ಶೃಂಗೇರಿ ಮಠಕ್ಕೆ ಪ್ರಿಯಾಂಕಾ ಭೇಟಿ -ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲಿ ಮೊಮ್ಮಗಳ ಅಲೆ

ಶೃಂಗೇರಿ ಮಠಕ್ಕೆ ಪ್ರಿಯಾಂಕಾ ಭೇಟಿ -ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದಲ್ಲಿ ಮೊಮ್ಮಗಳ ಅಲೆ

ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಹೊಸ ಅಲೆ ಸೃಷ್ಟಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಶೃಂಗೇರಿ ಮಠಕ್ಕೆ ಬುಧವಾರ ಭೇಟಿ ನೀಡಿದ್ದಾರೆ. ಮಠಕ್ಕೆ ಭೇಟಿ ನೀಡಿ ಶಾರದಾಂಬೆ ಹಾಗೂ ಗುರುಗಳ ದರ್ಶನ ಪಡೆದಿರುವ ಅವರು ನರಸಿಂಹವನದಲ್ಲಿರುವ ಕಿರಿಯಶ್ರೀ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶ್ರೀಗಳು ಪ್ರಿಯಾಂಕಾ ಅವರಿಗೆ ಶಾರದಾಂಬೆಯ ಮೂರ್ತಿ ನೀಡಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಮತಶಿಕಾರಿ ಜೊತೆ ದೋಸೆ ತಯಾರಿ – ಮೈಲಾರಿ ಹೋಟೆಲ್‌ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ
ಶ್ರೀಗಳಿಂದ ಆಶೀರ್ವಾದ ಪಡೆದ ಪ್ರಿಯಾಂಕಾ ಗಾಂಧಿ, ಶೃಂಗೇರಿ ದೇವಾಲಯದ ಮಠದ ಜಯಲಕ್ಷ್ಮಿ ಮತ್ತು ಶ್ರೀಲಕ್ಷ್ಮೀ ಆನೆಗಳಿಗೆ ಸೇಬು, ಬಾಳೆಹಣ್ಣು ತಿನ್ನಿಸಿದರು. ಆನೆಗಳ ಮೈ ಸವರಿ ಆಶೀರ್ವಾದ ಪಡೆದರು. ನಂತರ ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೂ ಭೇಟಿ ನೀಡಿದರು. ಬಾಳೇಹೊನ್ನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು ‘ತಂದೆಯೊಂದಿಗೆ ಶಾರದ ಪೀಠಕ್ಕೆ ಈ ಮೊದಲು ಭೇಟಿ ನೀಡಿದ್ದೆ, ಇದೊಂದು ಪುಣ್ಯ ಸ್ಥಳ. ಇಂದಿನ ಭೇಟಿಯಿಂದ ಸಂತಸವಾಯಿತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ’ ಎಂದರು. ಗಾಂಧಿ ಕುಟುಂಬ ಶೃಂಗೇರಿ ಶಾರದಾಂಬಾ ದೇವಸ್ಥಾನದ ಮೇಲೆ ವಿಶೇಷ ನಂಬಿಕೆ ಹೊಂದಿದ್ದು, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು. 1978ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಇಂದಿರಾ ಗಾಂಧಿ ಶೃಂಗೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶೃಂಗೇರಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಿಯಾಂಕಾ ಗಾಂಧಿ ಶೃಂಗೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಓಡಾಟ ನಡೆಸಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ.

suddiyaana