ಕಬಡ್ಡಿ ಅಖಾಡದಲ್ಲಿ ಕೋಟಿ ವೀರರು – ಬೆಂಗಳೂರು ಬುಲ್ಸ್ ಸ್ಟ್ರೆಂಥ್ ಹೇಗಿದೆ?
IPLನಂತೆ PKL ಇತಿಹಾಸ ಬರೆಯುತ್ತಾ?

ಕಬಡ್ಡಿ ಅಖಾಡದಲ್ಲಿ ಕೋಟಿ ವೀರರು – ಬೆಂಗಳೂರು ಬುಲ್ಸ್ ಸ್ಟ್ರೆಂಥ್ ಹೇಗಿದೆ?IPLನಂತೆ PKL ಇತಿಹಾಸ ಬರೆಯುತ್ತಾ?

ಭಾರತದಲ್ಲಿ ಕ್ರಿಕೆಟ್ ಅಂದ್ರೇನೇ ಒಂದು ಕ್ರೇಜ್. ಒಂದು ಹವಾ. ಟೀಂ ಇಂಡಿಯಾ ಮ್ಯಾಚ್ ಇದ್ರಂತೂ ನಿದ್ದೆಗೆದ್ದು ನೋಡ್ತಾರೆ. ಅದ್ರಲ್ಲೂ ಐಪಿಎಲ್​ ಅಂದ್ರಂತೂ ಫ್ಯಾನ್ಸ್​ಗೆ ಹಬ್ಬನೇ. ಹೀಗೆ ಒಂದಷ್ಟು ಫ್ಯಾನ್ಸ್ ಕ್ರಿಕೆಟ್​​ಗೆ ಅಡಿಕ್ಟ್ ಆಗಿದ್ರೆ ಇನ್ನೊಂದಷ್ಟು ಜನ ಕಬಡ್ಡಿಗಾಗಿ ಕಾಯ್ತಿದ್ದಾರೆ. ದೇಸೀಕ್ರೀಡೆಯ ಸೊಬಗು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡ್ತಿದೆ. ಝಣ ಝಣ ಕಾಂಚಾಣ ಕೂಡ ನೀರಿನಂತೆ ಹರೀತಿದೆ. ಆಟಗಾರರು ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಹರಾಜು ವೇಳೆ ದಾಖಲೆ ಮಟ್ಟದಲ್ಲಿ ಬಿಡ್ ಮಾಡಲಾಗಿದೆ. ಅಷ್ಟಕ್ಕೂ ಕಬಡ್ಡಿ ಕ್ರೀಡೆಗೆ ಇಷ್ಟೊಂದು ಜನಪ್ರಿಯತೆ ಸಿಕ್ಕಿದ್ದೇಗೆ? ಕೋಟಿಗಳ ಲೆಕ್ಕದಲ್ಲಿ ಸೇಲ್ ಆದ ಆಟಗಾರರು ಯಾರು? ಬೆಂಗಳೂರು ಬುಲ್ಸ್ ತಂಡ ಹಿಂದೆಂದಿಗಿಂತಲೂ ಬಲಿಷ್ಠವಾಗಿದ್ಯಾ? ಕಬಡ್ಡಿ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಒಂದು ಪಾತ್ರ.. ಒಂದೇ ಕಾಸ್ಟ್ಯೂಮ್‌!! – ದೀಪಾ ಡ್ರೆಸ್‌ ಬದಲಾಗಲ್ವಾ? 

