2,500 ಬಗೆ ಊಟ.. ಕುಬೇರರ ಸಮಾಗಮ – ಮಗನಿಗಾಗಿ ದೇವಲೋಕ ಧರೆಗಿಳಿಸಿದ ಅಂಬಾನಿ
ಅಬ್ಬಬ್ಬಾ.. ಇದು ₹1,000 ಕೋಟಿಯ ಕಲ್ಯಾಣ

2,500 ಬಗೆ ಊಟ.. ಕುಬೇರರ ಸಮಾಗಮ – ಮಗನಿಗಾಗಿ ದೇವಲೋಕ ಧರೆಗಿಳಿಸಿದ ಅಂಬಾನಿಅಬ್ಬಬ್ಬಾ.. ಇದು ₹1,000 ಕೋಟಿಯ ಕಲ್ಯಾಣ

ಕೋಟಿಗಳಿಗೆ ಲೆಕ್ಕವಿಲ್ಲ. ಶ್ರೀಮಂತಿಕೆಗೆ ಬರವಿಲ್ಲ. ಸಾಕ್ಷಾತ್ ಧನಲಕ್ಷ್ಮೀಯೇ ತಾಂಡವವಾಡುತ್ತಿರುವ ಮನೆಯಲ್ಲಿ ಈಗ ದೇವಲೋಕವೂ ನಾಚುವಂಥ ಕಲ್ಯಾಣೋತ್ಸವ ನಡೀತಿದೆ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಟಾಪ್​ನಲ್ಲಿರುವ ಮುಕೇಶ್ ಅಂಬಾನಿಯವ್ರ ಕಿರಿಯ ಪುತ್ರನ ಮದುವೆ ಸ್ವರ್ಗಕ್ಕೇ ಕಿಚ್ಚು ಹಚ್ಚುವಂತೆ ಸಿದ್ಧವಾಗ್ತಿದೆ. ದೇಶ, ವಿದೇಶಗಳ ಕುಬೇರರು, ಸಿನಿಮಾ, ಕ್ರೀಡೆ, ರಾಜಕೀಯ ಕ್ಷೇತ್ರಗಳ ಘಟಾನುಘಟಿಗಳೇ ಸಾಕ್ಷಿಯಾಗಿದ್ದಾರೆ. ಆದ್ರೆ ಇದು ಮದುವೆ ಅಲ್ಲ.. ಮದುವೆಪೂರ್ವದ ಕಾರ್ಯಕ್ರಮಗಳು. ಸಾವಿರ ಕೋಟಿ ವೆಚ್ಚದಲ್ಲಿ ನಡೆಯುತ್ತಿರೋ ಈ ವೈಭವೋಪೇತ ಸಂಭ್ರಮದ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಫಿಟ್ ಬಾಡಿ.. ಹಳೇ ಹೇರ್‌ಸ್ಟೈಲ್ – ಉದ್ದ ಕೂದಲಿನಲ್ಲಿ ಧೋನಿ ಸ್ಟೈಲಿಶ್ ಲುಕ್, ಮಹಿ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ 28 ವರ್ಷದ ಅನಂತ್ ಅಂಬಾನಿ ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ 29 ವರ್ಷದ ರಾಧಿಕಾ ಮರ್ಚೆಂಟ್ ಅವರ ವಿವಾಹ ದೇವಲೋಕದ ವೈಭವವನ್ನೇ ಧರೆಗಿಳಿಸಿದೆ. ಅನಂತ್ ಹಾಗೂ ರಾಧಿಕಾ ಮದುವೆ ಜುಲೈನಲ್ಲಿ ನಡೆಸಲು ದಿನಾಂಕ ನಿಗಧಿಯಾಗಿದೆ. ಆದ್ರೀಗ ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ವಿವಾಹ ಪೂರ್ವ ಸಮಾರಂಭ ನಡೆಯುತ್ತಿದೆ. ಮಾರ್ಚ್ 1 ರಿಂದ 3 ರವರೆಗೆ ನಡೆಯುತ್ತಿರುವ ಈ ಕಾರ್ಯಕ್ರಮ ಕಂಡು ಕೇಳರಿಯದಂತಹ ಇತಿಹಾಸ ಸೃಷ್ಟಿಸುತ್ತಿದೆ.  ಒಂದಲ್ಲ.. ಎರಡಲ್ಲ.. ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಇವೆಂಟ್ ಜಗತ್ತಿನ ಕುಬೇರರೂ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ. ಕಳೆದ ವರ್ಷ ಮುಖೇಶ್ ಅಂಬಾನಿಯವ್ರ ಕಿರಿಯ ಪುತ್ರ ಅನಂತ್ ಅಂಬಾನಿಯ ಎಂಗೇಜ್‌ಮೆಂಟ್ ನಡೆದಿತ್ತು. ಎಂಗೇಜ್‌ಮೆಂಟ್ ವೈಭವ ನೋಡಿಯೇ ದೇಶ, ವಿದೇಶಗಳ ಜನ ಹುಬ್ಬೇರಿಸಿದ್ದರು. ಇದೀಓಗ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಅದನ್ನೂ ಮೀರಿಸಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಮುಖೇಶ್ ಅಂಬಾನಿ ಕುಟುಂಬದ ಫಾರ್ಮ್‌ ಹೌಸ್ ಇದೆ. ಅದೇ ಫಾರ್ಮ್‌ಹೌಸ್‌ನಲ್ಲಿ ವೈಭವೋಪೇತ ಕಾರ್ಯಕ್ರಮಗಳು ನಡೆಯುತ್ತಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆಗೆ ದೇಶ, ವಿದೇಶಗಳ ಗಣ್ಯಾತಿಗಣ್ಯರೇ ಬಂದಿದ್ದಾರೆ. ಅನಂತ್ ಅಂಬಾನಿ ಮದುವೆಗಾಗಿಯೇ ಗುಜರಾತ್​ನ ಜಾಮ್ ನಗರದಲ್ಲಿ 14 ಹೊಸ ದೇಗುಲಗಳನ್ನ ನಿರ್ಮಾಣ ಮಾಡಲಾಗಿದೆ. ಸ್ವತಃ ನೀತಾ ಅಂಬಾನಿಯೇ ಮುಂದೆ ನಿಂತು ದೇಗುಲದ ಕೆಲಸಗಳನ್ನ ಮಾಡಿಸಿದ್ದಾರೆ. ಇನ್ನು ದೊಡ್ಡವರ ಮನೆ ಮದುವೆ ಅಂದ್ರೆ ಊಟದ ವಿಚಾರ ಕೇಳೋದೇ ಬೇಡ.. ವೆಜ್​. ನಾನ್ ವೆಜ್​, ತಿಂಡಿ ಸೇರಿ ಬರೋಬ್ಬರಿ 2,500 ಬಗೆಯ ಆಹಾರ ಪದಾರ್ಥಗಳನ್ನ ಸಿದ್ಧಪಡಿಸಲಾಗಿದೆ. ಮದುವೆಗಾಗಿ 25ಕ್ಕೂ ಹೆಚ್ಚು ಬಾಣಸಿಗರು ಕೆಲಸ ಮಾಡ್ತಿದ್ದಾರೆ. ಪಾರ್ಸಿ, ಥಾಯ್, ಮೆಕ್ಸಿಕನ್​, ಜಪಾನೀಸ್, ಫ್ಯಾನ್ ಏಷ್ಯನ್​ ಭಕ್ಷ್ಯಗಳು ಅತಿಥಿಗಳ ಬಾಯಿ ತಣಿಸುತ್ತಿವೆ. ಬೆಳಗಿನ ಉಪಹಾರಕ್ಕೆ 70 ಬಗೆ, ಊಟಕ್ಕೆ 250 ಬಗೆ ಹಾಗೂ ಡಿನ್ನರ್​ಗೂ 250 ಬಗೆಯ ಖಾದ್ಯಗಳನ್ನ ಮಾಡಿಸಲಾಗಿದೆ. ಮೂರು ದಿನಗಳ ಸಂಭ್ರಮದಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೋರ್ಗಾನ್ ಸ್ಟಾನ್ಲಿ ಸಿಇಒ ಟೆಡ್ ಪಿಕ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ಹಾಗೇ ಹಾಲಿವುಡ್, ಬಾಲಿವುಡ್, ಕ್ರಿಕೆಟ್ ಸ್ಟಾರ್ಸ್  ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗೆ ಬಂದಿರುವ ಗಣ್ಯರಿಗೆ ಉಳಿದುಕೊಳ್ಳಲು ಜಾಮ್‌ನಗರದಲ್ಲಿ ಹೆಚ್ಚಿನ ವ್ಯವಸ್ಥೆಗಳಿಲ್ಲ. ಹೀಗಾಗಿ ಗಣ್ಯರಿಗೆ ತಂಗಲು ಐಷಾರಾಮಿ ಟೆಂಟ್‌ಗಳನ್ನು ನಿರ್ಮಾಣ ಮಾಡಲಿದೆ. ಅದ್ರಲ್ಲಿ ಐಷಾರಾಮಿ ಬಾತ್‌ರೂಮ್‌ಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ದೆಹಲಿ ಹಾಗೂ ಮುಂಬೈನಿಂದ ಬರುವ ಗಣ್ಯರಿಗೆ ಜಾಮ್‌ನಗರಕ್ಕೆ ಬರಲು ವಿಮಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿನಿತ್ಯ ಒಂದು ಅಥವಾ ಎರಡು ಸಲ ವಿಮಾನ ಲ್ಯಾಂಡಿಂಗ್ ಆಗುವ ಜಾಮ್‌ನಗರ ವಿಮಾನನಿಲ್ದಾಣದಲ್ಲಿ ಮಾರ್ಚ್ 1ರಂದು ಬರೋಬ್ಬರಿ 50ಕ್ಕೂ ಹೆಚ್ಚು ವಿಮಾನಗಳು ಲ್ಯಾಂಡ್‌ ಆಗಿವೆ ಅಂದ್ರೆ ಅದರ ವೈಭವವನ್ನ ನೀವೇ ಊಹಿಸಿಕೊಳ್ಳಿ.  ಗಣ್ಯರ ಅನುಕೂಲಕ್ಕಾಗಿ ಬಿಎಂಡಬ್ಲ್ಯೂ, ರೋಲ್ಸ್ ರಾಯ್ಸ್ ನಂತಹ ದುಬಾರಿ ಕಾರುಗಳ ವ್ಯವಸ್ಥೆ ಮಾಡಲಾಗಿದೆ. ಅನಂತ್ ಅಂಬಾನಿಯ ಮದುವೆಯನ್ನು ಇಷ್ಟೊಂದು ಬೈಭವಯುತವಾಗಿ ಮಾಡೋಕೆ ಕಾರಣವೂ ಇದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮೂವರು ಮಕ್ಕಳಲ್ಲಿ ಹಿರಿ ಮಗ ಆಕಾಶ್ ಹಾಗೂ ಪುತ್ರಿ ಇಶಾ ಮದ್ವೆ ಈಗಾಗಲೇ ಮುಗಿದಿದೆ. ಈ ಮನೆಯಲ್ಲಿ ನಡೆಯುವ ಕೊನೆ ಮದ್ವೆ ಅಂದ್ರೆ ಕಿರಿಯ ಮಗ ಅನಂತ್ ಅಂಬಾನಿಯದ್ದಾಗಿದೆ. ಹೀಗಾಗಿ ಹಿಂದೆಂದಿಗಿಂತಲೂ ಬಹಳ ಅದ್ದೂರಿಯಾಗಿ ಈ ಮದ್ವೆ ನಡೆಸಲು ಕುಟುಂಬ ಪ್ಲಾನ್ ಮಾಡಿದೆ. ಸ್ವರ್ಗಕ್ಕೇ ಕಿಚ್ಚು ಹಚ್ಚುವಂತೆ ಈವರೆಗೂ ಯಾರೂ ಮಾಡಿರದ, ಬಹುಶಃ ಮುಂದೆ ಮಾಡಲಿಕ್ಕೂ ಸಾಧ್ಯವಿಲ್ಲವೇನೋ ಎನ್ನುವಂತಹ ಅದ್ಧೂರಿತನವಿದೆ. ಒಟ್ಟಿನಲ್ಲಿ ‘ಕಾಸಿದ್ರೆ ಕೈಲಾಸ’ ಎಂಬ ಮಾತನ್ನ ಅಕ್ಷರಶಃ ನಿಜವಾಗಿಸಿರುವ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ, ತಮ್ಮ ಮಗನ ಮದುವೆಗೆ ಐಷಾರಾಮಿಯ ಮೆರಗು ನೀಡಿದ್ದಾರೆ. ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಪ್ರೀವೆಡ್ಡಿಂಗ್ ಕಾರ್ಯಕ್ರಮವೇ ಇಷ್ಟೊಂದು ರಿಚ್ ಆಗಿ  ನಡೆಯುತ್ತಿದ್ದು, ಜುಲೈನಲ್ಲಿ ನಡೆಯಲಿರುವ ಮದುವೆ ಇನ್ನೂ ಅದೆಷ್ಟು ವೈಭವವಾಗಿರುತ್ತೆ ಅನ್ನೋದನ್ನ ನೋಡಲು ಇಡೀ ಜಗತ್ತೇ ಕಾಯುತ್ತಿದೆ.

Sulekha