‘ಜೈಲರ್’ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ‘ಚಿನ್ನ’ದ ಉಡುಗೊರೆ – 300 ಮಂದಿಗೆ ನಿರ್ಮಾಪಕ ಕಲಾನಿಧಿ ಮಾರನ್ ಗೋಲ್ಡ್ ಗಿಫ್ಟ್
ಜೈಲರ್ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಬಾಕ್ಸ್ ಆಫೀಸಿನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಹೀಗಾಗಿ ಜೈಲರ್ ನಿರ್ಮಾಪಕ ಕಲಾನಿಧಿ ಮಾರನ್, ಭರ್ಜರಿ ಉಡುಗೊರೆಗಳನ್ನು ಚಿತ್ರತಂಡಕ್ಕೆ ನೀಡುತ್ತಿದ್ದಾರೆ. ಚಿತ್ರದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಈಗಾಗಲೇ ಕಾರುಗಳ ಉಡುಗೊರೆ ನೀಡಿರುವ ನಿರ್ಮಾಪಕರು, ಇದೀಗ ಚಿತ್ರತಂಡದಲ್ಲಿ ಕೆಲಸ ಮಾಡಿದ ಮುನ್ನೂರಕ್ಕೂ ಹೆಚ್ಚು ಜನರಿಗೆ ಬಂಗಾರದ ಉಡುಗೊರೆ ನೀಡಿದೆ.
ಇದನ್ನೂ ಓದಿ: 400 ಕೋಟಿ ರೂಪಾಯಿ ಬಾಚಿದ ‘ಜೈಲರ್’ ಸಿನಿಮಾ – ಚಿತ್ರ ಗೆದ್ದ ಖುಷಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್
ಈ ಹಿಂದೆ ನಿರ್ಮಾಪಕ ಕಲಾನಿಧಿ ಮಾರನ್ ನಟ ರಜನಿಕಾಂತ್ ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದರು. ಈ ಸಿನಿಮಾಗಾಗಿ ರಜನಿ 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊದಲ ಕಂತಾಗಿ 150 ಕೋಟಿ ರೂಪಾಯಿ ಸಂದಾಯವಾಗಿತ್ತು. ಎರಡನೇ ಕಂತು ನೂರು ಕೋಟಿ ರೂಪಾಯಿ ಮತ್ತು ಬಿಎಂಡಬ್ಲೂ ಎಕ್ಸ್ 7 ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ 1.50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇದೀಗ ಕಲಾನಿಧಿ ಮಾರನ್ ಅವರು, ಜೈಲರ್ ಚಿತ್ರಕ್ಕಾಗಿ ಹಗಲು ರಾತ್ರಿ ಎನ್ನದೇ ಶ್ರಮ ಹಾಕಿದ 300 ಮಂದಿಗೆ ತಲಾ ಒಂದೊಂದು ಚಿನ್ನದ ನಾಣ್ಯ ನೀಡಿದ್ದಾರೆ. ಅದಕ್ಕಾಗಿಯೇ ಒಂದು ಕಾರ್ಯಕ್ರಮ ಏರ್ಪಡಿಸಿ, ಅವರನ್ನೆಲ್ಲ ಆಹ್ವಾನಿಸಿ, ಪ್ರತಿಯೊಬ್ಬರನ್ನು ವೇದಿಕೆ ಮೇಲೆ ಕರೆದು, ತಾವೇ ಕೈಯಾರೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಜತೆಗೆ ಭೋಜನ ಸವಿದಿದ್ದಾರೆ. ಈ ವೇಳೆ ನಿರ್ದೇಶಕ ನೆಲ್ಸನ್ ಕೂಡ ಕಲಾನಿಧಿ ಮಾರನ್ ಜತೆಗೆ ಇದ್ದರು.
ಜೈಲರ್ ಸಿನಿಮಾ ಈಗಲೂ ಬಾಕ್ಸ್ ಆಫೀಸಿನಲ್ಲಿ ಈಗಲೂ ಸದ್ದು ಮಾಡುತ್ತಿದೆ. ಹಲವು ವರ್ಷಗಳ ನಂತರ ರಜನಿ ಇಂಥದ್ದೊಂದು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಈ ಖುಷಿಯನ್ನು ಅವರು ಚಿತ್ರತಂಡದ ಜೊತೆಗೆ ಹಂಚಿಕೊಂಡಿದ್ದರು. ಜೈಲರ್ ಸಿನಿಮಾದ ಚಿತ್ರತಂಡದ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಸಿರುವ ರಜನಿಕಾಂತ್, ಸಿನಿಮಾಗಾಗಿ ದುಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದರು. ವಿಶ್ವದಾದ್ಯಂತ ಇಲ್ಲಿವರೆಗೆ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.