2024ರ ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 18 ರಿಂದ ಪ್ರಾರಂಭವಾಗಲಿದೆ. ಸತತ ಮೂರು ತಿಂಗಳು ನಡೆಯಲಿರುವ ಪಿಕೆಎಲ್‌ನಲ್ಲಿ 12 ಬಲಿಷ್ಠ ತಂಡಗಳು ಕಾದಾಡಲಿವೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಸೋ ಹೊಸ ಹೊಸ ಕಲಿಗಳ ಜೊತೆ ತಂಡಗಳೂ ಕೂಡ ಮತ್ತಷ್ಟು ಬಲಿಷ್ಠತೆಯೊಂದಿಗೆ ಅಖಾಡಕ್ಕಿಳಿಯೋಕೆ ರೆಡಿಯಾಗಿವೆ. ಆಕ್ಷನ್​ನಲ್ಲಿ ಕೆಲ ಆಟಗಾರರು ದುಬಾರಿ ಮೊತ್ತವನ್ನೇ ಜೇಬಿಗೆ ಇಳಿಸಿಕೊಂಡಿದ್ದು ಪಿಕೆಎಲ್ ಕೂಡ ಐಪಿಎಲ್​ನಂತೆ ಚಿನ್ನದ ಮೊಟ್ಟೆ ಇಡೋ ಕೋಳಿಯಂತಾಗ್ತಿದೆ. ಪ್ರೋ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಟು ಆಟಗಾರರು 1 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದ್ರಲ್ಲೂ ಈ ಸಲ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಸಚಿನ್‌ ತನ್ವರ್‌. ಸಚಿನ್‌ ತನ್ವರ್‌ ಅವರು 1999ರ ಜುಲೈ 19 ರಂದು ರಾಜಸ್ಥಾನದ ಝುಂಝುನು ಜಿಲ್ಲೆಯ ಬಧ್ವರ್‌ ಗ್ರಾಮದಲ್ಲಿ ಜನಿಸಿದ್ದರು. ಇವರು 2017ರಲ್ಲಿ ಗುಜರಾತ್‌ ಜೇಂಟ್ಸ್‌ ಪರ ಪ್ರೊ ಕಬಡ್ಡಿ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. ಆರಂಭಿಕ ಎರಡು ಆವೃತ್ತಿಗಳಲ್ಲಿ 10 ರೈಡಿಂಗ್‌ ಪಾಯಿಂಟ್ಸ್‌ ಪಡೆದಿದ್ದರು. ಇದಾದ ಬಳಿಕ ಅವರು ಪಾಟ್ನಾ ಪಿರೇಟ್ಸ್‌ ತಂಡದ ಪರ 2023-24ರ ಆವೃತ್ತಿಯಲ್ಲಿ ಆಡಿದ್ದರು. ಇದೀಗ ಅವರನ್ನು ತಮಿಳ್‌ ತಲೈವಾಸ್‌ ಖರೀದಿ ಮಾಡಿದೆ.

ಐಪಿಎಲ್ ನಿಂದ ಪ್ರೇರಿತವಾಗಿ 2014ರಿಂದ ಪಿಕೆಎಲ್ ಆರಂಭ!

2008ರಲ್ಲಿ ಆರಂಭವಾಗಿದ್ದ ಐಪಿಎಲ್​ಗೆ ಸಿಕ್ಕ ಜನಪ್ರಿಯತೆ ಕಂಡು 2014ರಲ್ಲಿ ಪಿಕೆಎಲ್ ಆರಂಭಿಸಲಾಯ್ತು. ಐಪಿಎಲ್‌ನಿಂದ ಪ್ರೇರಿಪಿತವಾದ ಲೀಗ್‌ ಹರಾಜು ನಡಿಸಿ ಆಟಗಾರರನ್ನು ಖರೀದಿಸಿ ತಂಡ ಕಟ್ಟಿದ್ರು. ತೆರೆಯ ಮರೆಯಲ್ಲಿದ್ದ ಕಬಡ್ಡಿ ಆಟಗಾರರಿಗೆ, ಈ ಲೀಗ್‌ ಮನ್ನಣೆ ನೀಡಿತು. ಕಬಡ್ಡಿ ಆಟಗಾರರನ್ನು ಸಹ ಗುರುತಿಸುವ ಹಾಗೆ ಆಯಿತು. ಸ್ಟಾರ್‌ ಗಿರಿ ಸಿಕ್ಕಿತು. ಸ್ಟಾರ್ಟಿಂಗ್​ನಲ್ಲಿ ಅಷ್ಟೇನು ಸಪೋರ್ಟ್ ಸಿಗದೇ ಇದ್ರೂ ನಂತ್ರ ಅಭಿಮಾನಿಗಳೂ ಕೂಡ ಇಷ್ಟ ಪಡೋಕೆ ಶುರು ಮಾಡಿದ್ರು. ಅಭಿಮಾನಿಗಳ ಮನ ಗೆದ್ದ ಕ್ರೀಡೆ ನೋಡ ನೋಡುತ್ತಿದ್ದಂತೆ ಲೀಗ್‌ ಖ್ಯಾತಿಯನ್ನು ಪಡೆಯಿತು. ಬಳಿಕ ಪ್ರೊ ಕಬಡ್ಡಿ ಲೀಗ್‌ ಜನರ ನೆಚ್ಚಿನ ಕ್ರೀಡೆ ಆಯಿತು. ಈ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ತಂಡಗಳಿಗೆ ಭಾರೀ ಹಣವನ್ನೂ ಕೂಡ ನೀಡಲಾಗ್ತಿದೆ.  ಪಂದ್ಯ ಶ್ರೇಷ್ಠ, ಬೆಸ್ಟ್‌ ರೈಡರ್, ಬೆಸ್ಟ್‌ ಡಿಫೆಂಡರ್‌ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ನೀಡಿ ಆಟಗಾರರನ್ನು ಕೂಡ  ಅಟ್ರ್ಯಾಕ್ಟ್ ಮಾಡಲಾಗ್ತಿದೆ. ಆಟಗಾರರ ಆರ್ಥಿಕ ಸ್ಥಿತಿ ಕೂಡ ಬದಲಾಯ್ತು. ಶಾಲೆಯ ಅಂಗಳದಲ್ಲಿ, ಇಲ್ಲವೇ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಬಡ್ಡಿ ಲೀಗ್‌ ಆಗಿ ಬೆಳೆಯಿತು. ಕಬಡ್ಡಿಗೆ ಸಿಕ್ಕ ಇದೇ ಸ್ಥಾನಮಾನ ಗ್ರಾಮೀಣ ಭಾಗದ ಕಬಡ್ಡಿ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ಸಿಗಲು ಶುರುವಾಯ್ತು. ದೇಶವನ್ನು ಪ್ರತಿನಿಧಿಸಬೇಕು ಎಂದು ಕನಸು ಕಾಣುತ್ತಿದ್ದ ಕಬಡ್ಡಿ ಆಟಗಾರರು, ಲೀಗ್‌ನಲ್ಲಿ ಆಡಿದರೆ ಸಾಕಪ್ಪ ಎನ್ನುವ ರೀತಿ ಇಂದು ಹೆಮ್ಮರವಾಗಿ ಬೆಳೆದಿದೆ.

