ಕಬಡ್ಡಿಯಲ್ಲೂ ಪಸ್ಟ್ ಮ್ಯಾಚ್ ದೇವ್ರಿಗೆ! – ಪವನ್ FIRE.. ಪರ್ದೀಪ್ FAIL
ಘೀಳಿಟ್ಟ ಗೂಳಿಗಳು ಸೈಲೆಂಟ್ ಆಗಿದ್ದೇಕೆ?
ಇದನ್ನ ಸ್ಟಾರ್ಟಿಂಗ್ ಟ್ರಬಲ್ ಅನ್ಬೇಕೋ ಅಥವಾ ಕಮ್ ಬ್ಯಾಕ್ ಫೇಲ್ಯೂರ್ ಅನ್ಬೇಕೋ. ಅದು ಕ್ರಿಕೆಟ್ ಆದ್ರೂ ಅಷ್ಟೇ. ಕಬಡ್ಡಿ ಆದ್ರೂ ಅಷ್ಟೇ. ಫಸ್ಟ್ ಮ್ಯಾಚ್ ದೇವ್ರಿಗೆ. ಪ್ರೋ ಕಬಡ್ಡಿ ಲೀಗ್ನ ಉದ್ಘಾಟನಾ ಪಂದ್ಯದಲ್ಲೇ ಮುಗ್ಗರಿಸಿರೋ ಬೆಂಗಳೂರು ಬುಲ್ಸ್ ಮೊದಲನೇ ಪಂದ್ಯವನ್ನೇ ದೇವ್ರಿಗೆ ಅರ್ಪಿಸಿದ್ದಾರೆ. ಗೂಳಿಗಳ ರಾಜ ಅಂತಾ ತಂಡಕ್ಕೆ ಕರೆತಂದಿದ್ದ ಪ್ರದೀಪ್ ನರ್ವಾಲ್ ಕೂಡ ಸದ್ದು ಮಾಡ್ಲಿಲ್ಲ. ಡಿಫೆಂಡರ್ಸ್ ಕೂಡ ರಕ್ಷಣಾತ್ಮಕ ಆಟದಲ್ಲಿ ಎಡವಿದ್ದು ದೊಡ್ಡ ಬೆಲೆ ತೆರುವಂತೆ ಮಾಡಿದೆ. ಅಷ್ಟಕ್ಕೂ ಫಸ್ಟ್ ಮ್ಯಾಚ್ನಲ್ಲೇ ಬುಲ್ಸ್ ಪಡೆ ಎಡವಿದ್ದೆಲ್ಲಿ? ನರ್ವಾಲ್ ಸದ್ದು ಮಾಡ್ಲಿಲ್ಲ ಯಾಕೆ? ಟೈಟನ್ಸ್ ಶಕ್ತಿ ಆದ್ರಾ ಪವನ್ ಸೆಹ್ರಾವತ್? ಡೆಲ್ಲಿ ಮತ್ತು ಮುಂಬೈ ನಡುವಿನ ಕದನ ಹೇಗಿತ್ತು..? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಧರ್ಮನಿಗೆ ಕೈಕೊಟ್ಟ ಐಶ್ – ಶಿಶಿರ್ ಕಿಸ್ ಗೆ ಸುಂದರಿ ಕ್ಲೀನ್ ಬೌಲ್ಡ್
ಸತತ ಆರು ವರ್ಷಗಳಿಂದ ಟ್ರೋಫಿಯಿಂದ ವಂಚಿತವಾಗಿರೋ ಬೆಂಗಳೂರು ಬುಲ್ಸ್ ಮೇಲೆ ಈ ಬಾರಿ ಅಭಿಮಾನಿಗಳಿಗೆ ತುಂಬಾನೇ ಕಾನ್ಫಿಡೆನ್ಸ್ ಇತ್ತು. 2018ರ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ಗೆ ಬೆಂಗಳೂರು ಬುಲ್ಸ್ ಕಾಲಿಟ್ಟಿತ್ತು. ಆದ್ರೆ ಆರಂಭಿಕ ಪಂದ್ಯದಲ್ಲೇ ಸೋಲಿನ ಆಘಾತಕ್ಕೆ ಒಳಗಾಗಿದೆ. ರೈಡರ್‌ಗಳ ಕಳಪೆ ಆಟ, ರಕ್ಷಣಾ ಪಡೆಯ ಸಾಧಾರಣ ಪ್ರದರ್ಶನದಿಂದಾಗಿ ಬುಲ್ಸ್ ತಂಡ ಶುಕ್ರವಾರ ತೆಲುಗು ಟೈಟಾನ್ಸ್ ವಿರುದ್ಧ 29-37 ಅಂಕಗಳ ಅಂತರದಲ್ಲಿ ಶರಣಾಗಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 11ರ ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಸೋಲು ಕಂಡಿದೆ. ಹೈದರಾಬಾದ್‌ನ ಗಚಿಬೌಲಿಯ GMCB ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡ 37-29 ಅಂಕಗಳ ಅಂತರದಿಂದ ಸೋಲು ಕಂಡಿದೆ. ಆರಂಭದಿಂದಲೂ ಡಲ್ ಆಗಿದ್ದ ಗೂಳಿಗಳು ಪಾಯಿಂಟ್ಸ್ ಗಳಿಸೋಕೆ ಒದ್ದಾಡಿದ್ರು. ಸೆಕೆಂಡ್ ಆಫ್ನಲ್ಲಿ ಒಂದ್ಸಲ ಅಬ್ಬರಿಸೋ ಸೂಚನೆ ಕೊಟ್ರೂ ಕೂಡ ಅದು ಜಾಸ್ತಿ ಹೊತ್ತು ನಡೆಯಲೇ ಇಲ್ಲ.
ಟೈಟನ್ಸ್ ಮುಂದೆ ಸೈಲೆಂಟ್ ಆದ ಗೂಳಿಗಳು!
ಬೆಂಗಳೂರು ಬುಲ್ಸ್‌ನ ಆಟಗಾರರು ಮೊದಲ 20 ನಿಮಿಷ ತೀರಾ ಕಳಪೆ ಪ್ರದರ್ಶನ ನೀಡಿದ್ರು. 15ನೇ ನಿಮಿಷದಲ್ಲಿ ಆಲೌಟಾದ ಬುಲ್ಸ್, ತೀವ್ರ ಹಿನ್ನಡೆ ಅನುಭವಿಸಿದ್ರು. ಮೊದಲಾರ್ಧದಲ್ಲಿ 9 ಅಂಕದಿಂದ ಹಿಂದಿದ್ದ ಬುಲ್ಸ್, 2ನೇ ಅವಧಿಯಲ್ಲಿ ಕೊಬ್ಬಿದ ಗೂಳಿಗಳಂತೆ ತಿರುಗಿಬಿದ್ದಿದ್ರು.. ಕೇವಲ 10 ನಿಮಿಷದಲ್ಲಿ 12 ಅಂಕ ಗಳಿಸಿದ್ರು. ಒಂದು ಹಂತದಲ್ಲಿ ಬುಲ್ಸ್(23-24) ಅಂದ್ರೆ ಕೇವಲ 1 ಅಂಕ ಹಿನ್ನಡೆಯಲ್ಲಿತ್ತು. ಆದರೆ ಟೈಟಾನ್ಸ್ ಬಳಗ ಮೈಡಕೊವಿ ಎದ್ದು ನಿಂತು ಸತತ ಅಂಕಗಳನ್ನ ಬೇಟೆಯಾಡಿತು. ಕೊನೆ 10 ನಿಮಿಷದಲ್ಲಿ ಮತ್ತೆ ಅಧಿಪತ್ಯ ಸಾಧಿಸಿತು. ಕೊನೆ 6 ನಿಮಿಷವಿರುವಾಗ ಆಲೌಟಾದ ಬುಲ್ಸ್ ಬಳಿಕ ಚೇತರಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ಬುಲ್ಸ್‌ನ ರೈಡರ್‌ಗಳನ್ನು ಕಟ್ಟಿಹಾಕುವುದರ ಜೊತೆಗೆ, ರಕ್ಷಣಾಪಡೆಯನ್ನೂ ಮೆಟ್ಟಿನಿಂತ ಟೈಟಾನ್ಸ್ 8 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.
ಗೂಳಿಗಳ ಗ್ಯಾಂಗ್ ನಲ್ಲಿ ಸದ್ದೇ ಮಾಡಿದ ಪರ್ದೀಪ್ ನರ್ವಾಲ್!
ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ಡುಬ್ಕಿ ಕಿಂಗ್ ಪರ್ದೀಪ್ ನರ್ವಾಲ್ ಬೆಂಗಳೂರು ಬುಲ್ಸ್ ತಂಡಕ್ಕೆ ಸೇರಿದಾಗ ಫ್ಯಾನ್ಸ್ ಅಂತೂ ಖುಷಿ ಪಟ್ಟಿದ್ರು. ಈ ಸಲ ನಾವೇ ಚಾಂಪಿಯನ್ ಅಂತಾ ಫೀಲ್ ಮಾಡ್ತಿದ್ರು. ಆದ್ರೆ ಬೆಂಗಳೂರು ತಂಡದ ನೂತನ ನಾಯಕ ಹಾಗೂ ಭರವಸೆಯ ರೈಡರ್ ಆಗಿದ್ದಂತ ಪರ್ದೀಪ್ ನರ್ವಾಲ್, ಮೊದಲ ಪಂದ್ಯದಲ್ಲೇ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ರು. ಯಶಸ್ವಿ ರೈಡಿಂಗ್ ಮಾಡುವಲ್ಲಿ ಫೇಲ್ಯೂರ್ ಆಗಿ ಕೇವಲ 3 ಅಂಕಗಳೊಂದಿಗೆ ಮೊದಲ ಪಂದ್ಯ ಮುಗಿಸಿದರು. ಇದೇ ವೇಳೆ ಡಿಫೆಂಡರ್ ಸುರಿಂದರ್ ಸಿಂಗ್ 5 ಅಂಕ ಗಳಿಸಿದರು. ಜತಿನ್ ಫೋಗತ್ ನಾಲ್ಕು ಪಾಯಿಂಟ್ ಸಂಗ್ರಹಿಸಿದರು.
ಫಸ್ಟ್ ಮ್ಯಾಚ್ ನಲ್ಲೇ ಮಿಂಚಿದ ಪವನ್ ಸೆಹ್ರಾವತ್!
ಪಂದ್ಯದ ಆರಂಭದಿಂದಲೂ ಆತಿಥೇಯ ತೆಲುಗು ಟೈಟಾನ್ಸ್ ಪರ ಅಂಕಗಳ ಖಾತೆ ತೆರೆದ ಪವನ್ ಸೆಹ್ರಾವತ್ ಕೊನೆಯವರೆಗೂ ಅಬ್ಬರಿಸಿದ್ರು. ಒಟ್ಟು 13 ರೈಡ್ ಪಾಯಿಂಟ್ ಕಲೆಹಾಕುವುದರೊಂದಿಗೆ ಸೀಸನ್ 11ರ ಮೊದಲ ಸೂಪರ್ 10 ಕಂಪ್ಲೀಟ್ ಮಾಡಿದ್ರು. ಈ ಮೂಲಕ ಪ್ರೊ ಕಬಡ್ಡಿ ಲೀಗ್‌ನಲ್ಲಿ 1200 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಪವನ್ರ ಈ ಪ್ರದರ್ಶನ ತೆಲುಗು ತಂಡಕ್ಕೆ ಟೂರ್ನಿಯ ಆರಂಭದಲ್ಲೇ ಆನೆಬಲ ಮೂಡಿಸಿದೆ. ತಂಡದ ರೈಡಿಂಗ್‌ಗೆ ಟ್ಯಾಕಲ್ ಮೂಲಕ ಸಾಥ್ ಕೊಟ್ಟ ಕೃಷ್ಣನ್ 6 ಟ್ಯಾಕಲ್ ಪಾಯಿಂಟ್ ಸಂಗ್ರಹಿಸಿ ಹೈಫೈವ್ ಪೂರ್ಣಗೊಳಿಸಿದ್ರು.
ಮೊದಲಾರ್ಧದಲ್ಲೇ ಹಿಡಿತ ಸಾಧಿಸಿದ ತೆಲುಗು ಟೈಟಾನ್ಸ್!
