ಮಣಿಪುರದಲ್ಲಿ ನಡೆದ ಪೈಶಾಚಿಕ ಕೃತ್ಯ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ – ತಪ್ಪಿತಸ್ಥರ ಬಂಧನಕ್ಕೆ ಅಮಿತ್ ಶಾ ಸೂಚನೆ

ಮಣಿಪುರದಲ್ಲಿ ನಡೆದ ಪೈಶಾಚಿಕ ಕೃತ್ಯ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ – ತಪ್ಪಿತಸ್ಥರ ಬಂಧನಕ್ಕೆ ಅಮಿತ್ ಶಾ ಸೂಚನೆ

ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಈ ಅಮಾನುಷ ಘಟನೆ ಜೊತೆಗೆ ಪೈಶಾಚಿಕ ಕೃತ್ಯದ ವಿಡೀಯೋ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮಣಿಪುರ ಹಿಂಸಾಚಾರದ ಬಗ್ಗೆ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಬೆತ್ತಲೆ ಮೆರವಣಿಗೆ ಕೃತ್ಯವನ್ನು ಖಂಡಿಸಿರುವ ಮೋದಿ,  ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ದೇಶವೇ ತಲೆತಗ್ಗಿಸುವ ಪೈಶಾಚಿಕ ಕೃತ್ಯ – ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ..!

ಮೇ 4ರಂದು ನಡೆದಿದ್ದ ಘಟನೆಯ ವಿಡಿಯೋ ವೈರಲ್ ಆದ ಮೇಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. 32 ವರ್ಷದ ಹೆರದಾಸ್ ಬಂಧಿತ ಆರೋಪಿ. ಹಸಿರು ಟಿ-ಶರ್ಟ್ ಧರಿಸಿದ್ದ ಹೆರದಾಸ್ ಎನ್ನುವ ಆರೋಪಿಯನ್ನು ವಿಡಿಯೋನಲ್ಲಿ ಗುರುತಿಸಿ ತೌಬಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ವಿಡಿಯೋವನ್ನು ಹಂಚಿಕೊಳ್ಳದಂತೆ ಟ್ವಿಟರ್‌ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಟ್ವೀಟರ್ ಸೇರಿ ವಿವಿಧ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸೂಚಿಸಿದೆ.

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿ ಮೆರವಣಿಗೆ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಸಿಜೆ, ಈ ಸಂಬಂಧ ವರದಿ ನೀಡುವಂತೆ ಕೇಂದ್ರ, ಮಣಿಪುರ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಸೂಚನೆ ಕೊಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಣಿಪುರ ಸಿಎಂ ಬಿರೇನ್ ಸಿಂಗ್‌ಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮಹಿಳೆಯರ ಬೆತ್ತಲೆಗೊಳಿಸಿದ ಪ್ರಕರಣಕ್ಕೆ ಮೋದಿ ಖಂಡಿಸಿದ್ದು, ಇದು ಇಡೀ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಈ ಘಟನೆಯಿಂದ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆಯಾಗಿದ್ದು, ಈ ಘಟನೆ ತುಂಬಾ ನೋವುಂಟು ಮಾಡಿದೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮವಾಗುತ್ತೆ, ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ನನ್ನ ಹೃದಯ ನೋವು ಮತ್ತು ಕೋಪದಿಂದ ತುಂಬಿದೆ. ಮಣಿಪುರದ ಘಟನೆ ಯಾವುದೇ ಸುಸಂಸ್ಕೃತ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ಎಲ್ಲಾ ಸಿಎಂಗಳು ತಮ್ಮ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು. ವಿಶೇಷವಾಗಿ ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

suddiyaana