ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ –  ಚಿತ್ರದಲ್ಲಿ ತೋರಿಸಿರುವ ಅಂಶ ಸಾಬೀತಾದ್ರೆ 1 ಕೋಟಿ ರೂ. ಬಹುಮಾನ!  

ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ –  ಚಿತ್ರದಲ್ಲಿ ತೋರಿಸಿರುವ ಅಂಶ ಸಾಬೀತಾದ್ರೆ 1 ಕೋಟಿ ರೂ. ಬಹುಮಾನ!  

ಇತ್ತೀಚಿಗಷ್ಟೇ  ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ದೇಶದಾದ್ಯಂತ ವಿವಾದದ ಕಿಚ್ಚು ಹೊತ್ತಿರುವ ಲವ್ ಜಿಹಾದ್ ಆಧಾರಿತ ಸಿನಿಮಾ ಇದು ಎಂಬ ಆಪಾದನೆಗೆ ಗುರಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಒಂದು ವರ್ಗ ಈ ಚಿತ್ರವನ್ನು ನಿಷೇಧಿಸಬೇಕು ಅಂತಾ ಒತ್ತಾಯಿಸಿದ್ರೆ, ಇನ್ನೊಂದು ವರ್ಗ ಈ ಚಿತ್ರವನ್ನು ಯಾಕೆ ನಿಷೇಧಿಸಬೇಕು ಎಂದು ಪ್ರಶ್ನೆ ಮಾಡುತ್ತಿವೆ. ಇದರ ಬೆನ್ನಲ್ಲೇ ಈ ಚಿತ್ರದಲ್ಲಿ ತೋರಿಸಿರುವ ಅಂಶವನ್ನು ಸಾಬೀತು ಮಾಡಿದ್ರೆ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಅಂತಾ ಘೋಷಣೆ ಮಾಡಲಾಗಿದೆ.

‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಹೇಳಲಾಗಿರುವ 32 ಸಾವಿರ ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಬಳಿಕ ಐಸಿಸ್‌ ಸಂಘಟನೆ ಸೇರಿಸಲಾಗಿದೆ ಎಂಬ ಅಂಶವನ್ನು ಸಾಬೀತು ಮಾಡಿದರೆ 1 ಕೋಟಿ ರೂ. ಬಹುಮಾನ ಕೊಡುವುದಾಗಿ ಕೇರಳ ಮುಸ್ಲೀಂ ಲೀಗ್‌ ಯುವ ಸಮಿತಿ ಘೋಷಣೆ ಮಾಡಿದೆ. ಪ್ರತಿ ಜಿಲ್ಲೆಯಲ್ಲೂ ಮಾಹಿತಿ ಸಂಗ್ರಹ ಕೇಂದ್ರ ತೆರೆಯಲಾಗಿದೆ. ರಾಜ್ಯದ ಯಾವುದೇ ಪ್ರದೇಶದಲ್ಲಿ ಮತಾಂತರವಾದ ಅಥವಾ ಸಿನಿಮಾದಲ್ಲಿಆರೋಪಿಸಿದ ಮಾಹಿತಿಗಳಿದ್ದಲ್ಲಿ ಮಾಹಿತಿ ಕೇಂದ್ರಕ್ಕೆ ನೀಡುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ – ರಾಜಕೀಯ ತಿರುವು ಪಡೆದಿದ್ದೇಕೆ ಸಿನಿಮಾ?

32,000 ಯುವತಿಯರು ಇಸ್ಲಾಂಗೆ ಮತಾಂತರವಾಗಿ, ಐಸಿಸ್‌ಗೆ ಸೇರ್ಪಡೆಯಾದರು ಎಂದು ಸಿನಿಮಾದ ಟ್ರೇಲರ್‌ ನಲ್ಲಿ ಹೇಳಲಾಗಿದೆ. ಈ ರೀತಿ ಆದ 32,000 ಅಲ್ಲ , 32 ಮಹಿಳೆಯರ ಬಗ್ಗೆ ಸಾಕ್ಷ್ಯ ನೀಡಿದರೆ 11 ಲಕ್ಷ ರೂ. ನೀಡುತ್ತೇನೆ ಎಂದು ವಕೀಲ, ನಟ ಸಿ.ಶುಕ್ಕೂರ್‌ ಸವಾಲು ಹಾಕಿದ್ದಾರೆ.

