ಮುಂದಿನ ವರ್ಷ ಪ್ರಧಾನಿ ಮೋದಿ ಧ್ವಜಾರೋಹಣ ಮಾಡುತ್ತಾರೆ.. ಆದರೆ ಅದು ಅವರ ಮನೆಯಲ್ಲಿ – ಕಾಂಗ್ರೆಸ್‌ ನಾಯಕರ ಲೇವಡಿ

ಮುಂದಿನ ವರ್ಷ ಪ್ರಧಾನಿ ಮೋದಿ ಧ್ವಜಾರೋಹಣ ಮಾಡುತ್ತಾರೆ.. ಆದರೆ ಅದು ಅವರ ಮನೆಯಲ್ಲಿ – ಕಾಂಗ್ರೆಸ್‌ ನಾಯಕರ ಲೇವಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಮಣಿಪುರ ಹಿಂಸಾಚಾರ, ಚಂದ್ರಯಾನ – 3, ದೇಶದ ಅಭಿವೃದ್ದಿ ಮುಂತಾದ ವಿಚಾರಗಳ ಬಗ್ಗೆ ಮೋದಿ ಮಾತನಾಡಿದ್ದರು. ಇದೀಗ ಪ್ರಧಾನಿ ಭಾಷಣಕ್ಕೆ ಕಾಂಗ್ರೆಸ್‌ ನಾಯಕರು ಲೇವಡಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ಇದೇ ಸ್ಥಳ, ಇದೇ ಸಮಯದಲ್ಲಿ ಕೆಂಪುಕೋಟೆಯಲ್ಲಿ ಮತ್ತೆ ಧ್ವಜಾರೋಹಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವ್ಯಂಗ್ಯವಾಡಿದ್ದಾರೆ. ಮೋದಿಯವರು ಮುಂದಿನ ವರ್ಷ ಧ್ವಜಾರೋಹಣ ಮಾಡುತ್ತಾರೆ. ಆದರೆ, ಅದು ಅವರ ಮನೆಯಲ್ಲಿ. ಮುಂದಿನ ವರ್ಷ ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ದೇಶದ ಸಾಧನೆಯ ಕುರಿತು ನಾನು ಮಾತನಾಡುತ್ತೇನೆಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ – ದೇಶ ನಿಮ್ಮ ಜೊತೆಗಿದೆ.. ಶಾಂತಿ ಕಾಪಾಡಲು ಮಣಿಪುರದ ಜನತೆಗೆ ಮೋದಿ ಮನವಿ  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆದ್ದ ಬಳಿಕ ಮುಂದೆಯೂ ನಾನೇ ಅಧಿಕಾರದಲ್ಲಿರುತ್ತೇನೆಂದು ಪ್ರತಿಯೊಬ್ಬ ವ್ಯಕ್ತಿಯೂ ಹೇಳುತ್ತಾರೆ. ಆದರೆ, ಗೆಲುವು, ಸೋಲು ಎಂಬುದು ಜನರ ಮತ್ತು ಮತದಾರರ ಕೈಯಲ್ಲಿಸುತ್ತದೆ. 2024ರಲ್ಲಿಯೂ ನಾನೇ ಧ್ವಜಾರೋಹಣ ಮಾಡುತ್ತೇನೆಂದು ಹೇಳುವುದು ಅಹಂಕಾರದ ಪರಮಾವಧಿ. ಸ್ವಾತಂತ್ರ್ಯ ದಿನಾಚರಣೆಯ ದಿನವೂ ವಿಪಕ್ಷಗಳ ವಿರುದ್ಧ ಹೇಳಿಕೆ ನೀಡಿದರೆ. ದೇಶವನ್ನು ಹೇಗೆ ಕಟ್ಟುತ್ತಾರೆಂದು ಪ್ರಶ್ನಿಸಿದ್ದಾರೆ.

ಇನ್ನು ಕಾಂಗ್ರೆಸ್‌ ಸಂಸದ ಕೆ.ಸಿ ವೇಣುಗೋಪಾಲ್‌ ಕೂಡ ಪ್ರಧಾನಿ ಮೋದಿ ಅವರ ಹೇಳಿಕೆ ಕಿಡಿಕಾರಿದ್ದಾರೆ. 2024ರ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರಬೇಕು, ಯಾರು ಸೋಲಬೇಕೆಂಬುದನ್ನು ಜನರು ನಿರ್ಧರಿಸುತ್ತಾರೆ. 2024ರವರೆಗಾದರೂ ಕಾಯೋಣ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದ ಜನರೊಂದಿಗೆ ಇಡೀ ದೇಶ ಇದೆ. ಶಾಂತಿಯಿಂದ ಪರಿಹಾರ ಸಾಧ್ಯವಿದ್ದು, ಶಾಂತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೂ ಕೂಡ ಸಚಿವ ದಿನೇಶ್‌ ಗುಂಡೂರಾವ್‌ ವ್ಯಂಗ್ಯವಾಡಿದ್ದಾರೆ. “ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ‌ ಪ್ರಧಾನಿ ಕೊನೆಗೂ ಕರೆ ಕೊಟ್ಟಿದ್ದಾರೆ. ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಲು ಸ್ವಾತಂತ್ರ್ಯ ದಿನಾಚರಣೆಯವರೆಗೂ ಕಾಯಬೇಕಾಯ್ತು”ಎಂದು ವ್ಯಂಗ್ಯವಾಡಿದ್ದಾರೆ.

suddiyaana