ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ನಾಯಕರ ಪ್ರತಿಭಟನೆ – ‘ಖಜಾನೆ ಖಾಲಿ, ಚೊಂಬು ಹಿಡಿದು ನಿಂತಿದ್ದಾರೆ ಎಂದು ಹೆಚ್ಡಿಕೆ ವ್ಯಂಗ್ಯ!
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ಮುನ್ನವೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಚೊಂಬು ಹಿಡಿದು ಪ್ರತಿಭಟನೆ ನಡೆಸಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನ ಮೇಕ್ರಿ ಸರ್ಕಲ್ ನಲ್ಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದ್ದು, ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ.. ಸರ್ಕಾರದ ಸಾಧನೆ ಶೂನ್ಯ ಎಂದು ಚೊಂಬು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಚೊಂಬು ಶೋ ನಡೆದಿದ್ದು, ಜಿಎಸ್ಟಿ, ತೆರಿಗೆ ವಂಚನೆ, ನೆರೆ ಮತ್ತು ಬರ ಪರಿಹಾರ ಕೇಂದ್ರ ನೀಡಿಲ್ಲ ಎಂದು ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕ್ರಿಸ್ ಗೇಲ್, ಎಬಿಡಿ ಹೊಡಿಬಡಿ ಆಟಕ್ಕೂ ಸೆಡ್ಡು ಹೊಡೆದ ಎಂ.ಎಸ್ ಧೋನಿ
ಈ ವೇಳೆ ಭಾರಿ ಹೈಡ್ರಾಮ ನಡೆದಿದ್ದು, ಸುರ್ಜೆವಾಲ, ರಿಜ್ವಾನ್ ಹರ್ಷದ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ್ರು. ಸಿಎಂ ಸಿದ್ಧರಾಮಯ್ಯ ಮಂಡ್ಯ, ಮೈಸೂರು ಪ್ರವಾಸ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಗೈರಾಗಿದ್ರು.
ಇನ್ನು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಖಜಾನೆ ಖಾಲಿ ಆಗಿದೆ, ನೀವು ಏನಾದರೂ ಕೊಡಿ ಅಂತ ಚೊಂಬು ಹಿಡಿದುಕೊಂಡು ನಿಂತಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಮಾಜಿ ಸಿಎಂ ವ್ಯಂಗ್ಯ ಮಾಡಿದ್ದಾರೆ. ಅದು ಬಿಜೆಪಿ ವಿರುದ್ಧ ಮಾಡಿರುವ ಚೊಂಬು ಅಲ್ಲ. ನಾವು ಭಿಕ್ಷುಕರಾಗಿದ್ದೇವೆ. ನಮಗೆ ಏನಾದರೂ ಕೊಡಿ ಅಂತ ಕೇಳಲು ಚೊಂಬಿನ ಜಾಹೀರಾತು ಕೊಟ್ಟಿದ್ದಾರೆ. ಬೆಲೆ ಏರಿಕೆ ನಿಯಂತ್ರಿಸಲು ಆರ್ಬಿಐ ಇದೆ. ಹಣದುಬ್ಬರ ಆದಾಗ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುತ್ತವೆ ಎಂದಿದ್ದಾರೆ.