ರಾಜಕೀಯ ತಿರುವು ಪಡೆದ ಪ್ರವೀಣ್ ಹತ್ಯೆ ಕೇಸ್ – ಹಂತಕರ ವಿರುದ್ಧ ಬಿಜೆಪಿ ನಾಯಕರ ಗುಡುಗು!

ರಾಜಕೀಯ ತಿರುವು ಪಡೆದ ಪ್ರವೀಣ್ ಹತ್ಯೆ ಕೇಸ್ – ಹಂತಕರ ವಿರುದ್ಧ ಬಿಜೆಪಿ ನಾಯಕರ ಗುಡುಗು!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಈಗಾಗಲೇ ನಾಮಿನೇಷನ್ ಜಾತ್ರೆ ನಡೆಯುತ್ತಿದ್ದು ಪ್ರಚಾರದ ಅಬ್ಬರವೂ ಜೋರಾಗಿದೆ. ಒಂದ್ಕಡೆ ರಾಜಕೀಯ ಕಣ ರಂಗೇರುತ್ತಿದ್ರೆ ಮತ್ತೊಂದೆಡೆ  ಧಾರವಾಡದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕಮ್ಮಾರ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಪ್ರವೀಣ ಕಮ್ಮಾರ ಕೊಂದು ಪರಾರಿಯಾಗಿದ್ದಾರೆ. ಈ ಹತ್ಯೆ ರಾಜಕೀಯ ತಿರುವು ಪಡೆದುಕೊಂಡಿದೆ.

ತಡ ರಾತ್ರಿ ಪ್ರವೀಣ ಅವರ ಹೊಟ್ಟೆಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾಜಕೀಯ ವಿಷಯವಾಗಿಯೇ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರವೀಣ ಕಮ್ಮಾರ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ. ನಿನ್ನೆ ತಾನೇ ಅಮೃತ ದೇಸಾಯಿ ಅವರ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲೂ ಭಾಗಿಯಾಗಿದ್ದ. ಆದರೆ, ಅದೇ ದಿನ ರಾತ್ರಿ ಕೋಟೂರಿನಲ್ಲಿ ನಡೆದ ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಕಮ್ಮಾರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ : ಅಪ್ಪನ ಅಂಬಾಸಿಡರ್ ಕಾರಿನಲ್ಲಿ ತೆರಳಿ ವಿಜಯೇಂದ್ರ ನಾಮಿನೇಷನ್ – ಬಿಎಸ್‌ವೈಗೆ ಈ ಕಾರು ಎಷ್ಟು ಲಕ್ಕಿ ಗೊತ್ತಾ?

BJYM ಧಾರವಾಡ ಘಟಕದ ಕಾರ್ಯನಿರ್ವಾಹಕ ಸದಸ್ಯ ಹಾಗೂ ಕೊಟ್ಟೂರು ಗ್ರಾಮ ಪಂಚಾಯತ್ ವಿಪಿ ಪ್ರವೀಣ್ ಕಮ್ಮಾರ್ ಅವರ ಹತ್ಯೆಯ ಸುದ್ದಿ ತೀವ್ರ ದುಃಖ ತರಿಸಿದೆ. ನಿನ್ನೆ ತಡರಾತ್ರಿ ಶಂಕಿತ ರಾಜಕೀಯ ವಿರೋಧಿಗಳು ಪ್ರವೀಣ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಂತಕರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸುತ್ತೇವೆ ಮತ್ತು ಅವರ ಸದ್ಗತಿಗಾಗಿ ಪ್ರಾರ್ಥಿಸುತ್ತೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಧಾರವಾಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕಮ್ಮಾರ್ ಹಂತಕರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಪ್ರವೀಣ ಕಮ್ಮಾರ ಮೃತದೇಹ ಇರಿಸಿದ್ದ ಎಸ್‌ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿದ್ರು. ಪ್ರವೀಣ ಕಮ್ಮಾರ ಬಿಜೆಪಿ ಮುಖಂಡರಾಗಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಿಜೆಪಿ ಯುವ ಮುಖಂಡನ ಅಂತಿಮ ದರ್ಶನ ಪಡೆದರು.

ಪ್ರವೀಣ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಪ್ರಹ್ಲಾದ್ ಜೋಶಿ ಸರಣಿ ಟ್ವೀಟ್ ಮೂಲಕ ಹಂತಕರ ವಿರುದ್ಧ ಕಿಡಿಕಾರಿದ್ದಾರೆ. ‘ಕೋಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಯುವಮೋರ್ಚಾ ಕಾರ್ಯಕಾರಣಿ ಸದಸ್ಯನಾಗಿ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರವೀಣ್ ಕಮ್ಮಾರ್ ಅವರ ಸಾವು ಮನಸ್ಸಿಗೆ ಆಘಾತ ಉಂಟುಮಾಡಿದೆ. ನಮ್ಮ ಕಾರ್ಯಕರ್ತರ ಸಾವಿಗೆ ಕಾರಣವಾದ ಹಂತಕರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತೃಪ್ತಿ ಪಡುವ ಅತೃಪ್ತ ಆತ್ಮಗಳನ್ನು ಸಮಾಜದ ಮುಂದೆ ಬೆತ್ತಲಾಗಿಸುವ ಕಾಲ ಸನ್ನಿಹಿತವಾಗಿದೆ. ಮೃತ ಪ್ರವೀಣನ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಇತ್ತ ಕೋಟೂರಿನಲ್ಲಿ ನೀರವ ಮೌನ ಆವರಿಸಿದ್ದು, ಯಾವುದೇ ಗಲಾಟೆಗಳು ಉಂಟಾಗದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಹತ್ಯೆ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದ್ದು, ತಂಡವನ್ನು ಕೂಡ ರಚನೆ ಮಾಡಲಾಗಿದೆ.

suddiyaana