5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು : 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪ್ರಸಕ್ತ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. 2023ರಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಮೌಲ್ಯಾಂಕನ ಪರೀಕ್ಷೆ ಹೆಸರಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕೆಯಲ್ಲಿ ಚೇತರಿಕೆ ಮೂಡಿಸಲು ಇಲಾಖೆ ಈ ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರ ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ.
ಇದನ್ನೂ ಓದಿ : ಮಕ್ಕಳಿಂದ ಮೊಬೈಲ್ ದೂರವಿರಿಸಲು ಪೋಷಕರಿಂದ ಲಿಖಿತ ಆಶ್ವಾಸನೆ -ಶಾಲೆಗಳ ಕ್ರಮಕ್ಕೆ ಉತ್ತಮ ಸ್ಪಂದನೆ
10ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸುವ ಮುನ್ನ 5 ಮತ್ತು 8ನೇ ತರಗತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದರು. ಅದರಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತರಿಂದ ಈ ಸಂಬಂಧ ಆದೇಶ ಪ್ರಕಟವಾಗಿದ್ದು, 2 ಗಂಟೆಯ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ 40 ಅಂಕ ಲಿಖಿತ ಮತ್ತು 10 ಅಂಕ ಮೌಖಿಕ ಪರೀಕ್ಷೆ ಆಗಿರಲಿದೆ. ಶಿಕ್ಷಣ ಗುಣಮಟ್ಟ ಕುಸಿದಿರುವ ಕಾರಣ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕ್ಲಸ್ಟರ್ ಹಂತದಲ್ಲಿ ಪರೀಕ್ಷೆಯ ವ್ಯವಸ್ಥೆಗಳು ನಡೆಯಲಿದೆ.
ಯಾವುದೇ ವಿದ್ಯಾರ್ಥಿಗಳನ್ನ ಈ ಪರೀಕ್ಷೆಯಲ್ಲಿ ಫೇಲ್ ಮಾಡುವುದಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯೋ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಇಲಾಖೆ ಮಾಡಿಕೊಳ್ಳಲಿದೆ. ಮಕ್ಕಳ ಕಲಿಕೆ ಗುಣಮಟ್ಟ ಏನು? ಕೊರತೆಗಳೇನು? ಯಾವ ವಿಷಯಗಳಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯಲು ಈ ಪರೀಕ್ಷೆಯಿಂದ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.