ಹಗಲು ಕಡಿಮೆ ದರ.. ರಾತ್ರಿ ಹೆಚ್ಚು ಬೆಲೆ – ಅವಧಿ ಆಧರಿಸಿ ಕರೆಂಟ್ ಬಿಲ್ ನೀಡಲು ಕೇಂದ್ರದ ಹೊಸ ನೀತಿಯಲ್ಲಿ ಪ್ರಸ್ತಾವ

ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಜನ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಈ ತಿಂಗಳ ಕರೆಂಟ್ ಬಿಲ್ ಡಬಲ್ ಬಂದಿದ್ದು ಶಾಕ್ ಆಗಿದ್ದಾರೆ. ಜೂನ್ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದ್ದು, ಸರ್ವರ್ ಡೌನ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ವಿದ್ಯುತ್ ಬಳಕೆ ಬಗ್ಗೆ ಹೊಸ ನೀತಿಯೊಂದನ್ನು ಘೋಷಿಸಿದೆ.
ಪ್ರಸ್ತಾವಿತ ಹೊಸ ವಿದ್ಯುತ್ ದರ ನೀತಿಯು ಬಳಕೆಯ ಅವಧಿ ಆಧರಿಸಿ ದರದಲ್ಲಿ ಏರಿಳಿತಕ್ಕೆ ಸಲಹೆ ನೀಡಿದೆ. ಹಗಲಿನ ಅವಧಿಯಲ್ಲಿ (ಟಿಒಡಿ- ಟೈಮ್ ಆಫ್ ಡೇ) ಬಳಕೆಯಾಗುವ ವಿದ್ಯುತ್ಗೆ ಶೇ.10ರಿಂದ 20ರವರೆಗೆ ದರ ತಗ್ಗಿಸಲು ಮತ್ತು ಹೆಚ್ಚು ವಿದ್ಯುತ್ ಬಳಕೆಯಾಗುವ ರಾತ್ರಿ ವೇಳೆ ದರವನ್ನು ಶೇ.10ರಿಂದ 20ರವರೆಗೆ ಹೆಚ್ಚಿಸಲು ಈ ನೀತಿ ಶಿಫಾರಸು ಮಾಡಿದೆ. ರಾತ್ರಿಯ ವೇಳೆ ಗ್ರಿಡ್ ಮೇಲಿನ ಅವಲಂಬನೆ ತಗ್ಗಿಸುವುದು ಈ ನೀತಿಯ ಉದ್ದೇಶವಾಗಿದೆ. ಜತೆಗೆ ಪರ್ಯಾಯ ಇಂಧನ ಮೂಲ ಹೆಚ್ಚಾಗಿ ಬಳಸಲು ಉತ್ತೇಜಿಸುತ್ತದೆ ಎಂದು ಇಂಧನ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : ಗೃಹ ಜ್ಯೋತಿ ಯೋಜನೆಗೆ ಉತ್ತಮ ರೆಸ್ಪಾನ್ಸ್ – ಐದು ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸಲ್ಲಿಕೆ
ಹೊಸ ದರ ನೀತಿ ಎರಡು ಹಂತದಲ್ಲಿ ಜಾರಿಯಾಗಲಿದ್ದು, ಮುಂದಿನ ವರ್ಷ ಏಪ್ರಿಲ್ನಲ್ಲಿ ಚಾಲನೆಗೆ ಬರಲಿರುವ ಮೊದಲ ಹಂತದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ (10 ಕಿಲೋವಾಟ್ ಅಥವಾ ಅಧಿಕ ಬಳಕೆಯ) ಅನ್ವಯ ಆಗಲಿದೆ. ಎರಡನೇ ಹಂತದಲ್ಲಿ 2025ರ ಏಪ್ರಿಲ್ನಿಂದ ಜಾರಿಗೆ ಬರಲಿದ್ದು, ಕೃಷಿ ವಲಯ ಹೊರತುಪಡಿಸಿ ಇತರ ಗ್ರಾಹಕರಿಗೆ ಅನ್ವಯ ಆಗಲಿದೆ.
ವಿದ್ಯುತ್ ಬೇಡಿಕೆ ಹೆಚ್ಚಿರುವ ರಾತ್ರಿ ವೇಳೆಯಲ್ಲಿ ವಾಷಿಂಗ್ ಮಷಿನ್, ಎಲೆಕ್ಟ್ರಿಕ್ ಒಲೆ, ಎಲೆಕ್ಟ್ರಿಕ್ ಗೀಸರ್ ಇನ್ನಿತರ ವಿದ್ಯುದುಪಕರಣಗಳನ್ನು ಬಳಸದಿರುವುದರಿಂದ ಅಥವಾ ಕಡಿಮೆ ಬಳಸುವುದರಿಂದ ದರದಲ್ಲಿ ಶೇ.10ರಿಂದ 20ರವರೆಗೆ ರಿಯಾಯಿತಿ ಪಡೆಯಬಹುದು. ಸ್ಮಾರ್ಟ್ ಮೀಟರ್ ರೀಡಿಂಗ್ ಅನ್ನು ಪ್ರತಿದಿನ ವಿದ್ಯುತ್ ಕಾರ್ಯಾಲಯದಿಂದಲೇ ಗಮನಿಸಲಾಗುವುದು ಮತ್ತು ಅದನ್ನು ಗ್ರಾಹಕರ ಗಮನಕ್ಕೂ ತರಲಾಗುವುದು. ಇದರಿಂದ ಅವರು ಬಳಕೆಯ ವಿಷಯದಲ್ಲಿ ಹೆಚ್ಚು ಜಾಗರೂಕವಾಗಿರಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ.
