ಗುಂಡಿಮಯ ರೋಡ್‌ಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್ – ಎರಡು ಗಂಟೆ ಹೆರಿಗೆ ನೋವಲ್ಲಿ ರಸ್ತೆಯಲ್ಲೇ ನರಳಾಡಿದ ಗರ್ಭಿಣಿ..!

ಗುಂಡಿಮಯ ರೋಡ್‌ಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್ – ಎರಡು ಗಂಟೆ ಹೆರಿಗೆ ನೋವಲ್ಲಿ ರಸ್ತೆಯಲ್ಲೇ ನರಳಾಡಿದ ಗರ್ಭಿಣಿ..!

ನಾವು ರಸ್ತೆ ಅಭಿವೃದ್ಧಿ ಮಾಡಿದ್ದೀವಿ. ಆಸ್ಪತ್ರೆಗಳನ್ನ ಜನರ ಅನುಕೂಲಕ್ಕೆ ಸರಿಯಾಗಿ ಅಭಿವೃದ್ಧಿ ಮಾಡಿದ್ದೀವಿ ಅಂತಾ ರಾಜಕಾರಣಿಗಳು ಬಡಾಯಿ ಕೊಚ್ಚಿಕೊಳ್ಳುತ್ತಲೇ ಇದ್ದಾರೆ. ಆದರೆ, ಸಾಮಾನ್ಯ ಜನ ಮಾತ್ರ ಸಂಕಟ ಪಡುತ್ತಲೇ ಇರುತ್ತಾರೆ. ಇದೀಗ ತುಂಬು ಗರ್ಭಿಣಿಯೊಬ್ಬರು, ಗುಂಡಿ ತುಂಬಿದ ರಸ್ತೆಗಳಿಂದಾಗಿ 2 ಗಂಟೆ ಅಂಬ್ಯುಲೆನ್ಸ್‌ ನಲ್ಲೇ ನರಳಾಡಿರುವ ಘಟನೆ ಭಾನುವಾರ ನಡೆದಿದೆ. ಕೊಪ್ಪ ಆಸ್ಪತ್ರೆಗೆ ಕರೆದೊಯ್ಯುವಾಗ ಕಳಸ ಟು ಬಾಳೆಹೊನ್ನೂರು ಮಾರ್ಗದ ಹಳುವಳ್ಳಿ ಎಂಬಲ್ಲಿ ಗುಂಡಿಮಯವಾಗಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತಿದೆ. ಈ ಸಂದರ್ಭದಲ್ಲಿ ಹೆರಿಗೆ ನೋವಿನಿಂದ ಗರ್ಭಿಣಿ ಎರಡು ಗಂಟೆ ಸಮಯ ಮಾರ್ಗ ಮಧ್ಯೆ ನರಳಾಡಿದ್ದಾರೆ.

ಇದನ್ನೂ ಓದಿ:   ಸ್ಯಾಂಡಲ್ ​ವುಡ್ ಸ್ಟಾರ್ಸ್, ಕ್ರಿಕೆಟರ್ಸ್ ಜೊತೆ ಮೋದಿ ಡಿನ್ನರ್ – ಔತಣಕೂಟದ ಹಿಂದಿದ್ಯಾ ಚುನಾವಣಾ ತಂತ್ರ..!?

ಬಾಳೆಹೊನ್ನೂರು ಸಮೀಪದ ಮಾಗುಂಡಿಯ 26 ವರ್ಷದ ಗರ್ಭಿಣಿಯನ್ನು ಹೆರಿಗೆಗೆಂದು ಕೊಪ್ಪದ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಕಳಸ ಟು ಬಾಳೆಹೊನ್ನೂರು ಸಮೀಪದ ಹಳುವಳ್ಳಿ ಬಳಿ ಗುಂಡಿಬಿದ್ದ ರಸ್ತೆಯಲ್ಲಿ ಇಳಿದ ಆಂಬ್ಯುಲೆನ್ಸ್ ಮೇಲಕ್ಕೆ ಹತ್ತಿಲ್ಲ. ಗುಂಡಿಗೆ ಇಳಿದ ರಭಸಕ್ಕೆ ವಾಹನದ ಆಕ್ಸೆಲ್ ರಾಡ್ ತುಂಡಾಗಿದೆ. ದುರಸ್ತಿಗಾಗಿ ಆಂಬ್ಯುಲೆನ್ಸ್ ಅನ್ನು ಕಳಸಕ್ಕೆ ಎಳೆದು ತಂದು ತಕ್ಕ ಮಟ್ಟಿಗೆ ರಿಪೇರಿ ಮಾಡಿಸಿಕೊಂಡು ಮತ್ತೆ ಪ್ರಯಾಣ ಆರಂಭಿಸುವಷ್ಟರಲ್ಲಿ ಒಂದು ಗಂಟೆ ಕಳೆದಿದೆ. ರಿಪೇರಿಯಾದ ವಾಹನ ಸ್ವಲ್ಪ ದೂರ ಸಾಗುತ್ತಿದ್ದಂತೆ ಮತ್ತೆ ಕೆಟ್ಟುನಿಂತಿದೆ. ಕೊನೆಗೆ ಗರ್ಭಿಣಿಯನ್ನು ಬಾಳೆಹೊನ್ನೂರಿನಲ್ಲಿ ಮತ್ತೊಂದು ಆಂಬ್ಯುಲೆನ್ಸ್  ಕರೆಸಿ ಕೊಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತಕ್ಷಣ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ನೋವಲ್ಲಿ ಸಾಕಷ್ಟು ನರಳಾಡಿದ ಮಹಿಳೆ, ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈಗ ತಾಯಿ ಮಗು ಆರೋಗ್ಯವಾಗಿದ್ದಾರೆ. ಆದರೆ, ಗರ್ಭಿಣಿ ಆಸ್ಪತ್ರೆ ಸೇರಲು ಇನ್ನೂ ವಿಳಂಬವಾಗಿದ್ದರೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಇಂದಿಗೂ ಸಂಪರ್ಕ ರಸ್ತೆಗಳಿಲ್ಲ. ಇನ್ನೂ ಗುಂಡಿಮಯ ರಸ್ತೆಯಲ್ಲಿ ಜನ ಜೀವ ಪಣಕ್ಕಿಟ್ಟು ಸಂಚರಿಸುತ್ತಿದ್ದಾರೆ. ಅದಕ್ಕೆ ಈ ಪ್ರಕರಣವೇ ಸಾಕ್ಷಿ. ಆದರೆ, ಜನಪ್ರತಿನಿಧಿಗಳು ಮಾತ್ರ ನಾವು ಹಾಗೆ ಮಾಡಿದ್ದೀವಿ. ಹೀಗೆ ಮಾಡಿದ್ದೀವಿ ಅಂತಾ ಮತ್ತೊಂದು ಚುನಾವಣೆಗೆ ಸಜ್ಜಾಗಿದ್ದಾರೆ.

suddiyaana