ಬಜೆಟ್ ಮಂಡನೆಗೆ ಭರ್ಜರಿ ಸಿದ್ಧತೆ – ಈ ಸಲ ಯಾರಿಗೆಲ್ಲಾ ಬಂಪರ್ ಆಫರ್..!?
ಬೆಂಗಳೂರು : ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಬಜೆಟ್ ಮಂಡನೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದೆ. ಜನವರಿ 23ರಿಂದ 25ರವರೆಗೆ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ. ಈ ಸಲ ಸರ್ಕಾರದಿಂದ ಯಾರಿಗೆಲ್ಲಾ ಬಂಪರ್ ಆಫರ್ ಸಿಗುತ್ತೆ ಅನ್ನೋ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ :ಇನ್ನೂ ಒಂದು ವಾರ ರಾಜ್ಯದಲ್ಲಿ ವಿಪರೀತ ಚಳಿ – ಹವಾಮಾನ ಇಲಾಖೆ ಮುನ್ಸೂಚನೆ
ಜನವರಿ 23, 24, 25 ರಂದು 3 ದಿನಗಳ ಕಾಲ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ. ಮುಂದಿನ ತಿಂಗಳು ಅಂದರೆ ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದು ಕೊನೆಯ ಬಜೆಟ್ ಆಗಿರಲಿದೆ. ವಿಧಾನಸಭಾ ಚುನಾವಣೆ ತಯಾರಿ ನಡುವೆಯೇ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೂ ಸರ್ಕಾರ ಸಿದ್ಧತೆ ನಡೆಸಿದೆ. ಮೂರು ದಿನ ಇಲಾಖಾವಾರು ಬಜೆಟ್ ಪೂರ್ವಭಾವಿ ಚರ್ಚೆ ನಡೆಸಲು ಈಗಾಗಲೇ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಲಿದೆ. ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಪೂರ್ವಭಾವಿ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ನಿತ್ಯ ಬೆಳಗ್ಗೆ 10.30ರಿಂದ ಸಂಜೆ 6 ಗಂಟೆವರೆಗೂ ಚರ್ಚೆ ನಡೆಯಲಿವೆ. ಸಭೆಗೆ ನಿಗದಿತ ದಿನ ಹಾಗೂ ಸಮಯದಲ್ಲಿ ಆಯಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಅವಶ್ಯಕ ಮಾಹಿತಿಗಳ ಜೊತೆ ಹಾಜರಾಗಲು ತಿಳಿಸಲಾಗಿದೆ.
ಮೊದಲಿಗೆ ಜನವರಿ 23ರಂದು ಲೋಕೋಪಯೋಗಿ, ಕೌಶಲ್ಯಾಭಿವೃದ್ಧಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಸಣ್ಣ ನೀರಾವರಿ, ಸಹಕಾರ, ವಸತಿ, ಒಳಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಚರ್ಚೆ ನಡೆಯಲಿದೆ.
ಜನವರಿ 24ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮುಜರಾಯಿ, ವೈದ್ಯಕೀಯ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ, ಇಂಧನ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಸಮಾಜ ಕಲ್ಯಾಣ, ವಾಣಿಜ್ಯ ಮತ್ತು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಅರಣ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗಳ ಜೊತೆ ಸಭೆ ನಡೆಯಲಿದೆ.
ಜನವರಿ 25ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ, ಯುವ ಸಬಲೀಕರಣ ಮತ್ತು ಕ್ರೀಡಾ, ಸಾರಿಗೆ, ಕಾರ್ಮಿಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ, ಮೂಲಭೂತ ಸೌಲಭ್ಯ ಮತ್ತು ಬಂದರು, ಒಳನಾಡು ಜಲಸಾರಿಗೆ ಇಲಾಖೆಗಳೊಂದಿಗೆ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.