ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ – ಕಲಾತಂಡಗಳ ಮೆರುಗು, ದಾರಿಯುದ್ದಕ್ಕೂ ಹೂಮಳೆ..!
ರಾಜ್ಯದಲ್ಲಿ ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ ನಡೆಸಿದ್ದಾರೆ. ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿ.ಮೀ ರೋಡ್ ಶೋ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋ – ಜೇನು ನೊಣ, ಬೀದಿ ನಾಯಿ, ಹಾವು, ಕೋತಿಗಳಿಗೆ ಬಂಧನ ಭೀತಿ!
ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟವು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರತ್ತ ಪ್ರಧಾನಿ ಮೋದಿ ಅವರು ಹೂವನ್ನು ಎಸೆದು ಸಂತಸ ವ್ಯಕ್ತಪಡಿಸಿದರು. ರೋಡ್ ಶೋ ವೇಳೆ ಮೋದಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಬೆಂಬಲಿಗರು ಸೇರಿದ್ದರು. ಮೋದಿ ರೋಡ್ ಶೋ ವೇಳೆ ಮಕ್ಕಳು ಕೂಡ, ಆದಿ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ, ಮಧ್ವಾಚಾರ್ಯರ ಸೇರಿದಂತೆ ಇನ್ನಿತರ ಮಹಾನುಭಾವರ ವೇಷ ಧರಿಸಿ ಬಂದಿದ್ದು ವಿಶೇಷವಾಗಿತ್ತು. ರೋಡ್ ಶೋ ವೇಳೆ ಹನುಮಂತನ ಮುಖವಾಡಗಳನ್ನು ಧರಿಸಿ ಕೆಲವರು ಭಾಗವಹಿಸಿದ್ದರು. ಹಿಂದುತ್ವ ಸಂಘಟನೆಯಾದ ಬಜರಂಗದಳವನ್ನು ನಿಷೇಧಿಸುವಂತೆ ಸೂಚಿಸಿದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ವಿರೋಧಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಪ್ರಧಾನಿ ಬೆಂಬಲಿಗರು ಹನುಮಂತನ ಮುಖವಾಡಗಳನ್ನು ಧರಿಸಿದ್ದರು. ಪ್ರಧಾನಿ ಮೋದಿಗೆ ಜೊತೆ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ಸಂಸದರಾದ ತೇಜಸ್ವೀ ಸೂರ್ಯ ಮತ್ತು ಪಿಸಿ ಮೋಹನ್ ಸಾಥ್ ನೀಡಿದರು.