ಪೋಷಕರಿಗೆ ಬಿಗ್‌ಶಾಕ್! – ಬೆಂಗಳೂರಿನ ಖಾಸಗಿ ಶಾಲೆಗಳ ಶುಲ್ಕ 5%ನಿಂದ 15% ಹೆಚ್ಚಳ!

ಬೆಂಗಳೂರಿನಲ್ಲಿ ಈಗಾಗಲೇ ಬೆಲೆ ಏರಿಕೆಯ ಪರ್ವ ಶುರುವಾಗಿದೆ. ಹಾಲು, ಕಾಫಿ- ಚಹಾ , ವಿದ್ಯುತ್ ಹೀಗೆ ಎಲ್ಲವುಗಳ ಬೆಲೆ ಏರಿಕೆಯಾಗಿದೆ. ಈ ನಡುವೆ ಪ್ರತಿ ವರ್ಷವೂ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಕೆ ಮಾಡಿ ಬರೆ ಎಳೆಯಲು ಮುಂದಾಗಿವೆ. ಈ ವರ್ಷವೂ ರಾಜ್ಯದಲ್ಲಿ ಖಾಸಗಿ ಶಾಲೆಗಳು ಸದ್ದಿಲ್ಲದೇ ಸ್ಕೂಲ್ ಫೀಸ್ ಹೆಚ್ಚಳ ಮಾಡಿದೆ. ಇದ್ರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಿರುವ ಖಾಸಗಿ ಶಾಲೆಗಳು ಶುಲ್ಕದ ಹೆಸರಲ್ಲಿ ಪೋಷಕರ ಕನಸುಗಳನ್ನು ನುಚ್ಚುನೂರು ಮಾಡುತ್ತಿವೆ.
ಇದನ್ನೂ ಓದಿ: ಜಡ್ಡು ಬಿಟ್ಟು ಕೆಟ್ಟ CSK – 2 ವಿಕೆಟ್ ಕಿತ್ತು ಗನ್ ಶಾಟ್ ಗುನ್ನಾ
ಈ ವರ್ಷ ಸರ್ಕಾರ ಶಾಲಾ ಪ್ರವೇಶಕ್ಕೆ ಕೇವಲ 60 ದಿನಗಳ ವಯೋಮಿತಿ ಸಡಿಲಿಕೆ ನೀಡಿರುವುದು ಕೂಡ ಪೋಷಕರಿಗೆ ಮತ್ತೊಂದು ಸಮಸ್ಯೆಯಾಗಿದೆ. ಕಳೆದ ವರ್ಷ ಇದ್ದಂತೆ 5.5 ವರ್ಷದ ವಯೋಮಿತಿಯನ್ನು ಮುಂದುವರಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಮಕ್ಕಳನ್ನು ಮತ್ತೆ ಯುಕೆಜಿ ತರಗತಿಯನ್ನು ಪುನರಾವರ್ತನೆ ಮಾಡಿಸಬೇಕಾಗಿ ಬರುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ಶುಲ್ಕವನ್ನು ಮತ್ತೊಮ್ಮೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಪೋಷಕರು ಹೇಳುತ್ತಿದ್ದಾರೆ. ಇದ್ರ ಮಧ್ಯೆ ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿ ಮತ್ತಷ್ಟು ತಲೆನೋವು ತಂದಿವೆ. ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026–27ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಕೆಲವು ಖಾಸಗಿ ಶಾಲೆಗಳು ಆರಂಭಿಸಿವೆ. ಇದೇ ಸಂದರ್ಭದಲ್ಲಿ ಹಲವು ಶಾಲೆಗಳು 5ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಲು ಮುಂದಾಗಿವೆ ಎಂಬ ಆರೋಪ ಪೋಷಕರ ವಲಯದಲ್ಲಿ ಕೇಳಿಬರುತ್ತಿದೆ. ಇದರಿಂದ ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಿಸಿರುವುದು ಪೋಷಕರಿಗೆ ಇನ್ನಷ್ಟು ಕಷ್ಟ ತಂದಿದೆ. ಕೆಲ ಶಾಲೆಗಳು ಕನಿಷ್ಠ 5ರಿಂದ 10 ಶೇಕಡಾ, ಕೆಲವು ಶಾಲೆಗಳು 10ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಪ್ರತಿ ವರ್ಷವೂ ಖಾಸಗಿ ಶಾಲೆಗಳು ವಿವಿಧ ಕಾರಣಗಳನ್ನು ನೀಡಿ ಶುಲ್ಕ ಹೆಚ್ಚಿಸುತ್ತಿರುವುದರಿಂದ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸಲು ತಮಿಳುನಾಡು ಮಾದರಿಯಂತೆ ಶುಲ್ಕ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪೋಷಕರ ಸಮನ್ವಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ನೋಡಿರಿ

