ಚಿಕ್ಕಪ್ಪನಿಂದಲೇ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಪಶ್ಚಿಮ ಬಂಗಾಳದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯೊಬ್ಬರು ಬಾಲಕಿಯ ಶಿರಚ್ಛೇದ ಮಾಡಿರುವ ಘಟನೆ ನಡೆದಿದೆ.
ಏನಿದು ಘಟನೆ?
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಈ ಭೀಕರ ಘಟನೆ ನಡೆದಿದೆ. ಸಂಬಂಧಿಯೊಬ್ಬ 11 ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಹತ್ಯೆ ನಡೆಸಿದ್ದಾನೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಬಾಲಕಿಯ ಹತ್ಯೆ ಖಂಡಿಸಿ ಭಾರೀ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ: ಮರಳಿ ಬಿಜೆಪಿಗೆ ಸೇರುತ್ತಾರಾ ಅರುಣ್ ಕುಮಾರ್ ಪುತ್ತಿಲ? – ಫೆಬ್ರವರಿ 5ಕ್ಕೆ ಮುಹೂರ್ತ ಫಿಕ್ಸ್?
ಹತ್ಯೆಗೆ ಕಾರಣವೇನು?
ಆರೋಪಿಗೆ ಬಾಲಕಿಯ ತಂದೆ ಮೇಲೆ ಸಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದೇನೆ ಅಂತಾ ಹೇಳಿದ್ದಾನೆ. ಈ ಹಿಂದೆ ಹಲವು ಬಾರಿ ಬಾಲಕಿಯ ತಂದೆ ಸಾರ್ವಜನಿಕವಾಗಿ ಅವಮಾನಿಸಿ ಥಳಿಸಿದ್ದರು. ಹೀಗಾಗಿ ನಾನು ಬಾಲಕಿಯನ್ನು ಕೊಂದಿರುವುದಾಗಿ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿ ಬಾಲಕಿಯ ಶಿರಚ್ಛೇದ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಜನವರಿ 29 ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮುಂಡ ಮತ್ತು ತಲೆ ಮಾಲ್ಡಾ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ. ಹುಡುಗಿಯ 27 ವರ್ಷದ ಚಿಕ್ಕಪ್ಪನನ್ನು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆಹಚ್ಚಲಾಗಿದೆ. ಹುಡುಗಿ ಕಾಣೆಯಾಗುವ ಮೊದಲು ಆತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದ. ಆರೋಪಿ ಮೊದಲಿಗೆ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ. ಆದರೆ ನಂತರ ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವ್ಯಕ್ತಿಯನ್ನು ಬಂಧಿಸಿ 12 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಗರದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಅಮಾನುಷವಾಗಿ ಕೊಲೆ ಮಾಡಿರುವ ಬಾಲಕಿಯ ಚಿಕ್ಕಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕೂಡ ಪ್ರತಿಭಟನಾ ರ್ಯಾಲಿಗಳು ಮತ್ತು ಮೌನ ಜಾಗರಣೆ ನಡೆಸಿದ್ದವು.