ಹೃದಯಾಘಾತವಾಗಿ ಗರ್ಭಿಣಿ ಸಾವು – ಮಗಳ ಆಸೆಯಂತೆ ಆನೆಯನ್ನು ದತ್ತು ಪಡೆದ ತಂದೆ!

ಹೃದಯಾಘಾತವಾಗಿ ಗರ್ಭಿಣಿ ಸಾವು – ಮಗಳ ಆಸೆಯಂತೆ ಆನೆಯನ್ನು ದತ್ತು ಪಡೆದ ತಂದೆ!

ಮಂಡ್ಯ: ಪ್ರಾಣಿ ಪ್ರಿಯರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ತಮಗಿಷ್ಟವಾದ ಪ್ರಾಣಿಗಳನ್ನು ತಂದು ಮನೆಯಲ್ಲಿ ಸಾಕುತ್ತಾರೆ. ಕಾಳೇನಹಳ್ಳಿ ಗ್ರಾಮದ ಪೌನಿತಾಗೆ ಚಿಕ್ಕಂದಿನಿಂದಲೂ ಆನೆ ಎಂದರೆ ಬಲು ಇಷ್ಟ. ತಾನು ಆನೆಯನ್ನು ತಂದು ಸಾಕಬೇಕು ಅಂತಾ ಬಹುವರ್ಷಗಳ ಕನಸು. ಬೆಳೆದು ದೊಡ್ಡವರಾಗಿ ಮದುವೆಯಾದ ಮೇಲೂ ಆಕೆಗೆ ಆನೆಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಆದ್ರೆ ಆಕೆ ಬದುಕಿದ್ದಾಗ ಆ ಕನಸು ನನಸಾಗಲೇ ಇಲ್ಲ. ಇದೀಗ ಪೌನಿತಾ ತಂದೆ ಹಾಗೂ ಆಕೆಯ ಪತಿ ಅವಳ ಕನಸು ನನಸು ಮಾಡಿದ್ದಾರೆ.

ಹೌದು, ಪೌನಿತಾ ಅವರು ನಿಧನರಾಗಿ 2 ತಿಂಗಳಾಗಿದೆ. ಅವರ 29ನೇ ಜನ್ಮದಿನದ ಅಂಗವಾಗಿ ತಂದೆ ವೆಂಕಟೇಶ್, ಪತಿ ಅಮಿತ್‌ ಗೌಡ ಅವರು ಮೈಸೂರು ಮೃಗಾಲಯದಲ್ಲಿ ‘ಚಾಮುಂಡಿ’ ಹೆಸರಿನ ಆನೆಯೊಂದನ್ನು ದತ್ತು ಪಡೆದು ಪೌನಿತಾರಿಗೆ ಉಡುಗೊರೆ ನೀಡಿದ್ದಾರೆ. ಈ ಮೂಲಕ ತಂದೆ, ಪತಿ ‘ಚಾಮುಂಡಿ’ ಮೂಲಕವೇ ಅವರ ನೆನಪುಗಳನ್ನು ಜೀವಂತವಾಗಿ ಇರಿಸಿಕೊಂಡಿದ್ದಾರೆ!

ಇದನ್ನೂ ಓದಿ: ಅನಾಥ ಆನೆಮರಿಯನ್ನ ಮಗುವಿನಂತೆ ಪೋಷಿಸುತ್ತಿದ್ದಾರೆ ಕಾವಾಡಿ ದಂಪತಿ – ಬಂಡೀಪುರದಲ್ಲೊಂದು ‘ದಿ ಎಲಿಫೆಂಟ್ ವಿಸ್ಪರರ್ಸ್’!

