ಶಕ್ತಿ ಯೋಜನೆ ಬಳಿಕ ಖಾಸಗಿ ಬಸ್ ಗಳಿಗೆ ಪ್ರಯಾಣಿಕರ ಕೊರತೆ – 20 ಸಾವಿರ ಖಾಸಗಿ ಬಸ್ ಗಳ ಸಂಚಾರ ಸ್ಥಗಿತ

ಶಕ್ತಿ ಯೋಜನೆ ಬಳಿಕ ಖಾಸಗಿ ಬಸ್ ಗಳಿಗೆ ಪ್ರಯಾಣಿಕರ ಕೊರತೆ – 20 ಸಾವಿರ ಖಾಸಗಿ ಬಸ್ ಗಳ ಸಂಚಾರ ಸ್ಥಗಿತ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಈ ಯೋಜನೆಯಿಂದ ಖಾಸಗಿ ಬಸ್ ಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ 20 ಸಾವಿರ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಇದರಿಂದ ಆ ಬಸ್‌ಗಳನ್ನು ನಂಬಿಕೊಂಡಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದು, ಖಾಸಗಿ ಸಾರಿಗೆ ಒಕ್ಕೂಟವು ಸರಕಾರದ ನೆರವಿನ ನಿರೀಕ್ಷೆಯಲ್ಲಿಇದೆ.

ಇದನ್ನೂ ಓದಿ : ವಾಟ್ಸಾಪ್‌ ನಿಂದ ಮತ್ತೊಂದು ಫೀಚರ್ – ಬಳಕೆದಾರರಿಗೆ ಪರಿಚಯಿಸುತ್ತಿದೆ ವಾಯ್ಸ್​ ನೋಟ್​!

ಈಗಾಗಲೇ ಕೊವಿಡ್ ನಿಂದ ರಾಜ್ಯದ ಖಾಸಗಿ ಸಾರಿಗೆ ವಲಯ ಸಂಪೂರ್ಣ ಸ್ತಬ್ಧವಾಗಿತ್ತು. ಕೊವಿಡ್ ಬಳಿಕವೂ ಒಂದು ವರ್ಷ ಜನಜೀವನ ಯಥಾಸ್ಥಿತಿಗೆ ಬಂದಿರಲಿಲ್ಲ. ಇನ್ನೇನು ಎಲ್ಲವೂ ಸರಿ ಹೋಗುತ್ತಿತ್ತು.  ರಾಜ್ಯದಲ್ಲಿ ಸುಮಾರು 70 ಸಾವಿರ ಖಾಸಗಿ ಸಾರಿಗೆ ಬಸ್‌ಗಳಿದ್ದು, ಅದರಲ್ಲಿ ಶೇ.40ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ, ತೆರಿಗೆ ಬರೆ ಸೇರಿದಂತೆ ನಾನಾ ಕಾರಣಗಳಿಂದ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರಾತ್ರಿ ವೇಳೆ ದೂರದ ಊರುಗಳಿಗೆ ಹೋಗುವ ಬಸ್‌ಗಳಿಗೆ ಸ್ವಲ್ಪ ಬೇಡಿಕೆಯಿದೆ. ಆದರೆ ಬೇರೆ ಯಾವುದೇ ಊರುಗಳಿಗೆ ಹಗಲಿನಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರೇ ಇಲ್ಲದಂತಾಗಿದೆ. ಇನ್ನು ಪ್ರವಾಸಿ ತಾಣಗಳಿಗೂ ಉಚಿತ ಬಸ್‌ ಹಿನ್ನೆಲೆ ಮಹಿಳೆಯರು ಸರಕಾರಿ ಸಾರಿಗೆಯನ್ನು ಅವಲಂಬಿಸುತ್ತಿದ್ದಾರೆ ಎಂದು ಖಾಸಗಿ ಸಾರಿಗೆ ಒಕ್ಕೂಟ ತಿಳಿಸಿದೆ.

ಖಾಸಗಿ ಬಸ್ ಗಳ ಸ್ಥಗಿತ ಒಂದು ಕಡೆಯಾದ್ರೆ ಅವುಗಳನ್ನೇ ನಂಬಿಕೊಂಡಿದ್ದ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕಡಿಮೆ ವಿದ್ಯಾಭ್ಯಾಸ ಪಡೆದವರು ಇದರಲ್ಲಿ ಜೀವನ ಕಟ್ಟಿಕೊಂಡಿದ್ದರು. ಆದರೆ ಶಕ್ತಿ ಯೋಜನೆಯಿಂದ 20 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಿಲ್ಲಿಸಿದ ಹಿನ್ನೆಲೆ ಇದರಲ್ಲಿ ಕೆಲಸ ಮಾಡುತ್ತಿದ್ದ 70 ಸಾವಿರಕ್ಕೂ ಹೆಚ್ಚು ಕಾರ್ಮಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ. ಅವರು ಕೆಲಸಕ್ಕೆ ಮತ್ತೊಂದೆಡೆ ಹುಡುಕಿ ಹೋಗುವ ಅನಿವಾರ್ಯತೆ ಎದುರಾಗಿದೆ.

ಕೊವಿಡ್ ನಿಂದ ಆರ್ಥಿಕ ಹೊರೆಯಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ ಶಕ್ತಿ ಯೋಜನೆ ಎಫೆಕ್ಟ್ ತಟ್ಟಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಿಲ್ಲಿಸಿವೆ. ಖಾಸಗಿ ಸಾರಿಗೆಗೆ ತೆರಿಗೆಯಲ್ಲಿ ರಿಯಾಯಿತಿ ನೀಡಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನಟರಾಜ್‌ ಶರ್ಮಾ ಹೇಳಿದ್ದಾರೆ.

Shantha Kumari