ಆಟಗಾರರಿಗೆ ಪ್ರತ್ಯೇಕ ಟ್ರೈನಿಂಗ್.. ಲೀಗ್ ಗೆ ಹೈಟೆಕ್ ಟಚ್!

2014ರಲ್ಲಿ ಆರಂಭವಾದ ಲೀಗ್ ಸೀಸನ್​ನಿಂದ ಸೀಸನ್​ಗೆ ಇಂಪ್ರೂವ್ ಆಗ್ತಾ ಹೋಯ್ತು. ಆಟಗಾರರಿಗೆ ಗುಣ ಮಟ್ಟದ ಟ್ರೈನಿಂಗ್ ಹಾಗೂ ಮ್ಯಾಟ್‌ ಮೇಲೆ ಆಡುವ ವ್ಯವಸ್ಥೆಯನ್ನು ಕಲ್ಪಿಸಿ, ಲೀಗ್‌ಗೆ ಹೈಟೆಕ್‌ ಟಚ್‌ ನೀಡಲಾಯ್ತು. ಇದ್ರ ಜೊತೆಗೆ ಲೀಗ್‌ ವೇಳೆ ಅಭಿಮಾನಿಗಳನ್ನ ಹೆಚ್ಚಾಗಿ ಆಕರ್ಷಿಸಿದ್ದು, ಝಗಮಗ ಬೆಳಕು. ಕಬಡ್ಡಿ ಲೀಗ್‌ನ ಸೌಂಡ್‌ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು.  ಪ್ರತಿ ಪ್ರಾಂಚೈಸಿ ತವರಿನಲ್ಲಿ ಆಡುವ ಪಂದ್ಯಗಳಿಗೆ ಭರ್ಜರಿ ರಿಸ್ಪಾನ್ಸ್‌ ಸಿಗೋಕೆ ಸ್ಟಾರ್ಟ್ ಆಯ್ತು. ಇದ್ರಿಂದ ಪುಳಕಿತವಾದ ಕಬಡ್ಡಿ ಲೀಗ್ ಮ್ಯಾನೇಜ್ಮೆಂಟ್‌ ತಂಡಗಳ ಸಂಖ್ಯೆಯನ್ನು ಮತ್ತಷ್ಟು ಏರಿಸಿದೆ. ಪ್ರತಿ ತಂಡಗಳು ತಮ್ಮ ತವರಿನಲ್ಲಿ ಹೆಚ್ಚಿನ ಪಂದ್ಯಗಳನ್ನ ಆಡಲು ಅವಕಾಶವನ್ನು ನೀಡುವಂತೆ ಟೈಮ್ ಟೇಬಲ್ ಮಾಡಲಾಗಿದೆ. ಆರಂಭದಲ್ಲಿ ಎಂಟಿದ್ದ ತಂಡಗಳು ಈಗ 12ಕ್ಕೆ ಬಂದು ನಿಂತಿದೆ ಅಂದ್ರೆ ಕಬಡ್ಡಿ ಕ್ರೇಜ್ ಹೇಗಿದೆ ಅನ್ನೋದನ್ನ ನೀವೇ ಊಹೆ ಮಾಡ್ಕೊಳ್ಳಿ.