ಟಿಒಡಿಯನ್ನು ಮಾನದಂಡವಾಗಿಸಿಕೊಳ್ಳಲು ಹೊಸ ಸ್ಮಾರ್ಟ್ ಮೀಟರ್ ಅಳವಡಿಕೆ ಅಗತ್ಯ. ಇದರ ಅಳವಡಿಕೆ ಪೂರ್ಣಗೊಂಡ ನಂತರ ಹೊಸ ದರ ನೀತಿಯೂ ಜಾರಿ ಆಗಲಿದೆ. ಸ್ಮಾರ್ಟ್ ಮೀಟರ್ಗೆ ಸಂಬಂಧಿಸಿದ ನಿಯಮವನ್ನು ಶೀಘ್ರದಲ್ಲೇ ಸ್ಪಷ್ಟಪಡಿಸಲಾಗುವುದು ಎಂದು ಸಚಿವಾಲಯ ಹೇಳಿದೆ. ಹಣಕಾಸು ವರ್ಷದ ಅವಧಿಯಲ್ಲಿ ಮಂಜೂರಾದ ಗರಿಷ್ಠ ಲೋಡ್ಗಿಂತ ಮೂರು ಬಾರಿ ಹೆಚ್ಚು ವಿದ್ಯುತ್ ಬಳಕೆ ಆಗಿದ್ದರೆ ಆಗ ಲೋಡ್ ಪ್ರಮಾಣವನ್ನು ಪರಿಷ್ಕರಿಸಲಾಗುವುದು. ಗ್ರಾಹಕರಿಗೆ ಕಿರಿಕಿರಿ ತಪ್ಪಿಸುವ ದೃಷ್ಟಿಯಿಂದ, ಲೋಡ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ ವಿಧಿಸುವ ದಂಡವನ್ನು ಹೊಸ ನೀತಿಯಲ್ಲಿ ತಗ್ಗಿಸಲಾಗಿದೆ. ಸ್ಮಾರ್ಟ್ ಮೀಟರ್ನಲ್ಲಿ ದಾಖಲಾದ ಗರಿಷ್ಠ ಲೋಡ್ಗೆ ಹಿಂದಿನ ಅವಧಿಗೆ ಅನ್ವಯವಾಗುವಂತೆ ಯಾವುದೇ ದಂಡ ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ವಿದ್ಯುಚ್ಛಕ್ತಿ ತಿದ್ದುಪಡಿ-2020ರ ಕಾಯ್ದೆಯ ಗ್ರಾಹಕರ ಹಕ್ಕು ನಿಯಮದ ಅನ್ವಯ ವಿದ್ಯುತ್ ದರವನ್ನು ಪರಿಷ್ಕರಿಸಲಾಗಿದ್ದು, ವಿದ್ಯುತ್ ಬಳಕೆ ಅವಧಿಯನ್ನು ಎರಡು ಭಾಗವಾಗಿ (ಹಗಲಿನಲ್ಲಿ ಎಂಟು ತಾಸು) ವಿಂಗಡಿಸಲಾಗಿದೆ. ಈ ಎಂಟು ಗಂಟೆ ಯಾವ ಸಮಯದಿಂದ ಆರಂಭ ಮತ್ತು ಮುಕ್ತಾಯ ಎಂಬುದನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು (ಎಸ್ಇಆರ್ಸಿ) ನಿರ್ಧರಿಸಲಿವೆ. ಹಗಲು ಹೊತ್ತಿನಲ್ಲಿ ಸೌರಶಕ್ತಿ ಬಳಕೆಯನ್ನು ಅವಲಂಬಿಸಬಹುದು ಮತ್ತು ಇದು ಅಗ್ಗವೂ ಆಗಿದೆ. ರಾತ್ರಿಯ ವೇಳೆ ಸೌರಶಕ್ತಿಯೇತರ ಮೂಲಗಳಾದ ಜಲ, ಉಷ್ಣ, ಹಾಗೂ ಅನಿಲ ಮೂಲದ ವಿದ್ಯುತ್ ಬಳಕೆ ಹೆಚ್ಚಿರುವ ಕಾರಣ ಇವುಗಳ ದರ ಹೆಚ್ಚು ಇರುತ್ತದೆ. ಹೀಗಾಗಿ ಹಗಲು ಹೊತ್ತಿನಲ್ಲಿ ವಿದ್ಯುತ್ ದರ ಕಡಿಮೆ ಮತ್ತು ರಾತ್ರಿ ಹೊತ್ತಿನಲ್ಲಿ ಹೆಚ್ಚು ಎಂಬುದು ಹೊಸ ನೀತಿಯ ಹಿಂದಿನ ತರ್ಕ. ಈಗಾಗಲೇ ಹಲವು ಎಸ್ಇಆರ್ಸಿಗಳು ಟಿಒಡಿ ಸೂತ್ರದಂತೆ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ದರವನ್ನು ಜಾರಿ ಮಾಡಿವೆ ಎಂದು ಇಂಧನ ಸಚಿವಾಲಯ ತಿಳಿಸಿದೆ.