ಗೋ ಸಾಗಾಟದ ವೇಳೆ ವ್ಯಾಪಾರಿ ಕೊಲೆ ಕೇಸ್ – ರಾಜಸ್ಥಾನದಲ್ಲಿದ್ದ ಪುನೀತ್ ಕೆರೆಹಳ್ಳಿ & ಗ್ಯಾಂಗ್  ಅರೆಸ್ಟ್

ಗೋ ಸಾಗಾಟದ ವೇಳೆ ವ್ಯಾಪಾರಿ ಕೊಲೆ ಕೇಸ್ – ರಾಜಸ್ಥಾನದಲ್ಲಿದ್ದ ಪುನೀತ್ ಕೆರೆಹಳ್ಳಿ & ಗ್ಯಾಂಗ್  ಅರೆಸ್ಟ್

ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಘಟನೆ ಅದು. ರಕ್ಷಣೆ ಹೆಸರಲ್ಲಿ ಜೀವವನ್ನೇ ತೆಗೆದಿರೋ ಗಂಭೀರ ಆರೋಪ ಕೇಳಿ ಬಂದಿತ್ತು. ರಾಜಕೀಯ ನಾಯಕರ ನಡುವೆ ಸಮರಕ್ಕೂ ನಾಂದಿ ಹಾಡಿತ್ತು. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಬಳಿ ನಡೆದಿದ್ದ ಅದೇ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಗ್ಯಾಂಗ್​ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜಸ್ಥಾನದಲ್ಲಿ ಅಡಗಿದ್ದ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರನ್ನ ಖೆಡ್ಡಾಗೆ ಕೆಡವಿದ್ದಾರೆ.

ಇದನ್ನೂ ಓದಿ : ರೈಲಿನಲ್ಲಿ ಮೂವರ ಸಾವಿಗೆ ಕಾರಣನಾದವನ ಬಂಧನ

ಅಸಲಿಗೆ ಆಗಿದ್ದೇನಂದ್ರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದರೂ ಕೆಲವೆಡೆ ಅಕ್ರಮವಾಗಿ ಗೋವುಗಳನ್ನ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರೋ ಆರೋಪ ಇದೆ. ಹೀಗೆಯೇ ಮಾರ್ಚ್ 31ರ ರಾತ್ರಿ ಸಾತನೂರು ಗ್ರಾಮದ ಬಳಿ 16 ಗೋವುಗಳನ್ನ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರೋ ಆರೋಪದಲ್ಲಿ ಕ್ಯಾಂಟರ್​ನ ಅಡ್ಡಗಟ್ಟಲಾಗಿತ್ತು. ನಾನು ಬಿಜೆಪಿ ಕಾರ್ಯಕರ್ತ, ಹಿಂದೂ ಸಂಘಟನೆ ಮುಖಂಡ, ಧರ್ಮರಕ್ಷಕ, ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಮುಖಂಡ ಅಂತೆಲ್ಲಾ ಬೊಬ್ಬೆ ಹೊಡೆಯುವ ಪುನೀತ್ ಕೆರೆಹಳ್ಳಿ ಮತ್ತು ಅವನ ಟೀಂ ದಾಳಿ ನಡೆಸಿತ್ತು. ಫೇಸ್​ಬುಕ್ ಲೈವ್ ಮಾಡಿ ಜಾನುವಾರುಗಳನ್ನ ರಕ್ಷಿಸಿದ್ದೇವೆ ಅಂತಾ ಪೋಸ್ ಕೊಟ್ಟಿದ್ರು.  ಆದರೆ ಈ ಘಟನೆ ನಡೆದ ಮರುದಿನವೇ ಜಾನುವಾರು ವ್ಯಾಪಾರಿ ಇದ್ರೀಷ್ ಪಾಷಾ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ರು. ಈ ನಡುವೆ ದೊಣ್ಣೆ ಹಿಡಿದು ಓಡಾಡಿದ್ದ ಪುನೀತ್ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಪುನೀತ್ & ಸಹಚರರೇ ಕೊಲೆ ಮಾಡಿದ್ದಾರೆಂದು ಮೃತನ ಸಂಬಂಧಿಗಳು ಸಾತನೂರು ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು. ಹಾಗೇ ಮುಸ್ಲಿಂ ಸಮುದಾಯದಿಂದ ಹಲವೆಡೆ ಪ್ರತಿಭಟನೆ ಕೂಡ ನಡೆಸಲಾಗಿತ್ತು.

ಅಷ್ಟಕ್ಕೂ ಜಾನುವಾರು ವ್ಯಾಪಾರಿಯಾಗಿದ್ದ ಇದ್ರೀಷ್ ಪಾಷಾ ತೆಂಡೆಕೆರೆ ಸಂತೆಯಲ್ಲಿ ಜಾನುವಾರು ಖರೀದಿ ಮಾಡಿದ್ರಂತೆ. ರಸೀದಿ ಸಮೇತ ಜಾನುವಾರುಗಳ ಸಾಗಾಟ ಮಾಡುವಾಗ ಸಾತನೂರು ಸರ್ಕಲ್ ನಲ್ಲಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಆದರೆ ಹಣ ನೀಡದಿದ್ದಕ್ಕೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಇದೆ. ಈ ಸಂಬಂಧ ಇದ್ರೀಷ್ ಸಂಬಂಧಿ ಠಾಣೆಗೆ ದೂರು ದಾಖಲಿಸಿದ್ರು. ಎಫ್ ಐಆರ್ ದಾಖಲಾಗುತ್ತಿದ್ದಂತೆ ಪುನೀತ್ & ಗ್ಯಾಂಗ್ ತಲೆಮರೆಸಿಕೊಂಡಿತ್ತು. 4 ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಐವರನ್ನ ಅರೆಸ್ಟ್ ಮಾಡಿದ್ದಾರೆ.

 

suddiyaana