ಅಪ್ಪು ಹೆಸರಲ್ಲಿ ಜನಸ್ನೇಹಿ ಅಪ್ಲಿಕೇಶನ್  – ಆ್ಯಪ್ ಲಾಂಚ್​​ಗೆ ಡಿಕೆಶಿಗೆ ಆಹ್ವಾನ ನೀಡಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್‌

ಅಪ್ಪು ಹೆಸರಲ್ಲಿ ಜನಸ್ನೇಹಿ ಅಪ್ಲಿಕೇಶನ್  – ಆ್ಯಪ್ ಲಾಂಚ್​​ಗೆ ಡಿಕೆಶಿಗೆ ಆಹ್ವಾನ ನೀಡಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್‌

ಪುನೀತ್‌ ರಾಜ್‌ಕುಮಾರ್‌… ಕನ್ನಡಿಗರ ಎದೆಯಾಳುವ ದೊರೆ. ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ನಾಲ್ಕು ವರ್ಷಗಳಾಗುತ್ತಾ ಬಂತು. ಪುನೀತ್‌ ಆ ನಗು ಮಾತ್ರ ಇಂದಿಗೂ ಯಾರ ಕಣ್ಣಿಂದಲೂ ಮರೆಯಾಗಿಲ್ಲ. ಪುನೀತ್‌ ಸಾವಿನ ಕ್ಷಣ ನೆನೆದರೆ ಇಂದಿಗೂ ಕಣ್ಣಾಲೆಗಳು ಒದ್ದೆಯಾಗುತ್ತವೆ. ಕನ್ನಡದ ಕಣ್ಮಣಿ ನಟ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರನ್ನ ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಕಾರ್ಯವೊಂದನ್ನು ಕೈಗೊಂಡಿದ್ದಾರೆ. ಇದೀಗ ಅಪ್ಪು ಹೆಸರಿನಲ್ಲಿ ಅಪ್ಲಿಕೇಶನ್‌ವೊಂದು ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್!‌ – ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ ಖಾಸಗಿ ಬಸ್​ಗಳು!

ಪುನೀತ್ ರಾಜ್‌ಕುಮಾರ್‌ ನಮ್ಮನ್ನ ಅಗಲಿ ನಾಲ್ಕು ವರ್ಷ ಆಗ್ತಾ ಬಂದ್ರೂ ಕನ್ನಡಿಗರು ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಅಪ್ಪು ನೆನಪಿನಲ್ಲಿ ಅಪ್ಲಿಕೇಶನ್ ಒಂದನ್ನು ಹೊರತರಲು ಸಜ್ಜಾಗಿದ್ದಾರೆ.. ಪುನೀತ್ ರಾಜ್​​ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುವ ಅಪ್ಲಿಕೇಶನ್​​ಗೆ ಪಿಆರ್​​ಕೆ ಎಂದು ಹೆಸರಿಡಲಾಗಿದ್ದು, ಅಪ್ಪು ಅವರ ಪುಣ್ಯ ಸ್ಮರಣೆಯ ದಿನವಾದ ಅಕ್ಟೋಬರ್ 29ರಂದು ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ. ಈ ಅಪ್ಲಿಕೇಶನ್​​ನ ಲೋಕಾರ್ಪಣೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಆಹ್ವಾನಿಸಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​​ಕುಮಾರ್ ಅವರನ್ನೂ ಸಹ ಆಹ್ವಾನಿಸುವ ಸಾಧ್ಯತೆ ಇದೆ.

ಪುನೀತ್ ರಾಜ್​​ಕುಮಾರ್ ಅವರ ಸಿನಿಮಾಗಳು, ಜೀವನ, ಅವರ ಸಾಧನೆ, ಮಾನವೀಯ ಗುಣ, ಅವರ ಸಮಾಜ ಸೇವೆ ಇನ್ನಿತರೆಗಳ ಮಾಹಿತಿಯನ್ನು ಅಪ್ಲಿಕೇಶನ್ ಒಳಗೊಂಡಿರುವ ಜೊತೆಗೆ, ಅಂಗಾಂಗ ದಾನ, ಶಿಕ್ಷಣ, ಆರೋಗ್ಯ ಮಾಹಿತಿ ಮತ್ತು ಸೇವೆ ಇನ್ನಿತರೆ ಸೇವೆಗಳನ್ನು ಸಹ ಈ ಅಪ್ಲಿಕೇಶನ್ ಒಳಗೊಂಡಿರುವ ಸಾಧ್ಯತೆ ಇದೆ. ಅಪ್ಲಿಕೇಶನ್ ಲೋಕಾರ್ಪಣೆಗೊಂಡ ಬಳಿಕವಷ್ಟೆ ಈ ಬಗ್ಗೆ ಪೂರ್ಣ ಮಾಹಿತಿ ಹೊರಬೀಳಲಿದೆ.

Shwetha M