ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಬೆದರಿಕೆ ಮೇಲ್ – ಶಾಲೆಗಳಿಗೆ ರಜೆ, ಸಿಎಂ, ಡಿಸಿಎಂ, ಹೋಮ್‌ಮಿನಿಸ್ಟರ್ ಅಲರ್ಟ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಸುಮಾರು 40ಕ್ಕೂ ಅಧಿಕ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ರಾಜಕೀಯ ನಾಯಕರೂ ಫುಲ್ ಅಲರ್ಟ್ ಆಗಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ
ಬಾಂಬ್ ಬೆದರಿಕೆ ಕೇಳಿಬಂದ ಕೂಡಲೇ ಶಾಲೆಗಳಲ್ಲಿ ಪೊಲೀಸರು ತೀವ್ರ ತಪಾಸಣೆ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಿಕೊಡಲಾಗುತ್ತಿದೆ. ಇನ್ನೂ ಬಾಂಬ್ ಬೆದರಿಕೆ ಬಂದ ಅಕ್ಕ ಪಕ್ಕದ ಶಾಲೆಯ ಪೋಷಕರು ಕೂಡ ಆತಂಕಗೊಂಡು ಶಾಲೆಗೆ ಆಗಮಿಸಿ ಮಕ್ಕಳನ್ನು ಕಳುಹಿಸಿಕೊಡುವಂತೆ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬ್ ಬೆದರಿಕೆ ಬಂದ ಅಕ್ಕ ಪಕ್ಕದ ಕೆಲವು ಶಾಲೆಗಳಿಗೂ ಕೂಡ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ! – ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ
ಬಾಂಬ್ ಸ್ಕ್ವಾಡ್ ಆಗಮನ
ಬಾಂಬ್ ಬೆದರಿಕೆ ಕೇಳಿಬಂದ ಎಲ್ಲಾ ಶಾಲೆಗಲ್ಲಿ ಈ ತೀವ್ರ ತಪಾಸಣೆ ನಡೆಯುತ್ತಿದ್ದು, ತುಮಕೂರಿನಿಂದ ಬಂದ ಬಾಂಬ್ ಸ್ಕ್ವಾಡ್ ಸಹ ಕರೆಸಲಾಗಿದೆ. ಯಲಹಂಕ 2 ಶಾಲೆಗಳು, ಭಾರತೀನಗರ ಸೆಂಟ್ ಜಾನ್ಸ್ ಸ್ಕೂಲ್, ಕೆಂಗೇರಿಯ ಚಿತ್ರಕೂಟ ಶಾಲೆಗಳಿಗೂ ಇಮೇಲ್ ಬೆದಿಕೆ ಬಂದಿದೆ. ಸಿಲಿಕಾನ್ ಸಿಟಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಇ-ಮೇಲ್ ಬೆದರಿಕೆ ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ತೀವ್ರ ತಪಾಸಣೆ ಕೈಗೊಂಡಿದೆ.
ಪೊಲೀಸ್ ಆಯುಕ್ತರು ಹೇಳಿದ್ದೇನು?
ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಬೆಂಗಳೂರು ನಗರದ 40ಕ್ಕೂ ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಈಗಾಗಲೇ ಬೆದರಿಕೆ ಇ-ಮೇಲ್ ಮಾಡಲಾಗಿದ್ದ ಶಾಲೆಗಳಿಗೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಬಾಂಬ್ ಪತ್ತೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಹಿಂದೆಯೂ ಸಹ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಅನ್ನಿಸುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ 40 ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಮೂಲಕ ನಗರದ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 7 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಮಹದೇವಪುರದ ಗೋಪಾಲನ್ ಇಂಟರ್ನ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರು. ಕೂಡಲೇ ಶಾಲೆಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.
ಇ-ಮೇಲ್‌ನಲ್ಲಿ ಏನಿದೆ?
ಮುಜಾಹಿದ್ದಿನ್ ಹೆಸರಲ್ಲಿ ಬಾಂಬ್ ಬೆದರಿಕೆ ಮೇಲ್ ಬಂದಿದೆ. ‘ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಿರಿ. ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಸಾಯಿಸುತ್ತೇವೆ. ನೀವೆಲ್ಲರೂ ಕೂಡ ಅಲ್ಲಾಹುವಿನ ವಿರೋಧಿಗಳು. ನೀವೆಲ್ಲರೂ ಸಾಯಲು ಸಿದ್ಧರಾಗಿರಿ ’ಎಂದು ಇಮೇಲ್ನಲ್ಲಿ ಬರೆಯಲಾಗಿದೆ. ಆದ್ರೆ, ಮುಜಾಹಿದ್ದಿನ್ ಯಾರು? ಎಲ್ಲಿಂದ ಈ ಇ-ಮೇಲ್ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಿಎಂ ಸಿದ್ಧರಾಮಯ್ಯ ಹೇಳಿದ್ದೇನು?
