ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ – ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ – ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯಾದ್ಯಂತ ಇವತ್ತು (ನ.1) ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಕನ್ನಡ ಸಾಧಕರ ಭಾವಚಿತ್ರಗಳನ್ನಿಟ್ಟು ಹಲವು ಕನ್ನಡ ಗೀತೆಗಳನ್ನು ಮೇಳೈಸುವ ಮೂಲಕ ಜನ ಸಂಭ್ರಮಿಸುತ್ತಿದ್ದಾರೆ. ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ  ಕೂಡ ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.

ಟ್ವೀಟ್‌ ಮಾಡಿ ಶುಭಕೋರಿರುವ ಪ್ರಧಾನಿ ಮೋದಿ ಅವರು, ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ 50ರ ಸಂಭ್ರಮ – ನವೆಂಬರ್ 1 ರಂದೇ ಕನ್ನಡ ರಾಜ್ಯೋತ್ಸವ ಆಚರಣೆ ಏಕೆ? ಇಲ್ಲಿದೆ ಮಹತ್ವದ ಮಾಹಿತಿ..

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಅವರು ಕೂಡ  ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ. 1973ರ ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವಸಂತಗಳು ಸಂದಿವೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಶುಭಕೋರಿದ್ದಾರೆ. ನಾಡಿನ ಹಾಗೂ ಜಗತ್ತಿನೆಲ್ಲೆಡೆ ನೆಲೆಸಿರುವ ಸಮಸ್ತ ಕನ್ನಡ ಬಂಧುಗಳಿಗೆ 68ನೇ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆಯೇ, ‘ಕರ್ನಾಟಕ’ವೆಂದು ಹೆಸರಾಗಿ ಇಂದಿಗೆ 50 ವರ್ಷ ಸಾಧಿಸಿದ್ದು ಸಾಕಷ್ಟು, ಸಾಧಿಸಬೇಕಾದದ್ದು ಬಹಳಷ್ಟು. ಕನಸು ನನಸುಗಳ ಈ ಮಹಾಯಾನದಲ್ಲಿ ಸಾರ್ಥಕ ಹೆಜ್ಜೆಗಳನ್ನು ಇಡುತ್ತಾ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸೋಣ. ಪ್ರತಿ ಹೊಸಿಲಿನಲ್ಲಿಯೂ ಕನ್ನಡದ ನಂದಾದೀಪ ಬೆಳಗಲಿ, ಆ ಹೊನಲು ಜಗವೆಲ್ಲಾ ತುಂಬಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

Shwetha M