ಖಾಸಗಿ ಬಸ್ & ಕಾರು ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ! –ಒಂದೇ ಕುಟುಂಬದ 6 ಮಂದಿ ಸಾವು!

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಾಪುರ ಬಳಿ ಭೀಕರ ಅಪಘಾತಕ್ಕೆ 6 ಮಂದಿ ಬಲಿಯಾಗಿದ್ದಾರೆ. ಇದೀಗ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಒಂದೇ ಕುಟುಂಬದ 6 ಮಂದಿ ವಿಧಿಯ ಆಟಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಕುಡಿದು ಬಂದ ವ್ಯಕ್ತಿಗೆ ಟೆಸ್ಟ್ ಡ್ರೈವ್ ನೀಡಿದ ಕಾರು ಶೋ ರೂಂ ಸಿಬ್ಬಂದಿ! – 4 ವಾಹನ ಜಖಂ.. ವ್ಯಕ್ತಿ ಕಾಲು ಕಟ್!
ಯಾದಗಿರಿಯಿಂದ ರಾಯಚೂರು ಕಡೆ ಹೊರಟಿದ್ದ ಕಾರು, ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಇದೀಗ ಸಾವನ್ನಪ್ಪಿದವರ ಗುರುತು ಪತ್ತೆಯಾಗಿದೆ.
ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣನಾಯಕ್ (50), ಕೃಷ್ಣನಾಯಕ್ ಹೆಂಡತಿ ಅನಂತ್ ಕಲಾ (45), ಶರಣಪ್ಪ (36), ಶರಣಪ್ಪ ಹೆಂಡತಿ ನಿಸರ್ಗ (30), ಶರಣಪ್ಪ ಮಗು ಸಿದ್ದಾರ್ಥ್ (3) ಮತ್ತು ಶಶಿಕಲಾ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪವಾಡವೆಂಬಂತೆ ಬದುಕುಳಿದಿದ್ದಾರೆ. ಅಥ್ವಿಕ (5) ಮತ್ತು ಒಂದು ವರ್ಷದ ಮಗು ಶ್ರೀನಿಧಿಗೆ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಅಪಘಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್, ಕೃಷ್ಣನಾಯಕ್ ಅವರ ಕುಟುಂಬ ಹೊಸ ಕಾರು ಖರೀದಿಸಿದ್ದರು. ಹೊಸ ಕಾರಿಗೆ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಹೋಗುವಾಗ ಘಟನೆ ನಡೆದಿದ್ದು, ಕಾರು ಓವರ್ಟೇಕ್ ಮಾಡಲು ಹೋದಾಗ ಅಪಘಾತ ಸಂಭವಿಸಿದೆ. ಕಾರು ಬಸ್ಗೆ ಗುದ್ದಿದ ಬಳಿಕ ಸುಮಾರು 50 ಮೀಟರ್ ದೂರ ಬಸ್ ಕಾರನ್ನು ಎಳೆದುಕೊಂಡು ಹೋಗಿದೆ. ಕಾರಿನಲ್ಲಿ ಒಂದೇ ಕುಟುಂಬದ ಎಂಟು ಜನ ಪ್ರಯಾಣಿಸುತ್ತಿದ್ದರು. ಆ ಪೈಕಿ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳಿಗೆ ಗಾಯವಾಗಿದ್ದು, ಅವರನ್ನು ಯಾದಗಿರಿ ಯಿಮ್ಸ್ಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

ನೋಡಿರಿ

