ಗಂಡು ಮಗು ಆಗದಿದ್ದಕ್ಕೆ ಹೆಂಡತಿ ಜೊತೆ 3 ಹೆಣ್ಣು ಮಕ್ಕಳನ್ನ ಕೊಂದ ಪಾಪಿ

ಗಂಡು ಮಗುವಿನ ವ್ಯಾಮೋಹಕ್ಕೆ ಬಿದ್ದ ವ್ಯಕ್ತಿಯೊಬ್ಬ, ತನ್ನ ಎರಡು ತಿಂಗಳ ಗರ್ಭಿಣಿ ಪತ್ನಿ ಮತ್ತು ಮೂವರು ಪುಟ್ಟ ಹೆಣ್ಣು ಮಕ್ಕಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ದೆಹಲಿಲ್ಲಿ ನಡೆದಿದೆ. ಮೃತರನ್ನು 27 ವರ್ಷದ ಅನಿತಾ ಮತ್ತು ಅವರ ಐದು ವರ್ಷದೊಳಗಿನ ಮೂವರು ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕನು ಹರಿತವಾದ ಆಯುಧದಿಂದ ನಾಲ್ವರ ಗಂಟಲನ್ನು ಸೀಳಿದ್ದನು. ಗಾಯಗಳು ಎಷ್ಟೊಂದು ಆಳವಾಗಿದ್ದವೆಂದರೆ, ಅವರ ಶ್ವಾಸನಾಳಗಳೇ ಸಂಪೂರ್ಣವಾಗಿ ಕತ್ತರಿಸಿ ಹೋಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನಾ ಸ್ಥಳದ ಭೀಕರತೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್, ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹ*ತ್ಯೆಗೆ ಶರಣಾದ ವಿದ್ಯಾರ್ಥಿ! – ಡೆಟ್ನೋಟ್ನಲ್ಲಿ ಶಾಕಿಂಗ್ ವಿಚಾರ!
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮುಂಚುನ್ ಕೆವತ್ ಎಂಬಾತನೇ ಈ ಕೃತ್ಯದ ಹಿಂದಿರುವ ಪ್ರಮುಖ ಶಂಕಿತ. ದಂಪತಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದು, ಈಗ ಪತ್ನಿ ನಾಲ್ಕನೇ ಬಾರಿ ಗರ್ಭಿಣಿಯಾಗಿದ್ದರು. ಆರೋಪಿಗೆ ತನಗೆ ಗಂಡು ಮಗುವಿಲ್ಲದ ಅತೃಪ್ತಿ ಮತ್ತು ಗಂಡು ಮಗುವೇ ಬೇಕೆಂಬ ಹಠವೇ ಈ ಬರ್ಬರ ಹತ್ಯೆಗೆ ಪ್ರಚೋದನೆ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆ ಮಾಡುವ ಮೊದಲು ಆರೋಪಿಯು ಪತ್ನಿ ಮತ್ತು ಮಕ್ಕಳಿಗೆ ಅಮಲು ಪದಾರ್ಥ ನೀಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಮೂಲತಃ ಬಿಹಾರದ ಪಾಟ್ನಾ ಜಿಲ್ಲೆಯವರಾದ ಈ ಕುಟುಂಬ, ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿತ್ತು. ಆರೋಪಿ ಕೆವತ್ ಆಜಾದ್ಪುರ ಮಂಡಿಯಲ್ಲಿ ತರಕಾರಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದನು. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಹತ್ತಾರು ತಂಡಗಳನ್ನು ರಚಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ನೋಡಿರಿ

