ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ – ಯಾರೆಲ್ಲಾ ಭಾಗಿಯಾಗ್ತಿದ್ದಾರೆ ಗೊತ್ತಾ?
ವಯನಾಡು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿದ್ದು ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ವಯನಾಡಿನ ಕಲ್ಪೆಟ್ಟಾದಲ್ಲಿ ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳೆದ ಚುನಾವಣೆಯಲ್ಲಿ ರಾಯ್ಬರೇಲಿ ಮತ್ತು ವಯನಾಡು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದರು. ಇದರಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದ ರಾಹುಲ್, ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ವಯನಾಡು ಕ್ಷೇತ್ರ ತೆರವಾಗಿದ್ದು ನವೆಂಬರ್ 13ರಂದು ಮತದಾನ ನಡೆಯಲಿದೆ. ರಾಹುಲ್ ಗಾಂಧಿಯ ನಂತರ ಕೇರಳದಿಂದ ಚುನಾವಣಾ ಸ್ಪರ್ಧೆಗೆ ಇಳಿಯುತ್ತಿರುವ ಗಾಂಧಿ ಕುಟುಂಬದ ಎರಡನೇ ಕುಡಿ ಪ್ರಿಯಾಂಕಾ ಗಾಂಧಿ.
ನಾಮಪತ್ರದಲ್ಲಿ ಘಟಾನುಘಟಿಗಳು!
ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆಯನ್ನು ಕಾಂಗ್ರೆಸ್ ಹಬ್ಬದ ರೀತಿಯಲ್ಲಿ ಆಚರಿಸಲು ಹೊರಟಿದೆ. ಇದೇ ಕಾರಣದಿಂದ ನಾಮಪತ್ರ ಸಲ್ಲಿಕೆಗೆ ಭಾರೀ ತಯಾರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ, ಕಾಂಗ್ರೆಸ್ನ ರಾಷ್ಟ್ರಮಟ್ಟದ ಬಹುತೇಕ ಹಿರಿಯ ನಾಯಕರೆಲ್ಲಾ ನಾಳೆ ವಯನಾಡಿನಲ್ಲಿ ಮೇಳೈಸಲಿದ್ದಾರೆ.
ವಯನಾಡು ನನ್ನ ಹೃದಯದಲ್ಲಿದೆ.
ಪ್ರಿಯಾಂಕಾ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ದೆಹಲಿಯಿಂದ ಹೊರಡುವುದಕ್ಕೂ ಮೊದಲು ಎಕ್ಸ್ನಲ್ಲಿ ರಾಹುಲ್ ಗಾಂಧಿ ವಯನಾಡಿನ ಜನರಿಗೆ ಭಾವುಕ ಸಂದೇಶ ನೀಡಿದ್ದಾರೆ. ವಯನಾಡು ನನ್ನ ಹೃದಯದಲ್ಲಿದೆ ಎಂದು ಎಕ್ಸ್ನಲ್ಲಿ ಬರೆದಿರುವ ರಾಹುಲ್, ನನ್ನ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರವನ್ನು ಪ್ರತಿನಿಧಿಸಲು ಪ್ರಿಯಾಂಕಾ ಗಾಂಧಿಗಿಂತ ಉತ್ತಮ ಆಯ್ಕೆ ಬೇರೆ ಯಾರೂ ಇರಲು ಸಾಧ್ಯವಿಲ್ಲ. ಅವರು ಲೋಕಸಭೆಯ ಒಳಗೂ ವಯನಾಡಿನ ಜನರ ಧ್ವನಿಯಾಗಲಿದ್ದಾರೆ ಎಂದು ಬರೆದುಕೊಂಡಿದ್ದರು.
ಲೋಕಸಭೆ ಪ್ರವೇಶಿಸುತ್ತಾರಾ ಪ್ರಿಯಾಂಕಾ?
ವಯನಾಡು ಉಪಚುನಾವಣೆಯ ಮೂಲಕ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ನೇರವಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಇದುವರೆಗೆ ತಾಯಿ ಸೋನಿಯಾ ಗಾಂಧಿ, ಅಣ್ಣ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಸ್ಟಾರ್ ಪ್ರಚಾರಕಿಯಾಗಿ ಪ್ರಿಯಾಂಕಾ ಪ್ರಚಾರ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ನೆಹರು-ಗಾಂಧಿ ಕುಟುಂಬದ ಮತ್ತೊಂದು ಕುಡಿ ಈಗ ಅಧಿಕೃತ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಪ್ರಿಯಾಂಕಾ ಗೆಲುವು ಸಾಧಿಸುತ್ತಾರಾ ಎನ್ನುವ ಕುತೂಹಲ ಮೂಡಿದ್ದು, ವಯನಾಡಿನಲ್ಲಿ ದೊಡ್ಡಮಟ್ಟದ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷವಿದೆ.