ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸುವಂತೆ ಪ್ರಸ್ತಾವನೆ – ಕೇಂದ್ರದ ಮನವಿಯನ್ನು ತಿರಸ್ಕರಿಸಿದ ದೆಹಲಿ ಸರ್ಕಾರ
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಮಂಗಳವಾರ ‘ದೆಹಲಿ ಚಲೋ’ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬವಾನಾ ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸುವಂತೆ ಪ್ರಸ್ತಾವನೆಯನ್ನು ದೆಹಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವಿಚಾರವಾಗಿ ಇದೀಗ ಕೇಂದ್ರ ಸರ್ಕಾರಕ್ಕೆ ಹಿನ್ನೆಡೆಯಾಗಿದೆ. ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ ಎಂದು ಎಂದು ವರದಿಯಾಗಿದೆ.
ಈ ಬಗ್ಗೆ ದೆಹಲಿ ಗೃಹ ಸಚಿವ ಕೈಲಾಶ್ ಗೆಹಲೋತ್ ಅವರು ಪ್ರತಿಕ್ರಿಯಿಸಿದ್ದಾರೆ. ‘ರೈತರ ಬೇಡಿಕೆಗಳು ಸತ್ಯದಿಂದ ಕೂಡಿವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕಾಗಿದೆ. ಆದ್ದರಿಂದ ರೈತರನ್ನು ಬಂಧಿಸುವುದು ಸರಿಯಲ್ಲ’ ಎಂದು ಗೆಜಲೋತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್ ಬಿಜೆಪಿ ಸೇರ್ಪಡೆ ಸಾಧ್ಯತೆ
ವಿವಿಧ ಬೇಡಿಕೆ ಈಡೇರಿಸುವಂತೆ ರೈತರು ಈಗಾಗಲೇ ದೆಹಲಿ ಚಲೋವನ್ನು ಆರಂಭಿಸಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸುತ್ತಿದ್ದಾರೆ. ಆದರೆ, ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಫು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ತಂತಿ, ಮೊಳೆಗಳ ಪಟ್ಟಿ, ಸಿಮೆಂಟ್ ಇಟ್ಟಿಗೆ ಮತ್ತು ಕಂಟೈನರ್‌ಗಳನ್ನು ಇಡಲಾಗಿದೆ. ಜೊತೆಗೆ ಬೃಹತ್ ಸಂಖ್ಯೆಯ ಪೊಲೀಸ್ ಮತ್ತು ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಿಂಫು ಗಡಿಯಲ್ಲಿ ವಾಣಿಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳವಾರದ ನಂತರ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ. ಹರಿಯಾಣ ಅಧಿಕಾರಿಗಳು ಅಂಬಾಲಾ, ಜಿಂದ್, ಫತೇಹಾಬಾದ್ ಮತ್ತು ಕುರುಕ್ಷೇತ್ರದಲ್ಲಿ ಗಡಿಗಳಲ್ಲಿ ಸಿಮೆಂಟ್ ಇಟ್ಟಿಗೆ, ಕಬ್ಬಿಣದ ಮೊಳೆಗಳ ಪಟ್ಟಿಗಳನ್ನು ಅಡ್ಡಲಾಗಿ ಇರಿಸುವ ಮೂಲಕ ಮೂಲಕ ನಿರ್ಬಂಧಿಸಿದ್ದಾರೆ. ಅಲ್ಲದೆ ರಾಜ್ಯದ 15 ಜಿಲ್ಲೆಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.