ಅವಕಾಶ ಸಿಕ್ಕರೆ ಸಾಕು ಅಂತಿದ್ದವರಿಗೆ ಈಗ ಕೋಟಿ ಕೋಟಿ ಹಣ

ಮೊದ್ಲೆಲ್ಲ ಕಬಡ್ಡಿ ಅಂದ್ರೆ ಶಾಲಾ, ಕಾಲೇಜುಗಳಲ್ಲಿ ಅಥವಾ ಸ್ಥಳೀಯ ಮಟ್ಟದ ಪಂದ್ಯಗಳಿಗೆ ಮಾತ್ರ ಸೀಮಿತವಾಗಿತ್ತು. ಬಟ್ ಈಗ ಅದ್ರ ಲೆವೆಲ್ಲೇ ಚೇಂಜ್ ಆಗಿದೆ. ಕಬಡ್ಡಿ ಆಟಗಾರರಿಗೂ ಕೂಡ ಹೈಟೆಕ್‌ ಫೆಸಿಲಿಟೀಸ್ ಸಿಗ್ತಿದೆ. ಒಳ್ಳೆಯ ಆಹಾರ, ವಸತಿ, ಊಟದ ಜೊತೆಗೆ ಹಣ ಕೂಡ ಜಾಸ್ತಿಯಾಗ್ತಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲೂ ದಾಖಲೆ ಮಟ್ಟದ ಆಟಗಾರರು ಕೋಟಿ ಕೋಟಿ ಹಣವನ್ನ ಜೇಬಿಗೆ ಇಳಿಸಿಕೊಂಡಿದ್ದಾರೆ. ಸೋ ಈ ಸಲ ಅತೀ ಹೆಚ್ಚು ಹಣ ಪಡೆದವರು ಯಾರು..? ಮತ್ತು ಎಷ್ಟು ಅನ್ನೋದನ್ನ ಡೀಟೇಲ್ಡ್ ಆಗಿ ಹೇಳ್ತಾ ಹೋಗ್ತೇನೆ ನೋಡಿ.

ನಂಬರ್ 1 – ಸಚಿನ್ ತನ್ವಾರ್

2024ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಪಡೆದ ಆಟಗಾರ ಅಂದ್ರೆ ಸಚಿನ್ ತನ್ವಾರ್. ತಮಿಳ್ ತಲೈವಾಸ್ ಇವರಿಗೆ 2.15 ಕೋಟಿ ರೂಪಾಯಿ ನೀಡಿ ಬಾಜಿ ಗೆದ್ದಿದೆ. 11ನೇ ಆವೃತ್ತಿಯಲ್ಲಿ ಸಚಿನ್‌ ತಮಿಳು ಪರ ಮ್ಯಾಟ್‌ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಇವ್ರ ಮೇಲೆ ನಿರೀಕ್ಷೆ ಕೂಡ ಜಾಸ್ತಿ ಇದೆ.

ನಂಬರ್ 2 – ಮೊಹಮ್ಮದ್ರೇಜಾ ಕಮಾಲ್

ಹರಿಯಾಣ ಸ್ಟೀಲರ್ಸ್ ತಂಡವು ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆಹ್ ಅವರನ್ನು 2.7 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ. ಇದರೊಂದಿಗೆ ಮೊಹಮ್ಮದ್ರೇಜಾ ಅವರು ಸತತ ಎರಡನೇ ಬಾರಿಗೆ ಹರಾಜಿನಲ್ಲಿ 2 ಕೋಟಿ ರೂಪಾಪಿಗಳ ಗಡಿ ದಾಟಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಂಬರ್ 3 – ಗುಮಾನ್ ಸಿಂಗ್

2024ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಗುಮಾನ್ ಸಿಂಗ್ ಸ್ಥಾನ ಪಡೆದಿದ್ದಾರೆ. ಗುಜರಾತ್ ಜೈಂಟ್ಸ್ ಅವರಿಗೆ 1.97 ಕೋಟಿ ರೂಪಾಯಿ ನೀಡಿ ವೆಲ್ಕಂ ಮಾಡಿದೆ.