ಪೌನಿತಾ ಅವರು ಅರಣ್ಯ ಅಧ್ಯಯನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. 2000 ಅಕ್ಟೋಬರ್ 26ರಂದು ಪೌನಿತಾ ನಾಗಮಂಗಲ ತಾಲ್ಲೂಕು ಹೊನ್ನೇನಹಳ್ಳಿ ಗ್ರಾಮದ ಅಮಿತ್‌ಗೌಡ ಅವರ ಕೈ ಹಿಡಿದಿದ್ದರು. ವಲಯ ಅರಣ್ಯಾಧಿಕಾರಿಯಾಗಿದ್ದ ಅಮಿತ್‌ಗೌಡ ನಾಗರಹೊಳೆ ಅರಣ್ಯ ವಲಯದಲ್ಲಿ ಕೆಲಸ ನಿರ್ವಹಿಸಿ ಈಚೆಗೆ ಅರಸೀಕೆರೆಗೆ ವರ್ಗಾವಣೆಗೊಂಡಿದ್ದರು. ಆನೆ ಎಂದರೆ ಪೌನಿತಾಗೆ ಎಲ್ಲಿಲ್ಲದ ಪ್ರೀತಿ. ಆನೆಯನ್ನ ಇಷ್ಟ ಪಡುತ್ತಿದ್ದ ಆಕೆಗೆ ಅರಣ್ಯಾಧಿಕಾರಿಯನ್ನು ಮದುವೆಯಾಗಿದ್ದು ಸಂತಸ ತಂದಿತ್ತು. ಸುಖಸಂಸಾರ ಕಂಡಿದ್ದ ಪೌನಿತಾ- ಅಮಿತ್ ಜೋಡಿ ಮಗುವಿನ ನಿರೀಕ್ಷೆಯಲ್ಲಿದ್ದರು. ಪೌನಿತಾ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದರು. ಕುಟುಂಬದಲ್ಲಿ ಸಂತಸ ನೆಲೆಸಿತ್ತು, ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮೇ 19ರ ರಾತ್ರಿ ತಂದೆಯ ಜೊತೆ ಮಾತನಾಡಿ ಬೆಳಿಗ್ಗೆ ತವರಿಗೆ ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಮೇ 20ರಂದು ಅವರು ಹಾಸಿಗೆಯಿಂದ ಮೇಲೆ ಏಳಲೇ ಇಲ್ಲ.

ಕಳೆದ ಮೇ 20ರಂದು ಮುಂಜಾನೆ ವಿಹಾರಕ್ಕೆ ತೆರಳಿದ್ದ ಅಮಿತ್ ವಾಪಸ್ ಬಂದಾಗ ಪೌನಿತಾ ಹಾಸಿಗೆಯಲ್ಲೇ ಪ್ರಜ್ಞೆತ ಪ್ಪಿದ್ದರು. ಪತಿ ಕೂಡಲೇ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ಹೃದಯಾಘಾತದಿಂದಾಗಿ ಪೌನಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕಳೆದೆರಡು ತಿಂಗಳುಗಳಿಂದಲೂ ಪೌನಿತಾ ಸಾವಿನಿಂದ ಕಂಗಾಲಾಗಿದ್ದ ವೆಂಕಟೇಶ್, ಅಮಿತ್ ಗೌಡ ಅವರು ಪೌನಿತಾ ನೆನಪುಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಲು ನಿರ್ಧರಿಸಿದರು. ಮೊದಲ ಹಂತವಾಗಿ ಈಚೆಗೆ ಮೈಸೂರು ಮೃಗಾಲಯದಲ್ಲಿ ‘ಚಾಮುಂಡಿ’ ಮರಿಯಾನೆಯನ್ನು ದತ್ತು ಪಡೆದಿದ್ದಾರೆ. ಪೌನಿತಾ ಜನ್ಮದಿನದ ಅಂಗವಾಗಿ ವರ್ಷದ ಅವಧಿಗೆ ಆನೆ ದತ್ತು ಪಡೆದಿದ್ದು ಮುಂದೆ ಪ್ರತಿವರ್ಷ ಬೇರೆ ಬೇರೆ ಸಾಮಾಜಿಕ ಸೇವೆ ಮಾಡಲು ನಿರ್ಧರಿಸಿದ್ದಾರೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಈಚೆಗೆ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆನೆ ದತ್ತು ಒಪ್ಪಂದ ಪತ್ರವನ್ನು ವೆಂಕಟೇಶ್, ಅಮಿತ್‌ ಅವರಿಗೆ ಹಸ್ತಾಂತರಿಸಿದರು. ಗರ್ಭಿಣಿಯ ಸಾವಿನ ಸುದ್ದಿ ಕೇಳಿ ಸಚಿವರೂ ಭಾವುಕರಾದರು, ಆನೆ ದತ್ತುಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

‘ಚಾಮುಂಡಿ ಆನೆ ನೋಡುತ್ತಿದ್ದರೆ ಮಗಳೇ ನೆನಪಾಗುತ್ತಾಳೆ. ಪುಟಾಣಿ ಆನೆ ಕರೆದರೆ ಹತ್ತಿರ ಬರುತ್ತದೆ, ಮಗಳೇ ಬಂದಂತಾಗುತ್ತದೆ. ಅಳಿಯ ಅಮಿತ್ ಪತ್ನಿ ಸಾವಿನಿಂದ ಇನ್ನೂ ಹೊರಬಂದಿಲ್ಲ. ಅವಳ ನೆನಪುಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಆನೆ ದತ್ತು ಪಡೆದಿದ್ದೇವೆ’ ಎಂದು ಪೌನಿತಾ ತಂದೆ ವೆಂಕಟೇಶ್ ತಿಳಿಸಿದರು.

suddiyaana