ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯಬರಬಾರದು – ಪ್ರತಾಪ್ ಸಿಂಹ ಹೀಗೆ ಹೇಳಿದ್ದು ಯಾರಿಗೆ?

ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯಬರಬಾರದು –  ಪ್ರತಾಪ್ ಸಿಂಹ ಹೀಗೆ ಹೇಳಿದ್ದು ಯಾರಿಗೆ?

ಹ್ಯಾಟ್ರಿಕ್ ಗೆಲುವಿನ ಕನಸು ಕಾಣ್ತಿದ್ದ ಮೈಸೂರು ಸಂಸದ ಪ್ರತಾಪ ಸಿಂಹ ಅವರಿಗೆ ಬಿಜೆಪಿ ಹೈಕಮಾಂಡ್‌ ಶಾಕ್ ಕೊಟ್ಟಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ ಅಂತಾ ಹೇಳಲಾಗುತ್ತಿದೆ. ಈ ಕುರಿತು ಸೋಮವಾರ ಫೇಸ್‌ ಬುಕ್‌ ಲೈವ್‌ ಬಂದು ಭಾವುಕರಾಗಿ ಮಾತನಾಡಿದ್ದರು. ಆದರೆ ಇದೀಗ ಪ್ರತಾಪ್‌ ಸಿಂಹ ಸ್ವಪಕ್ಷದ ನಾಯಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸುಧಾಕರ್‌ ಒಬ್ಬ ಅಯೋಗ್ಯ.. ಡಬಲ್ ಗೇಮ್ ಆಡ್ತಿದ್ದಾನೆ.. – ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಪ್ರದೀಪ್‌ ಈಶ್ವರ್‌!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ ಪ್ರತಾಪ ಸಿಂಹ, ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ‌ವಿರುದ್ಧ ತೊಡೆ ತಟ್ಟಿದ ಏಕೈಕ ವ್ಯಕ್ತಿ ನಾನು. ಸಿದ್ದರಾಮಯ್ಯ ವಿರುದ್ಧ ಮಾತನಾಡಲು ನಮ್ಮ ನಾಯಕರಿಗೆ ತೊಡೆ ನಡುಗುತ್ತೆ. ಈ ಹಿಂದೆ ಬಿಜೆಪಿಯಿಂದ ಗೆದ್ದವರು ಪಕ್ಷವನ್ನು ಹೇಗೆ ಕಟ್ಟಿದ್ರು ಎಷ್ಟು ಜನರನ್ನು ಬೆಳೆಸಿದ್ದಾರೆ ಹೇಳಿ. ನಾನು ರಿಯಲ್ ಎಸ್ಟೇಟ್ ಮಾಡಲಿಲ್ಲ, ಕಮಿಷನ್ ಪಡೆದಿಲ್ಲ. ಬಟ್ಟಂಗಿಗಳನ್ನು ಕಟ್ಟಿಕೊಂಡು ಓಡಾಡಲಿಲ್ಲ. ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಲಿಲ್ಲ. ಅಭಿವೃದ್ಧಿ ಮಾತ್ರ ಮಾಡಿದ್ದೇನೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.

ಮೈಸೂರು-ಕೊಡಗು ಬಿಜೆಪಿಯ ಭದ್ರಕೋಟೆ. ಇವತ್ತು ನನಗೆ ಟಿಕೆಟ್ ಕೊಟ್ರೆ ಮೂರು ಲಕ್ಷ ಮತಗಳಿಂದ ಗೆಲ್ಲುತ್ತೇನೆ. ಆಲ್ ಪಾರ್ಟಿ ಮೆಂಬರ್ ನಾನು. ಒಳ್ಳೆಯ ಕೆಲಸ ಮಾಡಿದ್ದೇನೆ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ಅವಕಾಶ ಸಿಕ್ಕರೆ ಕೊಡಗಿನ ಜನರ ಋಣ ತೀರಿಸುತ್ತೇನೆ. ನಿಮ್ಮ ಮನೆ ಕಾಯುವವರಿಗೆ ಟಿಕೆಟ್ ಕೊಡಬೇಕೇ ಹೊರತು ನಾವು ಅವರ ಮನೆ ಕಾಯುವ ಸ್ಥಿತಿ ಬರಬಾರದು ಎಂದು ಹೇಳಿದ್ದಾರೆ.

ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ. ಯಾರು ತಲೆ ಕಡೆಸಿಕೊಳ್ಳಬೇಡಿ. ಗಟ್ಟಿ ಪಿಂಡ ನಾನು. ಯಾವ ಹಿನ್ನೆಲೆ ಇಲ್ಲದೆ ಇಲ್ಲಿ ತನಕ ಬಂದಿದ್ದೇನೆ. ನಾನು ಪಾರ್ಟಿಗೋಸ್ಕರ ಬಾವುಟ ಕಟ್ಟುತ್ತೇನೆ. ಕೈ ಮುಗಿದು ಬೇಡಿಕೊಳ್ಳುತ್ತೇನೆ ಲೀಡರ್‌ಗಳ ಹಿಂದೆ ಹೋಗಬೇಡಿ. ಪಕ್ಷದ ಜತೆ ಹೋಗಿ. ಅಪಪ್ರಚಾರ ಮಾಡಬೇಡಿ. ನಾನೇ ಆಗಲಿ ಮತ್ತೊಬ್ಬರೇ ಆಗಲಿ ಪಕ್ಷದ ಅಭ್ಯರ್ಥಿಯಲ್ಲಿ ಗೆಲ್ಲಿಸೋಣ. ಮುಂದಿನ ದಿನಗಳಲ್ಲಿ ಗಾಸಿಪ್‌ಗಳನ್ನು ಸೃಷ್ಟಿಸಬೇಡಿ. ನಾನು ಪಲಾನಯನ ವಾದಿಯಲ್ಲ. ನಿಮ್ಮ ಜತೆ ನಾನು ಸದಾ ಇರುತ್ತೇನೆ ಅಂತಾ ಪ್ರತಾಪ್‌ ಸಿಂಹ ಹೇಳಿದ್ದಾರೆ.

Shwetha M