತ್ರದಲ್ಲೇ ಯಶಸ್ಸಿನ ಶಿಖರ ಏರಿದರು. ಅಲ್ಲಿಂದ ಶುರುವಾದ ಅವರ ಪಯಣ ಅಭಿ, ಆಕಾಶ್, ಮಿಲನ, ಜಾಕಿ, ರಾಜಕುಮಾರದಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟನನ್ನಾಗಿ ಮಾಡಿತು. ಅವರ ನೃತ್ಯ, ಸಾಹಸ ಮತ್ತು ನಟನೆಗೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತವೇ ಮಾರುಹೋಗಿತ್ತು. ಪುನೀತ್ ಕೇವಲ ಒಬ್ಬ ನಟನಾಗಿ ಉಳಿಯಲಿಲ್ಲ. ಅವರ ನಿಜವಾದ ವ್ಯಕ್ತಿತ್ವ ತೆರೆಯ ಹಿಂದೆ ಇತ್ತು. ಶಕ್ತಿಧಾಮದ ಮೂಲಕ ಸಾವಿರಾರು ಅನಾಥ ಮಕ್ಕಳಿಗೆ ಆಸರೆಯಾಗಿದ್ದರು. ನೂರಾರು ಶಾಲೆಗಳಿಗೆ ನೆರವು ನೀಡುತ್ತಿದ್ದರು. ಈ ಯಾವುದೇ ಸಮಾಜಮುಖಿ ಕೆಲಸಗಳನ್ನು ಅವರು ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಅವರ ನಿಧನದ ನಂತರವಷ್ಟೇ ಅವರು ಮಾಡುತ್ತಿದ್ದ ದಾನ-ಧರ್ಮಗಳ ಮಹತ್ವ ಜಗತ್ತಿಗೆ ತಿಳಿಯಿತು. ತಮ್ಮ ಮರಣದ ನಂತರವೂ ನೇತ್ರದಾನ ಮಾಡುವ ಮೂಲಕ ನಾಲ್ಕು ಜನರಿಗೆ ಬೆಳಕಾದರು. ಇಂದು ಅಪ್ಪು ಹುಟ್ಟು ಹಬ್ಬದ ಹಿನ್ನೆಲೆ ಅಭಿಮಾನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಇನ್ನು ಪವರ್‌ಸ್ಟಾರ್‌ ಕುಟುಂಬದವರು ಪುನೀತ್ ಸ್ಮಾರಕದ ಬಳಿ ತೆರಳಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಫ್ಯಾನ್ಸ್ ಈ ದೃಶ್ಯವನ್ನು ನೋಡಿ ಭಾವುಕರಾಗಿದ್ದಾರೆ. ಅಪ್ಪು ಇಂದು ನಮ್ಮ ಜೊತೆ ಇರಬೇಕಿತ್ತು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನು ಅಪ್ಪು ಹುಟ್ಟುಹಬ್ಬದ ಹಿನ್ನೆಲೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಆಕಾಶದಾಚೆ ಎಲ್ಲೋ ದೇವರಿಲ್ಲವೋ, ಇದು ಆಗ ಕೇಳಿದಾಗ ಎಷ್ಟು ನಿಜ ಅನ್ಸಿತ್ತು… ಈಗಲೂ ಹಾಗೇ ಇದೆ. ನಿನ್ನನ್ನು ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲವೇ ಇಲ್ಲ. ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನ ನಿನ್ನನ್ನು ಪ್ರತಿ ದಿನ ಸಂಭ್ರಮಿಸುತ್ತಾರೆ. ನಿನ್ನ ಹುಟ್ಟು ಹಬ್ಬ ನಮ್ಮೆಲ್ಲರಿಗೂ ಹಬ್ಬ. ನಿನ್ನ ಹೆಸರು ಹೇಳಿದೊಡನೆ ಮೂಡುವ ನಗು, ನೀನು ಎಲ್ಲರಿಗೂ ಕೊಟ್ಟಿರುವ ಉಡುಗೊರೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು.. ನಿನ್ನ ಶಿವಣ್ಣ. ಎಂದು ಬರೆದುಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *