ಮಲೆನಾಡಿಗರ ದಶಕಗಳ ಕನಸು ಕೊನೆಗೂ ನನಸು – ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದ ‘ನಮೋ’!
ಮಲೆನಾಡು ಶಿವಮೊಗ್ಗದಲ್ಲಿ ಇವತ್ತು ಸಂಭ್ರಮ ಮನೆ ಮಾಡಿದೆ. ದಶಕಗಳ ಕನಸು ಕೊನೆಗೂ ಈಡೇರಿದೆ. ನೂತನ ವಿಮಾನ ನಿಲ್ದಾಣ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದಾರೆ. ದೆಹಲಿಯಿಂದ ಸೇನಾ ವಿಮಾನದಲ್ಲಿ ಶಿವಮೊಗ್ಗಕ್ಕೆ ಮೋದಿ ಬಂದಿಳಿದಿದ್ದಾರೆ. ಪ್ರಧಾನಿಯನ್ನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಹಲವರು ಸ್ವಾಗತಿಸಿದರು.
ಕಾರ್ಯಕ್ರಮ ಹಿನ್ನೆಲೆ ಬೈಪಾಸ್ ಸರ್ಕಲ್ ನಿಂದ 8 ಕಿ.ಮಿ. ಟ್ರಾಫಿಕ್ ಜಾಮ್ ಕಂಡು ಬಂದಿದೆ. ಕಾರ್ಯಕ್ರಮಕ್ಕೆ ಜನರ ಹೊತ್ತು ಆಗಮಿಸುತ್ತಿರುವ ಬಸ್ಗಳು ರಸ್ತೆಯಲ್ಲಿ ನಿಂತಿವೆ. ಕಿಲೋ ಮೀಟರ್ ಗಟ್ಟಲೆ ಸಾಲು ಗಟ್ಟಿ ವಾಹನಗಳು ನಿಂತಲ್ಲೇ ನಿಂತಿವೆ. ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ವಿಮಾನ ನಿಲ್ದಾಣದ ಸುತ್ತಮುತ್ತ ಜನಜಂಗುಳಿಯೇ ನೆರೆದಿದೆ.
ಇದನ್ನೂ ಓದಿ : ಫೆಬ್ರವರಿ 27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಶಕ್ತಿಪ್ರದರ್ಶನ – ರೋಡ್ ಶೋಗೆ ಹೇಗಿದೆ ಗೊತ್ತಾ ಸಿದ್ಧತೆ..?
ಮತ್ತೊಂದೆಡೆ ಇವತ್ತೇ ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬ ಇದ್ದು, ಯಡಿಯೂರಪ್ಪ ಮನೆಯ ದೇವರಾದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಷ್ಟೋತ್ತರ ಸೇವೆ, ರುದ್ರಾಭಿಷೇಕ ಸೇರಿದಂತೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಕಾರ್ಯಕರ್ತರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬಿಸಿಬೇಳೆ ಬಾತ್, ಮೈಸೂರ್ ಪಾಕ್, ಕೇಸರಿಬಾತ್ ಸೇರಿದಂತೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬಿಎಸ್ವೈ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಹುಗ್ಗಿ, ಮೊಸರು ಅನ್ನ, ಮಜ್ಜಿಗೆ ಇರಲಿದೆ.
ಶಿವಮೊಗ್ಗದ ವಿಮಾನ ನಿಲ್ದಾಣವನ್ನು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ವಿಮಾನ ನಿಲ್ದಾಣದ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡವು ಗಂಟೆಗೆ 300 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ ಸರ್ವೇ ನಂ. 120 ರಲ್ಲಿ 775 ಎಕರೆ ಭೂಮಿಯಲ್ಲಿ ಏರ್ಪೋರ್ಟ್ ಕಾಮಗಾರಿಯು 384 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಈಗಾಗಲೇ ಟ್ರಯಲ್ ಬೇಸ್ ಮೇಲೆ 2 ವಿಮಾನಗಳು ಲ್ಯಾಂಡ್ ಆಗಿವೆ. ಒಟ್ಟು ವಿಮಾನ ನಿಲ್ದಾಣಕ್ಕೆ 600 ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ ಕಟ್ಟಡ ಕಾಮಗಾರಿಗೆ 449 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಉಳಿದ ಹಣದಲ್ಲಿ ಭೂ ಖರೀದಿಗೆ ನೀಡಲಾಗಿದೆ. ಈ ನಿಲ್ದಾಣ 3.2 ಕಿಲೋಮೀಟರ್ ರನ್ ವೇ ಹೊಂದಿದೆ. ವಿಮಾನ ನಿಲ್ದಾಣದ ಸುತ್ತಲಿನ ಕೌಂಪೌಂಡ್ 15,900 ಮೀಟರ್ ಉದ್ದವಿದೆ.