ಸರ್ವಿಸ್ ರಸ್ತೆ ಇಲ್ಲದೇ ಟೋಲ್ ಸಂಗ್ರಹಕ್ಕೆ ವಿರೋಧ – ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಿಖಿಲ್ ಪ್ರತಿಭಟನೆ!
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಉದ್ಘಾಟನೆ ಆಗಿದ್ದೇ ಆಗಿದ್ದು. ಸಮಸ್ಯೆಗಳ ಸರಮಾಲೆಯೇ ಹೊರಗೆ ಬರುತ್ತಿವೆ. ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ದಶಪಥ ರಸ್ತೆ ಲೋಕಾರ್ಪಣೆಗೊಳಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಬಳಿಕ ಅಂಡರ್ ಪಾಸ್ ಸರಿಯಾಗಿ ನಿರ್ಮಾಣವಾಗದೆ ಮಳೆ ನೀರು ನಿಲ್ಲುತ್ತಿದೆ ಎಂದು ಪ್ರತಿಭಟನೆಗಳು ನಡೆದಿದ್ವು. ನಂತರ ಜನ ರಸ್ತೆ ದಾಟಲು ಸ್ಕೈವಾಕ್ ನಿರ್ಮಾಣ ಮಾಡದೇ ಇರುವುದು ಕೂಡ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೆಲ್ಲದರ ನಡುವೆ ಮಾರ್ಚ್ 14ರಿಂದ ಈ ಮಾರ್ಗದಲ್ಲಿ ಟೋಲ್ ಸಂಗ್ರಹ ಶುರುವಾಗಿದ್ದು, ಪ್ರತಿಭಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ಇದನ್ನೂ ಓದಿ : ಎಕ್ಸ್‌ಪ್ರೆಸ್ ವೇಯಲ್ಲಿ ಹೈಟೆಕ್ ಕ್ಯಾಮರಾ ಕಣ್ಣು – ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್
ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ, ಸರ್ವಿಸ್ ರಸ್ತೆಯೂ ಇಲ್ಲ. ಜೊತೆಗೆ ದುಬಾರಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಮೊನ್ನೆಯಿಂದಲೂ ಪ್ರತಿಭಟನೆಗಳು ನಡೆಯುತ್ತಿವೆ. ಇವತ್ತು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ನಿಂದ ಪ್ರತಿಭಟನೆ ನಡೆಸಲಾಗಿದೆ. ಸರ್ವೆಸ್ ರಸ್ತೆ ಇಲ್ಲದೆ ಟೋಲ್ ಸಂಗ್ರಹ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯನ್ನ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಿಕೆ ಟೋಲ್ ಪ್ಲಾಜಾ ಬಳಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಟೋಲ್ ಸಂಗ್ರಹದ ವಿರುದ್ದ ಪ್ರತಿಭಟನೆ ನಡೆಸಿದ್ರು. ಮಾಗಡಿ ಶಾಸಕ ಮಂಜುನಾಥ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸರ್ವೆಸ್ ರಸ್ತೆ ಇಲ್ಲದೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಫಾಸ್ಟ್ ಟ್ಯಾಗ್ ಇದ್ದರೆ 135 ರೂ ಕಟ್ಟಬೇಕು ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಡಬಲ್ ಹಣ ಕಟ್ಟಬೇಕು. 50 ಕಿ.ಮೀ ವ್ಯಾಪ್ತಿಯಲ್ಲಿ ಆಸ್ಪತ್ರೆ ಇರಬೇಕು. ಹೈವೇಯಲ್ಲಿ ಶೌಚಾಲಯವೂ ಇಲ್ಲ. ಹೀಗಾಗಿ ಟೋಲ್ ಸಂಗ್ರಹ ವಿರೋಧಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದರು.