ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ – ತನಿಖೆಗಾಗಿ ಮೂರು ವಿಶೇಷ ತಂಡಗಳ ರಚನೆ
ರಾಜ್ಯಸಭಾ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಈ ಘಟನೆ ಈಗ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವೀಡಿಯೋ ಪಡೆದು ಎಫ್ಎಸ್ಎಲ್ಗೆ ಕಳುಹಿಸಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಾಲಕ ರಹಿತ ಮೆಟ್ರೋದ ಪ್ರಾಯೋಗಿಕ ಸಂಚಾರ ಶೀಘ್ರದಲ್ಲೇ ಆರಂಭ – ಹಳದಿ ಮಾರ್ಗದಲ್ಲಿ ‘ಎಐ’ ತಂತ್ರಜ್ಞಾನ ಅಳವಡಿಕೆ!
ಮಂಗಳವಾರ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಸಂಭ್ರಮಾಚರಣೆ ಜೋರಾಗಿತ್ತು. ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿವರೆಗೂ ಠಾಣೆಯಲ್ಲೇ ಉಳಿದುಕೊಂಡಿದ್ದ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಮುಂದಿನ ಆಯಾಮ ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದರು. ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿ ಸಂಗ್ರಹಿಸಲಾಗಿದ್ದು, ಟೆಕ್ನಿಕಲ್ ಅನಾಲಿಸಿಸ್ ಹಾಗೂ ವಿಡಿಯೋಗಳನ್ನು ಪರಿಗಣಿಸುವ ಕಾರ್ಯ ಮಾಡಲಾಗುತ್ತಿದೆ. ಸದ್ಯ ವಿಧಾನಸೌಧ ಪೊಲೀಸರು ಘೋಷಣೆ ಕೂಗಿದಾತನ ಶೋಧ ನಡೆಸುತ್ತಿದ್ದಾರೆ. ಘೋಷಣೆ ಕೂಗಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಬಳಿ ಇದ್ದ ವ್ಯಕ್ತಿಗಳನ್ನು ಕರೆಸಿ ಬುಧವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಮಾಹಿತಿ ನೀಡಲು ಕಾನೂನು, ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮುಂದಾಗಿದ್ದಾರೆ. ಬುಧವಾರ ಅವರು ಗೃಹ ಸಚಿವರ ನಿವಾಸಕ್ಕೆ ತೆರಳಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ತೆರಳಿರುವ ಹಿತೇಂದ್ರ, ಮಂಗಳವಾರದ ಘಟನೆ, ಪ್ರಕರಣದ ಬೆಳವಣಿಗೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ
ಪಾಕಿಸ್ತಾನವರ ಘೋಷಣೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನನಗೆ ಕೇಳಿಸಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.