ಪಾಕಿಸ್ತಾನ ಜಿಂದಾಬಾದ್ ಜ್ವಾಲೆ ಹಚ್ಚಿದ್ಯಾರು? -ವಿವಾದವನ್ನು ಮುಚ್ಚಿ ಹಾಕುತ್ತಿದ್ಯಾ ಸರ್ಕಾರ?
ಬಿಜೆಪಿ-ಜೆಡಿಎಸ್ ಮೈತ್ರಿ.. ದೋಸ್ತಿ ಅಭ್ಯರ್ಥಿ ಸ್ಪರ್ಧೆ.. ಹೀಗೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದ ರಾಜ್ಯಸಭಾ ಚುನಾವಣೆ ಕರ್ನಾಟಕದಲ್ಲಿ ಕೋಲಾಹಲ ಎಬ್ಬಿಸಿದೆ. ನಾಲ್ಕು ಸ್ಥಾನಗಳ ಪೈಕಿ ಮೂರು ಸೀಟ್ ಗೆದ್ದ ಸಂಭ್ರಮದಲ್ಲಿದ್ದ ಕಾಂಗ್ರೆಸ್ಗೆ ಮರ್ಮಾಘಾತವಾಗಿದೆ. ಸೆಲೆಬ್ರೇಷನ್ ಮಾಡೋಕೂ ಆಗ್ದೇ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸೋಕೂ ಆಗದೆ ವಿಲವಿಲ ಒದ್ದಾಡ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚಿದೆ. ಕಾಂಗ್ರೆಸ್ ನಾಯಕ ಸೈಯದ್ ನಾಸೀರ್ ಹುಸೇನ್ ಗೆಲುವಿನ ಬಳಿಕ ಪಾಕಿಸ್ತಾನ ಪರ ಘೋಷಣೆಗಳು ಮೊಳಗಿವೆ ಎನ್ನಲಾಗಿದೆ. ವಿಧಾನಸೌಧದ ಎದುರೇ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ನಡೆದ ಕಲಾಪದಲ್ಲೂ ಇದೇ ಘೋಷವಾಕ್ಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಜೊತೆಗೆ ಈ ಜೈಕಾರದ ಹಿಂದೆ ಷಡ್ಯಂತ್ರದ ವಾಸನೆಯೂ ಹರಡಿದೆ. ಅಷ್ಟಕ್ಕೂ ಈ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ಯಾರು..? ಷಡ್ಯಂತ್ರ ಅಡಗಿದ್ಯಾ..? ಸರ್ಕಾರ ಪ್ರಕರಣವನ್ನ ಮುಚ್ಚಿ ಹಾಕ್ತಿದ್ಯಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಪಿಕ್ಅಪ್ ವಾಹನ ಪಲ್ಟಿ – 14 ಮಂದಿ ಸಾವು, 21 ಜನರಿಗೆ ಗಾಯ
ಮಂಗಳವಾರದವರೆಗೆ ರಾಜ್ಯಸಭಾ ಫಲಿತಾಂಶವೇ ಸುದ್ದಿಯಲ್ಲಿತ್ತು. ಅಡ್ಡಮತದಾನ ಮತ್ತು ಮೈತ್ರಿ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರವೇ ನಡೀತಿತ್ತು. ಆದರೆ ಫಲಿತಾಂಶ ಬಂದ ಕೆಲವೇ ನಿಮಿಷಗಳಲ್ಲಿ ಚಿತ್ರಣವೇ ಬದಲಾಗಿದೆ. ಕಾಂಗ್ರೆಸ್ ಪಕ್ಷದ ಸಂಸದ ಸೈಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂಭ್ರಮಾಚರಣೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಆಡಳಿತರೂಢ ಕಾಂಗ್ರೆಸ್ ವಿರುದ್ಧ ಗಂಭಿರ ಆರೋಪ ಮಾಡಿದೆ. ಜೊತೆಗೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಘಟನೆ ಕಾಂಗ್ರೆಸ್ಗೆ ಮುಜುಗರ ತಂದಿದ್ರೆ ಬಿಜೆಪಿ, ಜೆಡಿಎಸ್ಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಮತ್ತೊಂದೆಡೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಪಾಕ್ ಪರ ಕೂಗಿದ್ದು ನಿಜನಾ.. ಸುಳ್ಳಾ?
ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿವಾದ ರಾಷ್ಟ್ರಾದ್ಯಂತ ಸದ್ದು ಮಾಡ್ತಿದೆ. ಘಟನೆಯ ತನಿಖೆಗೆ ಬೆಂಗಳೂರು ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ. ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್, ವಿಪಕ್ಷ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಕೂಡ ಸೈಯದ್ ನಾಸೀರ್ ಹುಸೇನ್ ವಿರುದ್ಧ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಆರೋಪವನ್ನು ನಿರಾಕರಿಸಿದ್ದಾರೆ. ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇವೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಎನ್ನುತ್ತಿದ್ದಾರೆ.
ಇನ್ನು ಸೈಯದ್ ನಾಸೀರ್ ಹುಸೇನ್ ಬೆಂಬಲಿಗರನ್ನ ತರಾಟೆಗೆ ತೆಗೆದುಕೊಳ್ಳದೆ ಮಾಧ್ಯಮದವ್ರ ಮೇಲೆಯೇ ದರ್ಪ ಮೆರೆದಿದ್ದಾರೆ ಎನ್ನಲಾಗ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದರ ಸತ್ಯಾಸತ್ಯತೆ ತಿಳಿಯಲು ಫುಟೇಜ್ ಅನ್ನು ಎಫ್ ಎಸ್ ಎಲ್ ಗೆ ಕಳಿಸಿಕೊಡಲಾಗಿದೆ. ಹಾಗೇನಾದ್ರೂ ತನಿಖಾ ವರದಿಯಲ್ಲಿ ಸಾಬೀತಾದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲು ನಾವು ಬದ್ಧ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭರವಸೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಘೋಷಣೆ ಕೂಗಿದ್ದು ನಿಜವೇ ಆದಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದು ಗುಡುಗಿದ್ದಾರೆ. ಒಟ್ನಲ್ಲಿ ರಾಜ್ಯಸಭೆ ಎಂದರೆ ಹಿರಿಯರ ಸದನ. ಖ್ಯಾತ ನಾಮರು, ವಿದ್ವಾಂಸರ, ಜ್ಞಾನಿಗಳು, ಸರ್ಕಾರಕ್ಕೆ ನಿರ್ದೇಶನ ನೀಡಬೇಕಾದವರು, ಲೋಕಸಭೆಯ ತಪ್ಪು ಒಪ್ಪುಗಳನ್ನು ತಿದ್ದುವವರು ಇರಬೇಕಾದ ಜಾಗ. ಇಂಥ ಪವಿತ್ರ ಸದನಕ್ಕೆ ಹೊರಟ ನಾಯಕರ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ರಾ ಎಂಬುದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಕೂಲಂಕುಶ ತನಿಖೆ ನಡೆಸಿ ಆರೋಪಿಗಳನ್ನ ಮಟ್ಟ ಹಾಕಬೇಕು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರ ರಾಜ್ಯದಿಂದ ರಾಷ್ಟ್ರ ಮಟ್ಟದವರೆಗೂ ಸದ್ದು ಮಾಡ್ತಿದೆ. ಕರ್ನಾಟಕದ ಉಭಯ ಸದನಗಳಲ್ಲೂ ವಿಷಯ ಪ್ರಸ್ತಾಪಿಸಿ ಬಿಜೆಪಿ ನಾಯಕರು ಕೆಂಡ ಕಾರಿದ್ದಾರೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷನಾಯಕರ ಆರ್.ಅಶೋಕ್, ವಿಧಾನಸೌಧ ಒಂದು ಪವಿತ್ರವಾದ ಸ್ಥಳ. ಇಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗ್ತಾರೆ. ರಕ್ಷಣೆ ಕೊಡಬೇಕಾದವ್ರೇ ರೆಡ್ ಕಾರ್ಪೆಟ್ ಹಾಕಿ ಕರೆಸಿಕೊಂಡಿದ್ದಾರೆ ಎಂದ್ರು. ಆಗ ಸಚಿವ ಜಮೀರ್ ಅಹ್ಮದ್ ಖಾನ್ ಸಂಸತ್ತಿನ ಮೇಲೆ ದಾಳಿಯಾಗಿದ್ದನ್ನ ಪ್ರಸ್ತಾಪಿಸಿದ್ರು. ಈ ವೇಳೆ ಸದನದಲ್ಲಿ ಗದ್ಧಲ ಉಂಟಾಯ್ತು. ಬಳಿಕ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತನಾಡಿ ಘೋಷಣೆ ಕೂಗಿದ್ದ ಗುಂಪನ್ನ ವಿಧಾನಸೌಧದಿಂದ ಹೊರಗೆ ಹೋಗಲು ಯಾಕೆ ಬಿಡಬೇಕಿತ್ತು ಎಂದು ಪ್ರಶ್ನಿಸಿದ್ರು.
ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಕಾಂಗ್ರೆಸ್ನೇ ಹೊಣೆಯಾಗಿಸಿ ಪ್ರಚೋದನಾತ್ಮಕ ಹೇಳಿಕೆ ನೀಡ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ರೊಚ್ಚಿಗೆದ್ದಿದ್ರು. ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಕೃಷ್ಣಭೈರೇಗೌಡ ಪುಲ್ವಾಮ ದಾಳಿಯನ್ನ ಪ್ರಸ್ತಾಪಿಸಿದ್ರು. ದಾಳಿ ವೇಳೆ ಮೃತಪಟ್ಟ 40 ಸೈನಿಕರಿಗೆ ನಿಮ್ಮ ಕೇಂದ್ರ ಸರ್ಕಾರ ನ್ಯಾಯ ಕೊಡಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ವಿಪಕ್ಷನಾಯಕ ಆರ್ ಅಶೋಕ್ ಮಾತನಾಡಿ ಪಾಕಿಸ್ತಾನ ಪರ ಘೋಷಣೆ ಕೂಗಿದವನು ರಾಜಾಜಿನಗರದ ಕಾರ್ಯಕರ್ತ. ನಾನು ಫೋಟೋದಲ್ಲಿ ನೋಡಿದ್ದೇನೆ. ಘೋಷಣೆ ಕೂಗುತ್ತಿದ್ದಂತೆ ಬಾಯಿ ಮುಚ್ಚಿದ್ದಾರೆ ಎಂದ್ರು.ಬ ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕಾಂಗ್ರೆಸ್ ಪಾಕಿಸ್ತಾನದ ಏಜೆಂಟರಂತೆ ವರ್ತಿಸ್ತಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡ್ಬೇಕು ಎಂದು ಒತ್ತಾಯಿಸಿದ್ರು. ಸಚಿವ ಪ್ರಿಯಾಂಕ್ ಖರ್ಗೆ ಮೊದಲು ವೀರ ಸಾವರ್ಕರ್ ದೇಶ ವಿಭಜನೆ ಮಾಡ್ಬೇಕು ಅನ್ಕೊಂಡಿದ್ದು ಎಂದ್ರು. ಈ ವೇಳೆ ಯತ್ನಾಳ್ ಹಾಗೂ ಖರ್ಗೆ ನಡುವೆ ವಾಗ್ದಾದ ನಡೀತು. ಸದನದಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ದೇಶಪ್ರೇಮವನ್ನು ಕಾಂಗ್ರೆಸ್ಗೆ ಹೇಳಿಕೊಡಬೇಕಾ ಎಂದು ಪ್ರಶ್ನಿಸಿದ್ರು. ಹಾಗೇ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ರಾ ಅನ್ನೋ ಬಗ್ಗೆ ಮಾಧ್ಯಮಗಳಲ್ಲೇ ಗೊಂದಲ ಇದೆ ಎಂದ್ರು.
ಮಧ್ಯಾಹ್ನದ ವೇಳೆಗೆ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಆರಂಭಿಸಿದ್ರು. ಈವರೆಗೂ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಆರೋಪಿಗಳನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಧಿಕ್ಕಾರ ಕೂಗಿದ್ರು. ಬಳಿಕ ಸ್ಪೀಕರ್ ಯು.ಟಿ ಖಾದರ್ ಸದನವನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಿದ್ರು.