ತೆಲುಗು ಟೈಟಾನ್ಸ್ ತಂಡವು ಮೊದಲಾರ್ಧದ ಅಂತ್ಯಕ್ಕೆ 20:11 ಅಂಕಗಳ ಮುನ್ನಡೆ ಸಾಧಿಸಿತ್ತು. ಇದರಲ್ಲಿ ಒಂದು ಬಾರಿ ಎದುರಾಳಿಯನ್ನು ಆಲೌಟ್ ಮಾಡಿತು. ಎರಡನೇ ಸುತ್ತಿನ ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಬುಲ್ಸ್, ತೆಲುಗು ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯ್ತು. ಅಷ್ಟರಲ್ಲಿ ಅಂಕ 24-22ರೊಂದಿಗೆ ಪಂದ್ಯದ ಕುತೂಹಲ ಹೆಚ್ಚಿತು. ಮರುಕ್ಷಣದಲ್ಲೇ 24-23ರೊಂದಿಗೆ ಕೇವಲ ಒಂದು ಅಂಕದ ಡಿಫರೆನ್ಸಸ್ ಅಷ್ಟೇ ಇತ್ತು. ಆದ್ರೆ ಈ ವೇಳೆ ಮತ್ತೆ ಅಬ್ಬರ ಶುರುಮಾಡಿದ ಟೈಟಾನ್ಸ್ ಪಂದ್ಯದಲ್ಲಿ ಕಂಪ್ಲೀಟ್ ಕಂಟ್ರೋಲ್ ಸಾಧಿಸಿತು. ಮತ್ತೊಮ್ಮೆ ಬೆಂಗಳೂರು ಆಟಗಾರರನ್ನು ಆಲೌಟ್ ಮಾಡುವ ಮೂಲಕ 35-26ರಿಂದ ಮುನ್ನಡೆ ಕಾಯ್ದುಕೊಂಡಿತು. ಮತ್ತೆ ಮೇಲೇಳಲು ಶ್ರಮಪಟ್ಟ ಬುಲ್ಸ್, ಕೊನೆಗೆ 37-29 ಅಂಕಗಳಿಂದ ಸೋಲೊಪ್ಪಿಕೊಂಡ್ರು..
ಯು ಮುಂಬಾವನ್ನ ಮಣಿಸಿದ ದೆಹಲಿ ದಬಾಂಗ್!
ಇನ್ನು ಬೆಂಗಳೂರು ಬುಲ್ಸ್ ಮತ್ತು ತೆಲುವು ಟೈಟಾನ್ಸ್ ಬಳಿಕ ದೆಹಲಿ ದಬಾಂಗ್ ಮತ್ತು ಯು ಮುಂಬಾ ನಡುವೆ ಲೀಸ್ನ ಎರಡನೇ ಪಂದ್ಯ ನಡೀತು. ಈ ಪಂದ್ಯದಲ್ಲಿ ದೆಹಲಿ ದಬಾಂಗ್ ಕೆ.ಸಿ 36-28 ರಿಂದ ಯು ಮುಂಬಾ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಆಶು ಮಲಿಕ್ 10 ಅಂಕವನ್ನು ಕಲೆ ಹಾಕಿದ್ರೆ ಮುಂಬಾ ತಂಡದ ಪರ ಅಮೀರ್ಮೊಹಮ್ಮದ್ 11, ಅಜಿತ್ ಚೌಹಾಣ್ 10 ಅಂಕ ಪಡೆದು ಅಬ್ಬರಿಸಿದರು.
ಒಟ್ನಲ್ಲಿ ಮೊದಲ ದಿನದ ಪಂದ್ಯದಲ್ಲೇ ತೆಲುಗು ಟೈಟಾನ್ಸ್ ಹಾಗೂ ದಬಾಂಗ್ ಡೆಲ್ಲಿ ಗೆಲುವಿನ ಖಾತೆ ತೆರೆದಿವೆ. ದಬಾಂಗ್ ಡೆಲ್ಲಿ ಈ ಅಮೋಘ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ತಂಡ 5 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ತೆಲುಗು ಟೈಟಾನ್ಸ್ ಕೂಡ 5 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಸೋಲಿನಿಂದಾಗಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಕೆಳ ಸ್ಥಾನಕ್ಕೆ ಹೋಗಿವೆ. ಇನ್ನು ಭಾನುವಾರ ಗುಜರಾತ್ ಜೇಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಪಂದ್ಯ ಇದ್ದು ಸೋ ಈ ಪಂದ್ಯದಲ್ಲಾದ್ರೂ ಗೆಲುವಿನ ಖಾತೆ ತೆರೆಯುತ್ತಾರಾ ಅನ್ನೋದನ್ನ ಕಾದು ನೋಡ್ಬೇಕು.