₹3 Cr ಬಜೆಟ್, ₹100 ಕೋಟಿ ಗ್ರಾಸ್! – BIG ಸ್ಟಾರ್ಸ್ಗೆ ಪ್ರೇಮದ ಊರಲಿ ಶಾಕ್

ಸ್ಯಾಂಡಲ್ವುಡ್ನಲ್ಲಿ ಕೋಟಿ ಕೋಟಿ ರೂಪಾಯಿ ಸುರಿದು ಸಿನಿಮಾ ಮಾಡಿದರೆ ಮಾತ್ರ ಗೆಲುವು ಸಿಗುತ್ತಾ? ದೊಡ್ಡ ಸ್ಟಾರ್ಗಳಿದ್ದರೆ ಮಾತ್ರ ಚಿತ್ರಮಂದಿರಗಳು ಹೌಸ್ಫುಲ್ ಆಗುತ್ತವಾ? ಈ ಎರಡೂ ಪ್ರಶ್ನೆಗಳಿಗೆ ಈಗ ಒಂದೇ ಸಿನಿಮಾ ಖಡಕ್ ಉತ್ತರ ಕೊಟ್ಟಿದೆ! ಅದೇ ‘ಪ್ರೇಮದ ಊರಲಿ’! ಕೇವಲ ₹3 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವಾದ್ಯಂತ ₹100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಸ್ಯಾಂಡಲ್ವುಡ್ನಲ್ಲಿ ಸಂಚಲನ ಸೃಷ್ಟಿಸಿವೆ. ಅಂದರೆ, ಕಡಿಮೆ ಬಜೆಟ್ನಲ್ಲಿ ಶುರುವಾದ ಈ ಪ್ರೇಮಕಥೆ ಈಗ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ.
ಸೆಪ್ಟೆಂಬರ್ 25ರಂದು ಬಿಡುಗಡೆಯಾದ ‘ಪ್ರೇಮದ ಊರಲಿ’ ಸಿನಿಮಾ ಇದೀಗ 23 ದಿನಗಳನ್ನು ಪೂರೈಸಿದೆ. ಆರಂಭದಲ್ಲಿ ದಿನಕ್ಕೆ ಕೇವಲ 45ರಿಂದ 60 ಶೋಗಳೊಂದಿಗೆ ಶುರುವಾಗಿದ್ದ ಈ ಚಿತ್ರದ ಓಟ, ನಾಲ್ಕನೇ ವಾರಕ್ಕೆ ಬರುವಷ್ಟರಲ್ಲಿ ಭರ್ಜರಿಯಾಗಿ ಹೆಚ್ಚಾಗಿದೆ. ಪ್ರೇಕ್ಷಕರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಮೆಚ್ಚುಗೆಯ ಮಾತುಗಳು ಹಾಗೂ ಮೌತ್ ಪಬ್ಲಿಸಿಟಿ ಸಿನಿಮಾದ ದೊಡ್ಡ ಶಕ್ತಿಯಾಗಿವೆ. ವರದಿಗಳ ಪ್ರಕಾರ, ನಾಲ್ಕನೇ ವಾರದಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಶೋಗಳನ್ನು ಕಾಣುವ ಮಟ್ಟಕ್ಕೆ ಸಿನಿಮಾ ಬೆಳೆದಿದೆ. ಈ ವೀಕೆಂಡ್ ಸೇರಿ ಕೇವಲ ₹3 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವಾದ್ಯಂತ ₹100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಹೊಸ ಶಕ್ತಿ!- ಕಾರವಾರದಲ್ಲಿ INS ಸಮರ್ಥಕ್ ಲೋಕಾರ್ಪಣೆ!
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಸಣ್ಣ ಸಿನಿಮಾಗಳು ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಅದರಲ್ಲೂ ಹಬ್ಬದ ಸೀಸನ್ನಲ್ಲಿ ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಆದರೆ ‘ಪ್ರೇಮದ ಊರಲಿ’ ಈ ಲೆಕ್ಕಾಚಾರವನ್ನೇ ಬದಲಿಸಿದೆ. ಮಲ್ಟಿಪ್ಲೆಕ್ಸ್ಗಳಿಂದ ಹಿಡಿದು ಸಿಂಗಲ್ ಸ್ಕ್ರೀನ್ಗಳವರೆಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೊಡ್ಡ ಪ್ರಚಾರಕ್ಕಿಂತ ಪ್ರೇಕ್ಷಕರ ಬಾಯಿಂದ ಬಾಯಿಗೆ ಹರಡಿದ ಮೆಚ್ಚುಗೆಯೇ ಈ ಚಿತ್ರದ ಅತಿದೊಡ್ಡ ಜಾಹೀರಾತಾಗಿದೆ.
ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿರುವ ವಿತರಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಚಿತ್ರಮಂದಿರಗಳು ಉಳಿಯಬೇಕಾದರೆ ಇಂತಹ ದೊಡ್ಡ ಗೆಲುವುಗಳು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಸು ಫ್ರಂ ಸೋ’ ಸಿನಿಮಾ ಹಲವು ಚಿತ್ರಮಂದಿರಗಳ ಬಾಗಿಲು ತೆರೆಸಿತ್ತು. ಇದೀಗ ‘ಪ್ರೇಮದ ಊರಲಿ’ 50ಕ್ಕೂ ಹೆಚ್ಚು ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭ ಮಾಡಲು ನೆರವಾಗಿದೆ ಎಂದು ಅವರು ಹೇಳಿದ್ದಾರೆ. ಕನಿಷ್ಠ ಎರಡು ವಾರಗಳಿಗೊಮ್ಮೆ ಇಂತಹ ಗೆಲುವಿನ ಸಿನಿಮಾಗಳು ಬಂದರೆ ಚಿತ್ರಮಂದಿರಗಳಿಗೂ ಹೊಸ ಜೀವ ಬರುತ್ತದೆ ಎಂದಿದ್ದಾರೆ.