ಸುದಿಪ್ಟೋ ಸೆನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಹಸಿ ಸುಳ್ಳುಗಳೇ ತುಂಬಿದೆ. ಈ ಸಿನಿಮಾ ಸಮಾಜದ ಹಾದಿ ತಪ್ಪಿಸುವುದರಿಂದ ಚಿತ್ರವನ್ನು ರಿಲೀಸ್ ಮಾಡಲು ಬಿಡಬಾರದು ಎಂದು ಕೇರಳ ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ಕೂಡ ಒತ್ತಾಯಿಸಿವೆ.

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ 32 ಸಾವಿರ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿರುವ ಬಗ್ಗೆ ತೋರಿಸಲಾಗಿದೆ. ಅಲ್ಲದೇ ಅಂಥ ಹೆಣ್ಣು ಮಕ್ಕಳನ್ನು ಐಸಿಸ್‌ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂದು ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಇದ್ಯಾವುದೂ ನಡೆದಿಲ್ಲ. ಬರೀ ಹಸಿ ಸುಳ್ಳುಗಳನ್ನೇ ನಿಜವೆಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿಕೊಂಡು ಸುಳ್ಳು ಕಥೆ ಮೇಲೆ ಸಿನಿಮಾ ಮಾಡಲಾಗಿದೆ. ರಾಜಕೀಯ ಮತ ಧ್ರುವೀಕರಣಕ್ಕೆ ಆರೆಸ್ಸೆಸ್‌ ಸೃಷ್ಟಿಸಿರುವ ಕಟ್ಟು ಕಥೆ. ಕೋಮು ಸಾಮರಸ್ಯದ ರಾಜ್ಯದಲ್ಲಿ ಹಿಂದೂಗಳ ಧ್ರುವೀಕರಣಕ್ಕೆ ಸುಳ್ಳು ಕಥೆ ಸೃಷ್ಟಿಸಲಾಗಿದೆ. ರಾಜ್ಯದ ಜಾತ್ಯತಿತ ವ್ಯವಸ್ಥೆಯನ್ನು ಬುಡಮೇಲು ಮಾಡಲು, ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ಸಿನಿಮಾ ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೂ ಕೆಲ ಸಂಘ ಸಂಸ್ಥೆಗಳ ವಾದವಾಗಿದೆ.

ಇನ್ನು ಕೇರಳ ಸರ್ಕಾರ ಕೂಡ ಸಹ ಚಿತ್ರ ಬಿಡುಗಡೆಯಾಗುವುದನ್ನು ತಡೆಯುವ ಆಲೋಚನೆಯಲ್ಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೀಡಿದ ಹೇಳಿಕೆ ಚಿತ್ರವನ್ನು ನಿಷೇಧಿಸಬೇಕು ಎಂಬ ಕೂಗಿಗೆ ಪರೋಕ್ಷವಾಗಿ ಸಮ್ಮತಿ ನೀಡಿತ್ತು. ಇದರ ಬೆನ್ನಲ್ಲೇ ಚಿತ್ರತಂಡವು ಸಿನಿಮಾದಲ್ಲಿ ಯಾವುದೇ ಸಮುದಾಯವನ್ನು ಟಾರ್ಗೆಟ್‌ ಮಾಡಿಲ್ಲ. ಉಗ್ರವಾದದ ಕುರಿತು ಬೆಳಕು ಚೆಲ್ಲಲಾಗಿದೆ ಅಷ್ಟೆ. ನಿಷೇಧ ಸರಿಯಲ್ಲ ಎಂದು ಹೇಳಿದೆ.

suddiyaana