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲಕ್ಕೂ ಎಚ್ಚರಿಕೆ ವಹಿಸಬೇಕು. ಹೀಗೆ ಬೆದರಿಕೆ ಹಾಕುವವನ್ನು ಪತ್ತೆಹಚ್ಚಬೇಕು ಅಂತಾ ಹೇಳಿದ್ದಾರೆ.
ಬಾಂಬ್ ಬೆದರಿಕೆ ಬಂದ ಶಾಲೆಗೆ ಭೇಟಿ ನೀಡಿದ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ನಿವಾಸ ಎದುರು ಇರುವ ಬೇಬಿ ಸಿಟ್ಟಿಂಗ್‌ಗೆ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿ, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ, ಟಿವಿಯಲ್ಲಿ ವಿಷಯ ತಿಳಿದು ಗಾಬರಿ ಆದೆ. ಇದೊಂದು ಹುಸಿ ಕರೆ ಅಂತ ಮೇಲ್ನೋಟಕ್ಕೆ ಗೊತ್ತಾಗ್ತಿದೆ. 8-10 ಬಾರಿ ಹೀಗೆ ಹುಸಿ ಕರೆ ಮಾಡ್ತಾರೆ ಯಾವಾಗಲಾದರೂ ನಿಜವಾಗಿಯೂ ಬಾಂಬ್ ಇಡಬಹುದು ಯಾವುದನ್ನೂ ಕಡೆಗಣಿಸೋಕೆ ಆಗಲ್ಲ ಎಂದು ಹೇಳಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಇನ್ನು ಶಾಲೆಗಳಿಗೆ ಬಾಂಬ್ ಬೆದರಿಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಪೋಷಕರು, ಮಕ್ಕಳು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇ-ಮೇಲ್ ಬೆದರಿಕೆ ಪ್ರಕರಣವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಇಂತಹ ಬೆದರಿಕೆ ಹಾಕುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದರು.
ಶಾಲೆಗೆ ಅಶೋಕ್, ಸುರೇಶ್ ಕುಮಾರ್ ಭೇಟಿ
ಬಾಂಬ್ ಬೆದರಿಕೆ ಬಂದಿರುವ ಬಸವೇಶ್ವರನಗರದಲ್ಲಿರುವ ನ್ಯಾಫಲ್ ಶಾಲೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿರು ಸುರೇಶ್ ಕುಮಾರ್, ಬಸವೇಶ್ವರ ನಗರದ ನ್ಯಾಫಲ್ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಜತೆ ಮಾತನಾಡಿದ್ದೇನೆ ಎಂದರು.
ಇನ್ನು ಆರ್. ಅಶೋಕ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಜತೆ ಮಾತನಾಡಿದ್ದೇನೆ.ಅಲ್ಲಾಗೆ ಮೋಸ ಮಾಡುತ್ತಿದ್ದಾರೆಂದು ಇ-ಮೇಲ್ ಪತ್ರದಲ್ಲಿದೆ. ದೇಶದಲ್ಲಿ ಅಲ್ಲಾಗೆ ಮೋಸ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಧರ್ಮಾಧರಿತವಾಗಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆ ಹಿಂದೆ ದೊಡ್ಡ ಜಾಲ ಇರುವ ಬಗ್ಗೆ ಗೊತ್ತಾಗುತ್ತಿದೆ. ಉಗ್ರವಾದ ಅರ್ಥದಲ್ಲಿ ಇ-ಮೇಲ್ ಬಾಂಬ್ ಬೆದರಿಕೆ ಹಾಕಿದ್ದಾರೆ. ಟೈಪ್ ಮಾಡಿದ್ದನು ನೋಡಿದ್ರೆ ಹೈ ಲೆವೆಲ್ ಟೆರರಸ್ಟ್ ತರ ಕಾಣುತ್ತೆ. ಅಲ್ಲಾಹ್ ಗೆ ತೊಂದರೆ ಮಾಡುತ್ತಿದ್ದಿರಿ, ಮುಂಬೈನಲ್ಲಿ ಗಲಾಟೆ ಮಾಡಿದ್ರಿ ಹೀಗೆಲ್ಲಾ ಮೆಸೇಜ್ ಮಾಡಿದ್ದಾರೆ. ಇವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಂಬ್ ಸ್ಕ್ವಾಡ್ ,ಡಾಗ್ ಸ್ಕ್ವಾಡ್ ಬಂದಿದೆ . ಇಲ್ಲಿವರೆಗೇ ಏನೂ ಸಿಕ್ಕಿಲ್ಲ. ಸದ್ಯ ಹದಿನೈದು ಶಾಲೆಗೆ ಮೇಲ್ ಬಂದಿದೆ . ಜನರಲ್ಲಿ ಆತಂಕ ಶುರುವಾಗಿದೆ ಎಂದು ಹೇಳಿದರು.