ಇನ್ನು ‘ಪ್ರೇಮದ ಊರಲಿ’ಯ ಯಶಸ್ಸು ಕೇವಲ ಬಾಕ್ಸ್ ಆಫೀಸ್ಗೆ ಸೀಮಿತವಾಗಿಲ್ಲ. ಕನ್ನಡ ಚಿತ್ರರಂಗದ ಪ್ರಮುಖ ತಾರೆಯರ ಗಮನವನ್ನೂ ಸೆಳೆದಿದೆ. ಉಪೇಂದ್ರ ಶಿವರಾಜ್ಕುಮಾರ್, ರಿಷಬ್ ಶೆಟ್ಟಿ ಮತ್ತು ರಮೇಶ್ ಅರವಿಂದ್ ಅವರಂತಹ ಗಣ್ಯರು ಚಿತ್ರದ ಯಶಸ್ಸನ್ನು ಮೆಚ್ಚಿಕೊಂಡಿದ್ದಾರೆ. ನಟ ವಸಿಷ್ಠ ಸಿಂಹ ಹಾಗೂ ಅವರ ಪತ್ನಿ ಹರಿಪ್ರಿಯಾ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಇನ್ಸ್ಟಾಗ್ರಾಮ್ನಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಪಸ್ವಿನಿ ಪೂಣಚ್ಚ ಅವರ ಅಭಿನಯದ ಕುರಿತು ಮಾತನಾಡಲು ಅವರಿಗೆ ಕರೆ ಮಾಡಿದ್ದಾರೆ ಎಂಬ ವಿಚಾರವೂ ಗಮನ ಸೆಳೆದಿದೆ.
ಇನ್ನೊಂದು ಕುತೂಹಲಕಾರಿ ಬೆಳವಣಿಗೆ ‘ಬೃಂದಾ ವಿಹಾರಿ’ ಸಿನಿಮಾದ ಬಿಡುಗಡೆ ಮುಂದೂಡಿಕೆ. ಗಣೇಶ್ ಅಭಿನಯದ ಈ ಸಿನಿಮಾ ಅಕ್ಟೋಬರ್ 16ರಂದು ಬಿಡುಗಡೆಯಾಗಬೇಕಿತ್ತು. ಆದರೆ ‘ಪ್ರೇಮದ ಊರಲಿ’ಗೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಹಿನ್ನೆಲೆಯಲ್ಲಿ, ಆ ಚಿತ್ರದ ಶೋಗಳಿಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಬಿಡುಗಡೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ .ಈ ಬೆಳವಣಿಗೆ ನಿಜವಾಗಿಯೂ ‘ಪ್ರೇಮದ ಊರಲಿ’ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಸಿಕ್ಕಿರುವ ಬೆಂಬಲದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಇದರ ನಡುವೆ, ಭಾರಿ ನಿರೀಕ್ಷೆ ಮೂಡಿಸಿರುವ ‘ಜೈಲರ್ 2’ ಸೇರಿದಂತೆ ದೊಡ್ಡ ಸಿನಿಮಾಗಳ ಪೈಪೋಟಿಯ ನಡುವೆಯೂ ‘ಪ್ರೇಮದ ಊರಲಿ’ ತನ್ನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ ಎಂಬ ಚರ್ಚೆ ನಡೆಯುತ್ತಿದೆ. ವಾರಾಂತ್ಯ ಮಾತ್ರವಲ್ಲ, ವಾರದ ದಿನಗಳಲ್ಲಿಯೂ ಪ್ರೇಕ್ಷಕರ ಉತ್ಸಾಹ ಮುಂದುವರಿದಿರುವುದು ಚಿತ್ರತಂಡಕ್ಕೆ ದೊಡ್ಡ ಬಲವಾಗಿದೆ.
ಒಟ್ಟಿನಲ್ಲಿ, ₹3 ಕೋಟಿ ಬಜೆಟ್ನಿಂದ ₹100 ಕೋಟಿ ಗ್ರಾಸ್ ಕಲೆಕ್ಷನ್ವರೆಗೆ ಎಂಬ ವರದಿಗಳೊಂದಿಗೆ ಸುದ್ದಿಯಲ್ಲಿರುವ ‘ಪ್ರೇಮದ ಊರಲಿ’, ಕನ್ನಡ ಚಿತ್ರರಂಗದಲ್ಲಿ ಸಣ್ಣ ಸಿನಿಮಾಗಳ ಬಗ್ಗೆ ಹೊಸ ಭರವಸೆ ಮೂಡಿಸಿದೆ. ಆದರೆ ಇಲ್ಲಿ ನಿಜವಾದ ಗೆಲುವು ಕೇವಲ ಕಲೆಕ್ಷನ್ನಲ್ಲಿಲ್ಲ; ಪ್ರೇಕ್ಷಕರು ಒಂದು ಸಿನಿಮಾವನ್ನು ತಮ್ಮದೇ ಸಿನಿಮಾ ಎಂದು ಸ್ವೀಕರಿಸಿದಾಗ ಏನೆಲ್ಲ ಬದಲಾವಣೆ ಸಾಧ್ಯ ಎಂಬುದರಲ್ಲಿದೆ.

ನೋಡಿರಿ