ನಂಬರ್ 4 – ಪವನ್ ಸೆಹ್ರಾವತ್

ಪಿಕೆಎಲ್‌ನಲ್ಲಿ ಸ್ಟಾರ್ ರೈಡರ್‌ಗಳಲ್ಲಿ ಪವನ್ ಸೆಹ್ರಾವತ್ ಕೂಡ ಒಬ್ಬರು. ಈ ಆಟಗಾರ ಬೆಂಗಳೂರು ಬುಲ್ಸ್ ತಂಡದಲ್ಲಿ ಇದ್ದುಕೊಂಡು ಸಾಕಷ್ಟು ಹೆಸರು ಮಾಡಿದ್ದಾರೆ. ಹೀಗಾಗಿ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಪವನ್ ಅವರಿಗೆ 1.725 ಕೋಟಿ ರೂಪಾಯಿಗಳನ್ನ ನೀಡುವ ಮೂಲಕ ತೆಲುಗು ಟೈಟಾನ್ಸ್ ಖರೀದಿ ಮಾಡಿದೆ.

ನಂಬರ್ 5 – ಭರತ್

ಬೆಂಗಳೂರು ಬುಲ್ಸ್ ತಂಡದಲ್ಲಿ ಭರತ್ ರೈಡರ್ ಆಗಿ ಮಿಂಚಿದ್ದರು. ಇವರು ಕೂಡ ಪಿಕೆಎಲ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದರು. ಆದರೆ ಬುಲ್ಸ್ ಈ ಬಾರಿ ಭರತ್ ಅವರನ್ನು ಕೈ ಬಿಟ್ಟಿತ್ತು. ಇದರ ಸಂಪೂರ್ಣ ಲಾಭವನ್ನು ಯುಪಿ ಪಡೆದಿದೆ. ಈ ಅವಕಾಶವನ್ನು ಪಡೆದುಕೊಂಡ ಯುಪಿ ಯೋಧಾಸ್ ಅವರನ್ನು 1.30 ಕೋಟಿ ರೂಪಾಯಿಗೆ ಬಿಡ್ ಮಾಡಿ ಗೆದ್ದಿದೆ.

ನಂಬರ್ 6 –  ಮಣಿಂದರ್ ಸಿಂಗ್

ಸ್ಟಾರ್ ರೈಡರ್ ಆದ ಮಣಿಂದರ್ ಸಿಂಗ್ ಅವರನ್ನು ಬಿಡ್ ಮಾಡಲು ಭಾರೀ ಪೈಪೋಟಿ ನಡೆದಿತ್ತು. ಬೆಂಗಳೂರು ಬುಲ್ಸ್ ಕೊನೆವರಗೂ ಅವರನ್ನು ಖರೀದಿಸಲು ಪ್ರಯತ್ನಿಸಿತ್ತು. ಆದರೆ ಅಂತಿಮವಾಗಿ ಬೆಂಗಾಲ್ ವಾರಿಯರ್ಸ್ 1.15 ಕೋಟಿ ರೂ. ಕೊಟ್ಟು ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ನಂಬರ್ 7 – ಅಜಿಂಕ್ಯ ಪವಾರ್

ಬೆಂಗಳೂರು ಬುಲ್ಸ್ ತಂಡ ಕಳೆದ ಎರಡು ಪಿಕೆಎಲ್ ಆವೃತ್ತಿಗಳಿಂದ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಬಲಿಷ್ಠ ತಂಡದೊಂದಿಗೆ ಅಂಗಳಕ್ಕೆ ಇಳಿಯುವ ನಿರ್ಧಾರ ಬುಲ್ಸ್ ತಂಡದ್ದಾಗಿದೆ. ಹರಾಜಿನಲ್ಲಿ ದುಬಾರಿ ಬೆಲೆಗೆ ಸ್ಟಾರ್ ರೈಡರ್ ಅಜಿಂಕ್ಯ ಅಶೋಕ್ ಪವಾರ್ ಅವರಿಗೆ 1.107 ಕೋಟಿ ರೂ. ನೀಡಿತ್ತು. ಜೊತೆಗೆ ಪಿಕೆಎಲ್‌ ದಾಖಲೆಗಳ ರಾಜ ಪರ್ದೀಪ್ ನರ್ವಾಲ್ ಅವರನ್ನು 70 ಲಕ್ಷ ರೂ.ಗಳಿಗೆ ಪ್ರಮುಖ ರೈಡರ್ ಪಡೆದಿದೆ.

ನಂಬರ್ 8 – ಸುನೀಲ್ ಕುಮಾರ್

ಸುನೀಲ್ ಕುಮಾರ್ 1.15 ಕೋಟಿ ರೂಪಾಯಿಗಳಿಗೆ ಯು ಮುಂಬಾ ತಂಡವನ್ನು ಸೇರುವ ಮೂಲಕ ಹೊಸ ದಾಖಲೆ ಬರೆದಿದ್ದರು. ಪಿಕೆಎಲ್‌ನಲ್ಲಿ ಭಾರತದ ಅತ್ಯಂತ ದುಬಾರಿ ಬೆಲೆ ಬಿಡ್ ಮಾಡಿದ ಡಿಫೆಂಡರ್ ಆಗಿ ಇತಿಹಾಸ ನಿರ್ಮಿಸಿದ್ರು. ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆಹ್ ಮತ್ತು ಗುಮಾನ್ ಸಿಂಗ್ ಅವರಂತಹ ಸ್ಟಾರ್ ಆಟಗಾರರೊಂದಿಗೆ ಅವರು 1 ಕೋಟಿ ರೂಪಾಯಿ ಕ್ಲಬ್ ಸೇರಿದ್ದಾರೆ.

ದೇಶೀಯ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ ಸೀಸನ್-11 ರ ಕಾದಾಟಕ್ಕೆ 4 ವಾರಗಳಷ್ಟೇ ಬಾಕಿ ಇದೆ. ಒಟ್ಟು 12 ತಂಡಗಳು ಪೈಪೋಟಿ ನಡೆಸಲಿವೆ. ಬೆಂಗಳೂರು ಬುಲ್ಸ್, ಯುಪಿ ಯೋಧಾಸ್, ಪಾಟ್ನಾ ಪೈರೇಟ್ಸ್, ತಮಿಳ್ ತಲೈವಾಸ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಯು ಮುಂಬಾ, ತೆಲುಗು ಟೈಟಾನ್ಸ್, ಪುಣೇರಿ ಪಲ್ಟನ್, ಹರ್ಯಾಣ ಸ್ಟೀಲರ್ಸ್, ಗುಜರಾತ್ ಜೈಂಟ್ಸ್, ದಬಾಂಗ್ ಡೆಲ್ಲಿ, ದಬಾಂಗ್ ಡೆಲ್ಲಿ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಎಲ್ಲಾ ಕಬಡ್ಡಿ ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ರಚಿಸಿವೆ. ಒಟ್ಟಾರೆ 11ನೇ ಸೀಸನ್​ನ ಪ್ರೋ ಕಬಡ್ಡಿ ಲೀಗ್ ಆರಂಭಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಬೆಂಗಳೂರು ಬುಲ್ಡ್ ಕೂಡ ಚಾಂಪಿಯನ್ ಪಟ್ಟಕ್ಕೇರೋಕೆ ಆಟಗಾರರನ್ನ ಭರ್ಜರಿ ಕಸರತ್ತು ನಡೆಸ್ತಿದೆ. ಅಂತಿಮವಾಗಿ ಅಖಾಡಕ್ಕಿಳಿದು ಎದುರಾಳಿಗಳ ಎದೆಮುಟ್ಟಿ ಯಾರು ಅಂಕ ಗಳಿಸ್ತಾರೆ, ಕದನಕಣದಲ್ಲಿ ತೊಡೆತಟ್ಟಿ ಎದುರಾಳಿಗಳನ್ನ ಯಾರು ಖೆಡ್ಡಾಗೆ ಕೆಡವುತ್ತಾರೆ ಅಂತಾ ನೋಡೋಕೆ ಅಭಿಮಾನಿಗಳೂ ಕೂಡ ಕಾಯ್ತಿದ್ದಾರೆ.

Shwetha M