ವರದಕ್ಷಿಣೆ ಕಿರುಕುಳಕ್ಕೆ ಹೋಯ್ತು ಸ್ಟಾಫ್ ನರ್ಸ್ ಪ್ರಾಣ – ಆತ್ಮಹತ್ಯೆಗೆ ಯತ್ನಿಸಿದ್ದ 4 ತಿಂಗಳ ಗರ್ಭಿಣಿ ಸಾ*ವು

ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ 4 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ವೇತಾ(30) ಮೃತಳಾಗಿದ್ದು, ಮಾ.29ರಂದು ಹೊಡಬಟ್ಟೆಯಲ್ಲಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಪೋಷಕರು ಮಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೀಗ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧದಿಂದ ಪಾಪರ್ ಆದ ಪಾಕ್ – ಪೆಟ್ರೋಲ್ ,ಡೀಸೆಲ್ ದರ ದಾಖಲೆ ಮಟ್ಟದಲ್ಲಿ ಏರಿಕೆ!
ಸ್ಟಾಫ್ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಶ್ವೇತಾ ಅತ್ತೆ ಮತ್ತು ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಘಟನೆ ಸಂಬಂಧ ಸೊರಬ ಠಾಣೆಗೆ ದೂರು ಕೂಡ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್, ದಿವ್ಯಾ ಬಂಧಿತ ಆರೋಪಿಗಳಾಗಿದ್ದಾರೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶ್ವೇತಾ ಪೋಷಕರ ಆಗ್ರಹಿಸಿದ್ದು ತನಿಖೆ ಮುಂದುವರಿದಿದೆ.
ಇನ್ನು ಮಗಳ ಸಾವಿಗೆ ಶ್ವೇತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ನಮ್ಮ ಮಗಳು ಸಾಯುವಂತಹ ಹೇಡಿಯಲ್ಲ. ಮನೆಯ ಜಾಗದ ವಿಚಾರಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದರು. ಹಿರಿಯ ಮಗ ಹೇಮಂತ್ ಮತ್ತು ಸೊಸೆ ದಿವ್ಯಾ ಮೇಲಿನ ಪ್ರೀತಿಗೆ ಹೀಗೆ ಮಾಡಿದ್ದಾರೆ. ಆಕೆಯ ಜೊತೆ ಜಗಳವಾಡಿ ಮನೆಬಿಟ್ಟು ಹೋಗುವಂತೆ ಚಿತ್ರಹಿಂಸೆ ನೀಡಿದ್ದರು. ಈಗ ಅವರೇ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಶ್ವೇತಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಗಳ ಶವದ ಮುಂದೆ ಆಕ್ರಂದನ ವ್ಯಕ್ತಪಡಿಸಿರುವ ಪೋಷಕರು ಗರ್ಭಿಣಿ ಮಗಳ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿದ್ದಾರೆ.

ನೋಡಿರಿ

